ಕರ್ನಾಟಕ

ಮದ್ದೂರು: ಕಬ್ಬಿಗೆ ಎಫ್‌ಆರ್‌ಪಿ ದರ ಪಾವತಿಗೆ ಆಗ್ರಹ; ರೈತರಿಂದ ರಸ್ತೆ ತಡೆ

Pinterest LinkedIn Tumblr

11KABBUಮಂಡ್ಯ, ಸೆ.16: ಟನ್ ಕಬ್ಬಿಗೆ ಕೇಂದ್ರ ಸರಕಾರ ನಿಗದಿಮಾಡಿರುವ ಎಫ್‌ಆರ್‌ಪಿ ದರ 2,334 ರೂ. ಕೊಡಿಸಲು ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ರೈತರು ಬುಧವಾರ ರಸ್ತೆತಡೆ ನಡೆಸಿದರು.

ಗ್ರಾಮದ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ರೈತರು, ಕೆ.ಎಂ.ದೊಡ್ಡಿಯ ಚಾಂಷುಗರ್ ಹಾಗೂ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ದರದಂತೆ ಮುಂಗಡ ಹಣ ಪಾವತಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಡಳಿತದ ಸಭೆಯಲ್ಲಿ ತೀರ್ಮಾನವಾದಂತೆ ಕಾರ್ಖಾನೆ ಮಾಲಕರು ನಡೆದುಕೊಳ್ಳದೆ ಟನ್ ಕಬ್ಬಿಗೆ 1,500ರೂ. ನೀಡುತ್ತೇವೆಂದು ಹೇಳಿರುವುದು ಖಂಡನೀಯ. ಜೊತೆಗೆ, ಕಳೆದ ಸಾಲಿನ ಬಾಕಿ ಹಣವನ್ನು ತಕ್ಷಣವೇ ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಕಳೆದ ಸಾಲಿನ ಅಂತಿಮ ಬೆಲೆ ಮತ್ತು ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ನಿಗದಿಪಡಿಸಲು ಮುಂದಾಗಬೇಕೆಂದು ಅವರು ತಾಕೀತು ಮಾಡಿದರು.
ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಉಪತಹಶೀಲ್ದಾರ್ ರಂಗಪ್ಪ, ರೈತರ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ, ಧರಣಿಯನ್ನು ಕೈಬಿಟ್ಟರು.

ಧರಣಿಯುಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಶೆಟ್ಟಹಳ್ಳಿ ರವಿಕುಮಾರ್, ಕೆ.ಪಿ.ದೊಡ್ಡಿಪುಟ್ಟಸ್ವಾಮಿ, ಜಿ.ಎಸ್.ಲಿಂಗಪ್ಪಾಜಿ, ಚಿಕ್ಕಮಾಯೀಗೌಡ, ಹೆಮ್ಮಿಗೆ ಮಧು, ಅಂಬರಹಳ್ಳಿ ಹುಚ್ಚೇಗೌಡ, ಶಂಭು, ಹೊನ್ನಾಯಕನಹಳ್ಳಿ ಟಿ.ಎಚ್.ವಿನಯ್, ವಿಜಯ್ ಕುಮಾರ್, ನವೀನ್, ಪುಟ್ಟಲಿಂಗೇಗೌಡ ಮತ್ತಿತರರು ಉಪಸ್ಥಿತದ್ದರು.

Write A Comment