ಕರ್ನಾಟಕ

ಕಳಸಾ ಬಂಡೂರಿಗೆ ತಾರಾ ಬಲ, ಹುಬ್ಬಳ್ಳಿಯತ್ತ ಸ್ಯಾಂಡಲ್‌ವುಡ್; ಕನ್ನಡ ಚಿತ್ರರಂಗದಿಂದ ನಾಳೆ ಬೃಹತ್ ಪ್ರತಿಭಟನೆ

Pinterest LinkedIn Tumblr

cinimaಬೆಂಗಳೂರು: ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ಪಟ್ಟು ಹಿಡಿದು ರೈತರು ನಡೆಸುತ್ತಿರುವ ಹೋರಾಟ 59ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ರೈತರ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿದ್ದು, ಭಾನುವಾರ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾಳೆ ಬೆಳಗ್ಗೆ 11ಗಂಟೆಗೆ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ರಾಣಿ ಚೆನ್ನಮ್ಮ ಸರ್ಕಲ್ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, 12 ಗಂಟೆಗೆ ಚೆನ್ನಮ್ಮ ಸರ್ಕಲ್ ನಲ್ಲಿ ಸಭೆಯನ್ನು ಉದ್ದೇಶಿಸಿ ತಾರೆಯರು ಮಾತನಾಡಲಿದ್ದಾರೆ.

ಹಿರಿಯ ನಟ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಚಿರಂಜೀವಿ ಸರ್ಜಾ, ದರ್ಶನ್, ಉಪೇಂದ್ರ, ಗಣೇಶ್, ರಾಕ್‌ಲೈನ್ ವೆಂಕಟೇಶ್, ವಿಜಯಲಕ್ಷ್ಮೀ ಸಿಂಗ್, ದೊಡ್ಡಣ್ಣ, ಸುಂದರ್ ರಾಜ್, ಬಿ.ಸರೋಜಾ ದೇವಿ, ಭಾರತಿ ವಿಷ್ಣುವರ್ಧನ್, ಪೂಜಾಗಾಂಧಿ, ಅನುಪ್ರಭಾಕರ್, ವಿಜಯ್ ರಾಘವೇಂದ್ರ, ಸಾ.ರಾ.ಗೋವಿಂದು, ನೀನಾಸಂ ಸತೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ನಾಳಿನ ಹೋರಾಟದಲ್ಲಿ ಭಾಗವಹಿಸಲು ಈಗಾಗಲೇ ಹುಬ್ಬಳ್ಳಿಯತ್ತ ಪ್ರಯಾಣ ಬೆಳಸಿದ್ದಾರೆ.

ಬಸ್ಸು, ವಿಮಾನ, ರೈಲಿನ ಮೂಲಕ ಚಿತ್ರರಂಗದ ಗಣ್ಯರು ಹುಬ್ಬಳ್ಳಿಗೆ ತೆರಳುತ್ತಿದ್ದು, ‘ನೆಲ, ಜಲ, ಭಾಷೆಯ ಹೋರಾಟಕ್ಕೆ ಸದಾ ಸಿದ್ಧವಾಗಿದ್ದೇವೆ. ಯಾವಾಗ ಬೇಕಾದರೂ ಹೋರಾಟಕ್ಕೆ ಕರೆದರೂ ಹೋಗಲು ಸಿದ್ಧನಿದ್ದೇನೆ’ ಎಂದು ಹುಬ್ಬಳ್ಳಿಗೆ ಹೊರಡುವ ಮುನ್ನ ಬೆಂಗಳೂರಿನಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ನರಗುಂದ, ಬಾದಾಮಿ, ನವಲಗುಂದ ಮತ್ತು ಗದಗ ನಗರಗಳಲ್ಲಿ ಬಿರುಸಾಗಿಯೋ ನಡೆದಿರುವ ಈ ಹೋರಾಟ ನೆರೆಯ ಜಿಲ್ಲೆ, ನಗರ ಮತ್ತು  ಗ್ರಾಮಗಳೆನ್ನುವ ಬೇಧವೆನಿಸದೇ ಜನಾಂದೋಲನವಾಗಿ ರೂಪುಗೊಂಡಿದ್ದು, ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ನರಗುಂದ, ನವಲಗುಂದ ಎಂದಿನಂತೆ ಬಂದ್ ಆಗಿದ್ದವು. ಗದಗ, ಹುಬ್ಬಳ್ಳಿ, ಧಾರವಾಡದಲ್ಲಿ ಇಂದೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದವು.

Write A Comment