ಕರ್ನಾಟಕ

ನನ್ನ ಮಗನಾಗಲಿ …ಸಚಿವ ಮಹದೇವಪ್ಪನಾಗಲಿ ಯಾವುದೇ ಗಣಿಗಾರಿಕೆಯಲ್ಲಿ ತೊಡಗಿದ್ದರೆ ಅವರನ್ನು ನೇಣಿಗಾಕ್ತೀನಿ: ಸಿಎಂ ಸಿದ್ದರಾಮಯ್ಯ ಗುಡುಗು

Pinterest LinkedIn Tumblr

Siddaramai

ಮೈಸೂರು.ಸೆ.14: ನನ್ನ ಮಗನಾಗಲಿ ಅಥವಾ ಸಚಿವ ಮಹದೇವಪ್ಪನಾಗಲಿ ಯಾವುದೇ ಗಣಿಗಾರಿಕೆಯಲ್ಲಿ ತೊಡಗಿದ್ದರೆ ಅವರನ್ನು ನೇಣಿಗಾಕ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಇಂದು ಬೆಳಗ್ಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದರು. ನಮ್ಮ ಮಕ್ಕಳು ಇಲ್ಲಿಯ ತನಕ ಯಾವುದೇ ಅಕ್ರಮ ಗಣಿಗಾರಿಕೆಯನ್ನು ನಡೆಸಿಲ್ಲ. ವಿರೋಧ ಪಕ್ಷದ ಎಲುಬಿಲ್ಲದ ನಾಲಿಗೆಯಿಂದ ಇಂತಹ ಆರೋಪಗಳು ಬರುತ್ತಿವೆ. ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು..

ಬಿಜೆಪಿ ಅವರು ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನ ಮಾಡಲಿ ನಂತರ ನಾವು ಮನ್ನಾ ಮಾಡ್ತೀವಿ. ವಿನಾಕಾರಣ ಮನ್ನಾ ಮಾಡಿ ಮನ್ನಾ ಮಾಡಿ.. ಎಂದು ರೈತರ ಸಹಾನುಭೂತಿ ಪಡೆಯುವ ಹುನ್ನಾರ ಇವರದಾಗಿದೆ. ಕೇಂದ್ರ ಸರ್ಕಾರಕ್ಕೆ ಬರಗಾಲ, ಮಹದಾಯಿ ಯೋಜನೆ, ಕಳಸ ಬಂಡೂರಿ, ಸಕ್ಕರೆ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಸೇರಿದಂತೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯ ತನಕ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವರ್ಷ ರಾಜ್ಯಾದ್ಯಂತ 28 ರಷ್ಟು ಮಳೆ ಕೊರತೆಯುಂಟಾಗಿದೆ. ಕಳೆದ 40 ವರ್ಷಗಳ ಹಿಂದೆ ಈ ರೀತಿ ಬರ ಬಂದಿತ್ತು. ಕೇಂದ್ರ ಸರ್ಕಾರಕ್ಕೆ 3,800 ಕೋಟಿ ಪರಿಹಾರ ಕೋರಿ ಮನವಿ ಸಲ್ಲಿಸಲು ನಾಳೆ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಕೃಷಿ ಸಚಿವ ಕೃಷ್ಣಬೈರೇಗೌಡ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ನಾವು ಸಮರ್ಥವಾಗಿ ಬರ ಪರಿಸ್ಥಿತಿಯನ್ನು ಸಮಾರೋಪಾದಿಯಲ್ಲಿ ಎದುರಿಸಲು ಸಿದ್ಧವಾಗಿದ್ದೇವೆ. ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ದಿದ್ದಾಗ ಅನಂತ್ ಕುಮಾರ್, ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಇದ್ದರೂ ಸಹ ನಮ್ಮ ರಾಜ್ಯಕ್ಕೆ ಸಹಾಯ ಮಾಡಿ ಎಂದು ಇವಱ್ಯಾರು ಮಾತನಾಡಲೇ ಇಲ್ಲ. ಈಗ ಸುಮ್ಮನೆ ಬೊಬ್ಬಿಡುತ್ತಿದ್ದಾರೆ ಎಂದು ಛೇಡಿಸಿದರು.

ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದ ಬಿಬಿಎಂಪಿ ನಲ್ಲಿ ಜೆಡಿಎಸ್‌ನೊಂದಿಗೆ ಸ್ನೇಹ ಬೆಳೆಸಲಾಯಿತು. ಇವರು ಅಧಿಕಾರದಲ್ಲಿದ್ದಾಗ ಗದ್ದುಗೆ ಉಳಿಸಿಕೊಳ್ಳಲು ಅಪರೇಷನ್ ಕಮಲ ನಡೆಸಲಿಲ್ಲವೇ. ಇವರಿಗೆ ಮಾನ ಮರ್ಯಾದೆ ಇದೆಯೇ? ಇವರು ಅಧಿಕಾರ ನಡೆಸುತ್ತಿದ್ದಾಗ 9 ಸಾವಿರ ಕೋಟಿ ಸಾಲ ಮಾಡಿ ಜನರನ್ನು ಹಾಳು ಮಾಡಿದ್ದಾರೆ. ಕನಿಷ್ಟ ಅವರಿಗೆ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಆಗಲಿಲ್ಲ. ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಿದ್ದೆ ಇವರ ಸಾಧನೆ ಎಂದು ಆರೋಪಿಸಿದರು.

ಪಿಡಬ್ಲ್ಯೂಡಿನಲ್ಲಿ 500 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಯಡಿಯೂರಪ್ಪನವರು ಆರೋಪಿಸಿದ್ದಾರೆ. ಇದನ್ನು ಅವರು ಸಾಬೀತುಪಡಿಸಲಿ. ವಿನಾಕಾರಣ ದೂರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿದ್ದವರು ಈ ರೀತಿ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆಯಿಲ್ಲ. ಬರಿ ಭ್ರಷ್ಟಚಾರ, ದುರಾಡಳಿತ, ಸ್ವಜನಪಕ್ಷಪಾತದಲ್ಲಿ ತೊಡಗಿದ್ದ ಇವರ ಬಗ್ಗೆ ಜನರಿಗೆ ನಂಬಿಕೆಯಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ನಡೆದ ಗ್ರಾಮಪಂಚಾಯಿತಿ ಚುನಾವಣೆ ಎಂದು ವ್ಯಂಗ್ಯವಾಡಿದರು.

ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಸಕ್ಕರೆ ಸಚಿವ ಮಹದೇವ ಪ್ರಸಾದ್, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಸಿ ದಾಸೇಗೌಡ, ಮೇಯರ್ ಲಿಂಗಪ್ಪ, ಮೂಡ ಅಧ್ಯಕ್ಷ ಮೋಹನ್ ಕುಮಾರ್ ಹಾಜರಿದ್ದರು.

Write A Comment