ಕರ್ನಾಟಕ

ಗಣೇಶ ಹಬ್ಬದ ಬಳಿಕ ಲೋಡ್‌ಶೆಡ್ಡಿಂಗ್‌ ಕಡಿತ: ಡಿಕೆ ಶಿವಕುಮಾರ್‌

Pinterest LinkedIn Tumblr

DK-Shivakumar-5ಬೆಂಗಳೂರು: ಹೆಚ್ಚುತ್ತಿರುವ ಲೋಡ್‌ ಶೆಡ್ಡಿಂಗ್‌ನಿಂದ ಸಮಸ್ಯೆಗೆ ಸಿಲುಕಿರುವ ರಾಜ್ಯದ ವಿದ್ಯುತ್‌ ಗ್ರಾಹಕರಿಗೆ ಸಂತಸದ ಸುದ್ದಿ. ರಾಜ್ಯಾದ್ಯಂತ ಜಾರಿಯಲ್ಲಿರುವ ಲೋಡ್‌ಶೆಡ್ಡಿಂಗ್‌ ಪ್ರಮಾಣವನ್ನು ಸೆ. 22ರ ವೇಳೆಗೆ ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ಕೇಂದ್ರ ಗ್ರಿಡ್‌ನಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 200 ಮೆಗಾವ್ಯಾಟ್‌ ವಿದ್ಯುತ್‌ ಲಭ್ಯವಾಗುತ್ತಿರುವುದು, ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದ ಎರಡು ಘಟಕಗಳಿಂದ ಸೆ. 17ರ ವೇಳೆಗೆ ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಪುನಾರಂಭವಾಗುತ್ತಿರುವುದು ಇದಕ್ಕೆ ಕಾರಣ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಸೆ. 22ರ ವೇಳೆಗೆ ಬೆಂಗಳೂರು ನಗರ ಮಾತ್ರವಲ್ಲದೆ, ಇತರೆ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಲೋಡ್‌ಶೆಡ್ಡಿಂಗ್‌ ಪ್ರಮಾಣ ಕಡಿಮೆಯಾಗಲಿದೆ. ಆ ವೇಳೆಗೆ ಲಭ್ಯವಾಗುವ ಮತ್ತು ಬೇಡಿಕೆ ಇರುವ ವಿದ್ಯುತ್‌ ಆಧರಿಸಿ ಲೋಡ್‌ಶೆಡ್ಡಿಂಗ್‌ ಅವಧಿ ನಿಗದಿಪಡಿಸಲಾಗುವುದು ಎಂದು ಹೇಳಿದರು.

ವಿದ್ಯುತ್‌ ಕೊರತೆ ನೀಗಿಸಲು ನಿಗದಿಯಾಗದ (ಅನ್‌ ಅಲೋಕೇಟೆಡ್‌) ಕೋಟಾದಡಿ ರಾಜ್ಯಕ್ಕೆ ವಿದ್ಯುತ್‌ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಬುಧವಾರ ರಾತ್ರಿಯಿಂದ ಕೇಂದ್ರ ಗ್ರಿಡ್‌ನಿಂದ 200 ಮೆಗಾವ್ಯಾಟ್‌ ಹೆಚ್ಚುವರಿ ವಿದ್ಯುತ್‌ ಲಭ್ಯವಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆ ಅವಧಿಯಲ್ಲಿ ಈ ವಿದ್ಯುತ್‌ ತರಿಸಿಕೊಳ್ಳಲಾಗುತ್ತಿದೆ. ಇದರ ಜತೆಗೆ 1500 ಮೆಗಾವ್ಯಾಟ್‌ ನಿಗದಿಯಾಗದ ವಿದ್ಯುತ್‌ ಒದಗಿಸುವಂತೆಯೂ ಕೋರಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಸ್ಥಗಿತಗೊಂಡಿರುವ ಎರಡು ಘಟಕಗಳ ಪೈಕಿ 500 ಮೆಗಾವ್ಯಾಟ್‌ ಸಾಮರ್ಥ್ಯದ ಒಂದು ಘಟಕ ಸೆ. 12ರಿಂದ ಮತ್ತು ಅಷ್ಟೇ ಸಾಮರ್ಥ್ಯದ ಮತ್ತೂಂದು ಘಟಕ ಸೆ. 17ರಿಂದ ಪುನಾರಂಭವಾಗಿ ಸುಮಾರು ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಲಭ್ಯವಾಗಲಿದೆ. ಇದರಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಸಿಗದೇ ಇದ್ದರೂ ಸೆ. 22ರ ವೇಳೆಗೆ ಲೋಡ್‌ಶೆಡ್ಡಿಂಗ್‌ ಪ್ರಮಾಣ ಕಡಿಮೆ ಮಾಡಲಾಗುವುದು ಎಂದರು.

ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದ ಮೂರನೇ ಘಟಕ ನವೆಂಬರ್‌ 15ರ ವೇಳೆಗೆ ವಿದ್ಯುತ್‌ ಉತ್ಪಾದನೆ ಆರಂಭಿಸಲಿದ್ದು, ಇದರಿಂದ 700 ಮೆಗಾವ್ಯಾಟ್‌ ವಿದ್ಯುತ್‌ ಲಭ್ಯವಾಗಲಿದೆ. ಜನವರಿ ಅಥವಾ ಫೆಬ್ರವರಿ ವೇಳೆಗೆ ಯರಮರಸ್‌ನಿಂದ 800 ಮೆಗಾವ್ಯಾಟ್‌ ವಿದ್ಯುತ್‌ ಸಿಗಲಿದೆ. ಹಾಗೆಯೇ ದಾಮೋದರ ವ್ಯಾಲಿಯಿಂದ 400 ಮೆಗಾವ್ಯಾಟ್‌ ವಿದ್ಯುತ್‌ ಲಭ್ಯವಾಗಲಿದ್ದು, ಇದರಿಂದಾಗಿ ಒಟ್ಟಾರೆ ಪರಿಸ್ಥಿತಿ ಸುಧಾರಿಸಿ ಕರ್ನಾಟಕ ಕತ್ತಲು ಮುಕ್ತ ರಾಜ್ಯವಾಗಲಿದೆ ಎಂದರು.
-ಉದಯವಾಣಿ

Write A Comment