ಕರ್ನಾಟಕ

ದೇಶಪಾಂಡೆ ದಂಪತಿ ಮೇಲೆ ಅರಣ್ಯ ಒತ್ತುವರಿ ಆರೋಪ: ಕುಮಾರಸ್ವಾಮಿ

Pinterest LinkedIn Tumblr

Des-HDKಬೆಂಗಳೂರು: ಕೋಟ್ಯಂತರ ರೂಪಾಯಿ ಬೆಲೆಬಾಳುವ ಐದು ಎಕರೆ ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡ ಆರೋಪ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರ ಕೊರಳಿಗೆ ಸುತ್ತಿಕೊಂಡಿದೆ. ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಿಂದ ಅವರಿಗೆ ನೋಟಿಸ್‌ ಕೂಡ ಜಾರಿಯಾಗಿದೆ.

‘ಬೆಂಗಳೂರಿನ ಜಕ್ಕೂರು ವಾಯುನೆಲೆ ಪಕ್ಕದ 177 ಎಕರೆ 28 ಗುಂಟೆ ಅರಣ್ಯ ಜಮೀನು ಒತ್ತುವರಿ ಆಗಿದೆ. ಒತ್ತುವರಿ ಮಾಡಿಕೊಂಡವರಲ್ಲಿ ರಾಧಾ ಮತ್ತು ಆರ್‌.ವಿ. ದೇಶಪಾಂಡೆ ಸೇರಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಅಲ್ಲದೆ, ಇದಕ್ಕೆ ಸಮರ್ಥನೆಯಾಗಿ ಕೆಲ ದಾಖಲೆಗಳನ್ನೂ ಬಿಡುಗಡೆ ಮಾಡಿದರು.

ಹೇಳಿದ್ದೇನು: ‘1940ರಲ್ಲಿ ಅಂದಿನ ಮೈಸೂರು ಸರ್ಕಾರ ಜಕ್ಕೂರು ವಾಯುನೆಲೆಗೆ 199 ಎಕರೆ 19 ಗುಂಟೆ ಜಮೀನು ನೀಡಿತ್ತು. ಇದಕ್ಕೆ ಹೊಂದಿಕೊಂಡಿರುವ 177 ಎಕರೆ 28 ಗುಂಟೆ ಅರಣ್ಯ ಭೂಮಿ ಎಂದು ಅಧಿಸೂಚನೆಯಲ್ಲಿ ಘೋಷಿಸಿತ್ತು’.

‘ಜಕ್ಕೂರು ಅಳ್ಳಾಳಸಂದ್ರ ರಕ್ಷಿತಾರಣ್ಯ ಪ್ರದೇಶವನ್ನು ಕೆಲವು ದುಷ್ಕರ್ಮಿಗಳು ಒತ್ತುವರಿ ಮಾಡಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಅರಣ್ಯ ಸಂರಕ್ಷಿಸಲು, ಕಂದಾಯ ದಾಖಲೆಗಳಲ್ಲಿ ನಮೂದಿಸಿ ಆದೇಶಿಸಬೇಕು ಎಂದು ಬೆಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಂದಾಯ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಅರಣ್ಯ ಜಮೀನು ಒತ್ತುವರಿ ಮಾಡಿದ್ದಕ್ಕೆ ನೋಟಿಸ್‌ ಪಡೆದವರಲ್ಲಿ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಕೂಡ ಸೇರಿವೆ. ಒತ್ತುವರಿ ಅರಣ್ಯ ಜಮೀನಿನಲ್ಲಿ ಕಟ್ಟಡಗಳು ಅಕ್ರಮವಾಗಿ ತಲೆ ಎತ್ತಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಜಮೀನು ಒತ್ತೆಯಿಟ್ಟು ಸಾಲ: ಜಕ್ಕೂರಿನ ಅರಣ್ಯ ಜಮೀನು ಅಡ ಇಟ್ಟು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕಿನಿಂದ (ಐಒಬಿ) ಮಂತ್ರಿ ಪ್ರಮೋಟರ್ಸ್‌  ಸಾಲ ಪಡೆದಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಮೂರು ಎಕರೆ ಅರಣ್ಯ ಜಮೀನನ್ನು ಕಂಪೆನಿಯು ಬ್ಯಾಂಕಿನ ಬೆಂಗಳೂರು ನಗರ ಶಾಖೆಯಲ್ಲಿ ಅಡ ಇಟ್ಟಿದೆ. ಆಗ ಜಮೀನಿನ ಬೆಲೆ ನೂರು ಕೋಟಿ ರೂಪಾಯಿ ಎಂದು ನಮೂದಿಸಲಾಗಿದೆ ಎಂದು ಹೇಳಿದರು.

