ಕರ್ನಾಟಕ

ಹುಳಿಯಾರು: ಬಾಡಿಗೆ ಕಟ್ಟದ 6 ಮಳಿಗೆಗೆ ಬೀಗ ಜಡಿದ ಗ್ರಾಪಂ

Pinterest LinkedIn Tumblr

33BADIGEಹುಳಿಯಾರು, ಸೆ.16: ಗ್ರಾಪಂಗೆ ಸೇರಿದ ಬಸ್ ನಿಲ್ದಾಣದಲ್ಲಿನ 6 ಮಳಿಗೆಗಳ ಬಾಡಿಗೆಗಳನ್ನು 18 ವರ್ಷಗಳಿಂದ ಕಟ್ಟಿಲ್ಲವೆಂದು ಆರೋಪಿಸಿ ಗ್ರಾಪಂ ಸದಸ್ಯರು ಮಳಿಗೆಗಳಿಗೆ ಬೀಗ ಜಡಿದ ಘಟನೆ ಹುಳಿಯಾರಿನಲ್ಲಿ ಬುಧವಾರ ನಡೆದಿದೆ.
ಹುಳಿಯಾರು ಗ್ರಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮನೆ ಕಂದಾಯ ಮತ್ತು ಮಳಿಗೆಗಳ ಬಾಡಿಗೆ ವಸೂಲಾತಿ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಶಿವಣ್ಣ ಮತ್ತು ಇತರೆ ಸದಸ್ಯರು ಪಿಡಿಓಗೆ ಮನವಿ ಮಾಡಿದ್ದರು.

ಇದಕ್ಕೆ ಪ್ರಭಾರ ಪಿಡಿಒ ಅಡವೀಶ್‌ಕುಮಾರ್ ಕಂದಾಯ ವಸೂಲಾತಿ ಬಗ್ಗೆ ಮಾಹಿತಿ ವಿವರಿಸಿದರು. ಸದಸ್ಯ ಶಿವಣ್ಣ, ಹೇಮಂತ್ ಇತರೆ ಸದಸ್ಯರು ಗ್ರಾಪಂ ಮಳಿಗೆಗಳ ಬಾಡಿಗೆ ಬಗ್ಗೆ ಪ್ರಶ್ನಿಸಿದಾಗ. ಕಂದಾಯ ವಸೂಲಿಗಾರ ವೆಂಕಟೇಶ್ ಬಸ್ ನಿಲ್ದಾಣದಲ್ಲಿ 6 ಮಳಿಗೆಗಳಿಗೆ ಇದುವರೆಗೆ ಬಾಡಿಗೆಯನ್ನೇ ಕಟ್ಟಿಲ್ಲ ವೆಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಕ್ರೋಶಗೊಂಡ ಸದಸ್ಯರು ಕಳೆದ 18 ವರ್ಷದಿಂದ ಬಾಡಿಗೆ ಕಟ್ಟದಿದ್ದ ಮೇಲೆ ಆ ಮಳಿಗೆಗೆ ಬೀಗ ಜಡಿದು ಮರು ಹರಾಜು ಮಾಡಿ ಎಂದರು.
ತಕ್ಷಣ ಅಧ್ಯಕ್ಷರು, ಉಪಾಧ್ಯಕ್ಷರಾದಿಯಾಗಿ ಸಭೆಯಲ್ಲಿದ್ದ ಸದಸ್ಯರೆಲ್ಲ ಸಭೆಯನ್ನು ಮೊಟಕು ಗೊಳಿಸಿ ಬಸ್ ನಿಲ್ದಾಣದಲ್ಲಿನ ಮಳಿಗೆಗೆ ಬೀಗ ಜಡಿದರು. ಪ್ರತಿಯೊಬ್ಬ ಸದಸ್ಯರ ಗಮನಕ್ಕೆ ತಾರದೆ ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳದೆ ಈ 6 ಮಳಿಗೆಗಳ ಬೀಗ ತೆಗೆಯಕೂಡದು ಎಂದು ಪಿಡಿಒಗೆ ಎಚ್ಚರಿಕೆ ನೀಡಿದರು.
ಅನಂತರ ನಡೆದ ಸಭೆಯಲ್ಲಿ ಸದಸ್ಯ ಕುಮಾರ್ ಮಾತನಾಡಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗಾಗಿ ಇರುವ ಎರಡು ತಂಗುದಾಣದ ಕೊಠಡಿಗಳಲ್ಲಿ ದ್ವಿಚಕ್ರವಾಹನ ನಿಲ್ಲಿಸುವ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಈ ತಂಗುದಾಣದ ಕೊಠಡಿಯನ್ನು ವಾಣಿಜ್ಯ ಮಳಿಗೆಯನ್ನಾಗಿ ಮಾರ್ಪಡಿಸುವಂತೆ ಒತ್ತಾಯಿಸಿದರು.
ಇದಕ್ಕೆ ಸದಸ್ಯ ಹೇಮಂತ್ ಪ್ರತಿಕ್ರಿಯಿಸಿ ಈ ತಂಗುದಾಣದಲ್ಲಿ 2 ಮಳಿಗೆಗಳನ್ನು ನಿರ್ಮಿಸಿ ಇವುಗಳನ್ನು ಬಹಿರಂಗ ಹರಾಜು ಮಾಡಿ ಬರುವ ಹಣವನ್ನು ವಾರ್ಡ್‌ಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ನೀಡುವಂತೆ ತಿಳಿಸಿದರು.

ಇದಕ್ಕೆ ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್ ಉತ್ತರಿಸಿ ಬಹಿರಂಗ ಹರಾಜಿನಿಂದ ಬರುವ ಹಣವನ್ನು ವಾರ್ಡ್‌ನ ಕೆಲಸಕ್ಕೆ ಬಳಸುವ ಬದಲು ಶ್ರೀರಾಮ ಹಾಲ್ ಮುಂಭಾಗದಲ್ಲಿ ಇರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಇಲ್ಲಿ ವಾಣಿಜ್ಯ ಮಳಿಗೆ ಕಟ್ಟಿದರೆ ಸಾಕಷ್ಟು ಮಳಿಗೆಗಳು ನಿರ್ಮಾಣ ಗೊಳ್ಳುತ್ತವೆ ಮತ್ತು ಗ್ರಾಪಂಗೆ ಆದಾಯ ಬರುತ್ತದೆ ಎಂದು ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿದರು.

Write A Comment