ಕರ್ನಾಟಕ

ಕಲಬುರ್ಗಿಯ ಚಿತ್ತಾಪುರ ಬಳಿ ಹಳಿ ತಪ್ಪಿದ ದುರಂತೋ ಎಕ್ಸ್ ಪ್ರೆಸ್ ರೈಲು: ಇಬ್ಬರು ಪ್ರಯಾಣಿಕರು ಸಾವು

Pinterest LinkedIn Tumblr

train-misshpp

ಕಲಬುರ್ಗಿ: ದುರಂತೋ ಎಕ್ಸ್ ಪ್ರೆಸ್ ರೈಲು ಕರ್ನಾಟಕದ ಕಲಬುರ್ಗಿಯ ಚಿತ್ತಾಪುರ ಬಳಿ ಹಳಿ ತಪ್ಪಿದ್ದು, ಘಟನೆಯಲ್ಲಿ ಕನಿಷ್ಠ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತಕ್ಕೀಡಾದ ರೈಲು ಸಿಕಂದರಾಬಾದಿನಿಂದ ಮುಂಬೈ ನ ಲೋಕಮಾನ್ಯ ತಿಲಕ್ ಟರ್ಮಿನಲ್ ಗೆ ಪ್ರಯಾಣಿಸುತ್ತು ಎಂದು ತಿಳಿದುಬಂದಿದೆ. ಶುಕ್ರವಾರ ತಡ ರಾತ್ರಿ ಸುಮಾರು 2.30ರ ವೇಳೆಯಲ್ಲಿ ರೈಲು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಮರ್ತೂರು ಬಳಿ ರೈಲು ಹಳಿ ತಪ್ಪಿದ್ದ, ಅಪಘಾತದ ರಭಸಕ್ಕೆ ರೈಲಿನ ಸುಮಾರು 9 ಬೋಗಿಗಳು ಪಲ್ಟಿಯಾಗಿವೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ 9ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇನ್ನು ರೈಲು ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ. ಇನ್ನು ರೈಲು ದುರಂತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರಿಗೆ ರೂ. 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ರೂ. 50 ಸಾವಿರ ಹಾಗೂ ಸಾಮಾನ್ಯ ಗಾಯಗಳಾದವರಿಗೆ ರೂ. 25 ಸಾವಿರ ಪರಿಹಾರ ಘೋಷಿಸಲಾಗಿದೆ.

ಸಹಾಯವಾಣಿ ಸಂಖ್ಯೆಗಳು:
ಕಲಬುರ್ಗಿ: 0847- 2255066 / 2255067
ಸಿಕಂದರಾಬಾದ್‌: 040-27700968
ಸೊಲ್ಲಾಪುರ: 0217- 2313331
ಛತ್ರಪತಿ ಶಿವಾಜಿ ಟರ್ಮಿನಸ್‌: 022-22694040
ಲೋಕಮಾನ್ಯ ತಿಲಖ್‌ ಟರ್ಮಿನಸ್‌: 022- 25280005
ಕಲ್ಯಾಣ್‌: 0251- 2311499

Write A Comment