‘2000ನೇ ಇಸವಿಯಿಂದಲೂ ಇಲ್ಲಿ ಒತ್ತುವರಿ ನಡೆದಿದೆ. ಈ ಒತ್ತುವರಿ ತೆರವು ಮಾಡಿಸಲು ನನ್ನೊಬ್ಬನಿಂದ ಆಗದು. ಈ ಬಗ್ಗೆ ಏನು ಮಾಡಬೇಕು ಎಂದು ಕೇಳಿ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ, ವಿವಿಧ ಸಂಘ–ಸಂಸ್ಥೆಗಳಿಗೆ ಪತ್ರ ಬರೆಯುವೆ’ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದ ಕೆಲವು ಸರ್ಕಾರಿ ವಕೀಲರು, ಭೂಗಳ್ಳರಿಂದ ಹಣ ಪಡೆದು ನ್ಯಾಯಾಲಯದಲ್ಲಿ ಸೂಕ್ತ ವಾದ ಮಂಡನೆ ಮಾಡುತ್ತಿಲ್ಲ. ಆದರೆ, ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಅನುಕೂಲ ಆಗುವಂತೆ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರು ದಾಖಲೆಗಳನ್ನು ಸಿದ್ಧಪಡಿಸಿದರೆ, ಅವರ ಬೆಂಬಲಕ್ಕೆ ನಿಲ್ಲುವೆ ಎಂದು ಹೇಳಿದರು.
*
‘ಒತ್ತುವರಿಯಲ್ಲ, ಖರೀದಿ’
ಬೆಂಗಳೂರು: ‘ಅರಣ್ಯ ಜಮೀನನ್ನು ಒಂದಿಂಚೂ ಒತ್ತುವರಿ ಮಾಡಿಲ್ಲ. ಜಕ್ಕೂರಿನ ಜಮೀನನ್ನು ನಿಯಮಾನುಸಾರ ಖರೀದಿಸಲಾಗಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ದೇಶಪಾಂಡೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

‘ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೆಲೆ ಕಳೆದುಕೊಂಡವರಿಗೆ ಮತ್ತು ಇತರರಿಗೆ ಈ ಜಮೀನನ್ನು 65 ವರ್ಷಗಳ ಹಿಂದೆ ಮಂಜೂರು ಮಾಡಲಾಗಿತ್ತು. ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಿದ ನಂತರ ಖರೀದಿಸಲಾಗಿದೆ’ ಎಂದು ದೇಶಪಾಂಡೆ ತಿಳಿಸಿದ್ದಾರೆ.

‘ಈ ಪ್ರದೇಶದಲ್ಲಿ ಸಾವಿರಾರು ಮನೆಗಳನ್ನು ಅನುಮತಿ ಪಡೆದೇ ನಿರ್ಮಿಸಲಾಗಿದೆ. ನಾನು ಅಥವಾ ನನ್ನ ಕುಟುಂಬದ ಸದಸ್ಯರು ಅರಣ್ಯ ಜಮೀನು ಒತ್ತುವರಿ ಮಾಡಿದ ಉದಾಹರಣೆ ಇದ್ದರೆ, ಅದನ್ನು ಕುಮಾರಸ್ವಾಮಿ ಸಾಬೀತುಪಡಿಸಬೇಕು’ ಎಂದು ಅವರು ಸವಾಲು ಹಾಕಿದ್ದಾರೆ.
*
₹14 ಸಾವಿರ ಕೋಟಿ ಮೌಲ್ಯ
ಬೆಂಗಳೂರು: ಒತ್ತುವರಿ ಜಮೀನಿನ ಮೌಲ್ಯ ₹ 2 ಸಾವಿರ ಕೋಟಿ ಎಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಆದರೆ, ಈ ಪ್ರದೇಶದ ಜಮೀನಿನ ಮಾರ್ಗಸೂಚಿ ದರವನ್ನು ಪ್ರತಿ ಚದರ ಅಡಿಗೆ ₹ 22 ಸಾವಿರಕ್ಕೆ ಏರಿಸಲು ಸರ್ಕಾರ ಮುಂದಾಗಿದೆ. ಹೊಸ ದರದ ಅನ್ವಯ ಲೆಕ್ಕ ಹಾಕಿದರೆ, 177 ಎಕರೆ ಜಮೀನಿನ ಮೌಲ್ಯ ₹ 14 ಸಾವಿರ ಕೋಟಿ ಆಗುತ್ತದೆ’ ಎಂದರು.
*

ರೈತರು ಮಾಡುವ ಎರಡು ಎಕರೆ ಜಮೀನು ಒತ್ತುವರಿಯನ್ನು ತೆರವು ಮಾಡುವ ಸಿದ್ದರಾಮಯ್ಯ ಸರ್ಕಾರಕ್ಕೆ, ಜಕ್ಕೂರಲ್ಲಿ ನಡೆದಿರುವ ಒತ್ತುವರಿ ತೆರವುಗೊಳಿಸುವ ಶಕ್ತಿ ಇದೆಯೇ?
– ಎಚ್‌.ಡಿ. ಕುಮಾರಸ್ವಾಮಿ
*
ಕುಮಾರಸ್ವಾಮಿ ಇಲ್ಲಸಲ್ಲದ ಆರೋಪಗಳ ಮೂಲಕ ಚಾರಿತ್ರ್ಯ ವಧೆಗೆ ಪ್ರಯತ್ನಿಸಿರುವುದು ದುರ್ದೈವ, ಖಂಡನಾರ್ಹ. ಆಧಾರ ಇಲ್ಲದೆ ಆರೋಪ ಮಾಡುವುದು ಶೋಭೆ ತರುವುದಿಲ್ಲ.
– ಆರ್‌.ವಿ. ದೇಶಪಾಂಡೆ

Write A Comment