ಕರ್ನಾಟಕ

ಅಕ್ಟೋಬರ್‌ನಿಂದ ಪಾರ್ಕಿಂಗ್‌ ಶುಲ್ಕ

Pinterest LinkedIn Tumblr

ffffbangaloreಬೆಂಗಳೂರು: ನಗರದ ಹೃದಯ ಭಾಗ­ದಲ್ಲಿ ವಾಹನ ನಿಲುಗಡೆಗಾಗಿ ಮುಂಬರುವ ಅಕ್ಟೋಬರ್‌ನಿಂದ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದೆ.

ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಸಾರ್ವಜನಿಕರು ಪ್ರಮುಖ ಪ್ರದೇಶಗಳ ಪಾರ್ಕಿಂಗ್‌ ಸ್ಥಳದಲ್ಲಿ 5–6 ಗಂಟೆ ವಾಹನ ನಿಲ್ಲಿಸಿದರೆ ನೂರಾರು ರೂಪಾಯಿ ಶುಲ್ಕ ಕಟ್ಟುವುದು ಅನಿವಾರ್ಯ ಆಗಲಿದೆ. ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಅಕ್ಟೋಬರ್‌ ಅಂತ್ಯದ ವೇಳೆಗೆ ಹೊಸ ವ್ಯವಸ್ಥೆ ಜಾರಿಗೆ ತರುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌) ಪಾರ್ಕಿಂಗ್‌ ನೀತಿ ಅನುಷ್ಠಾನಕ್ಕೆ ಅಗತ್ಯವಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿತ್ತು. ಅದಕ್ಕೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಈ ಹಿಂದೆಯೇ ಒಪ್ಪಿಗೆ ನೀಡಲಾಗಿತ್ತು.

ನಿಲುಗಡೆ ಅವಧಿಗೆ ತಕ್ಕಂತೆ ಶುಲ್ಕ ವಿಧಿಸುವ ಈ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ನಗರದ ಹೃದಯ ಭಾಗದ 85 ರಸ್ತೆಗಳ ಪೈಕಿ 56 ರಸ್ತೆಗಳಲ್ಲಿ ಅನುಷ್ಠಾನಕ್ಕೆ ತರಲಾ­ಗುತ್ತದೆ. ಈ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಮತ್ತು ಸಿ (ಸಾಮಾನ್ಯ) ಎಂಬ ಮೂರು ಪಾರ್ಕಿಂಗ್‌ ಪ್ಯಾಕೇಜ್‌­ಗಳಲ್ಲಿ ವಿಂಗಡಿಸ­ಲಾಗಿದೆ. ‘ಎ’ ಪ್ಯಾಕೇಜ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಲು ಪ್ರತಿ ಗಂಟೆಗೆ ₹15 ನೀಡಬೇಕು. ಕಾರು ನಿಲ್ಲಿಸಲು ಪ್ರತಿ ಗಂಟೆಗೆ ₹30 ಪಾವತಿಸಬೇಕು.

ಪಾರ್ಕಿಂಗ್ ಶುಲ್ಕವನ್ನು ವಾಹನ ನಿಲುಗಡೆಯಾದ ಅವಧಿಗೆ ಮಾತ್ರ ವಿಧಿಸಲಾಗುತ್ತದೆ.  15 ನಿಮಿಷ ಇಲ್ಲವೆ ಅದಕ್ಕಿಂತ ಕಡಿಮೆ ಅವಧಿಗೆ ಕನಿಷ್ಠ ನಿಲುಗಡೆ ಶುಲ್ಕ ₹15 ಆಕರಿಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಅವಧಿಗೆ ನಿಲುಗಡೆಯಾದರೆ ನಿಮಿಷದ ಲೆಕ್ಕಾಚಾರದಂತೆ ಶುಲ್ಕ ನಿಗದಿ ಆಗುತ್ತದೆ.

ಕಾರೊಂದು 25 ನಿಮಿಷಗಳ ಅವಧಿಗೆ ನಿಲುಗಡೆ­ಯಾಗಿದ್ದಲ್ಲಿ ನೀಡಬೇಕಾದ ಶುಲ್ಕ ₹25 ಮಾತ್ರ. ಅರ್ಧಗಂಟೆ ಹಾಗೂ ಅದಕ್ಕಿಂತ ಹೆಚ್ಚು ಹೊತ್ತು ನಿಲುಗಡೆ ಮಾಡಿದರೆ ಪೂರ್ಣ ಪ್ರಮಾಣದ ಶುಲ್ಕ (₹30) ನೀಡಬೇಕಾಗುತ್ತದೆ. ಪ್ರತಿ ಗಂಟೆ ಅವಧಿಯಲ್ಲೂ ಇದು ಹೀಗೇ ಪುನರಾ­ವರ್ತನೆ ಆಗುತ್ತದೆ. ಸೈಕಲ್‌ಗಳಿಗೆ ಪಾರ್ಕಿಂಗ್‌ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಹಲಸೂರಿನಿಂದ ಶಿರ್ಸಿ ವೃತ್ತ ಮತ್ತು ಲಾಲ್‌ಬಾಗ್‌ನಿಂದ ಅರಮನೆ ಮೈದಾನ­ದ­ವರೆಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗಿದೆ. ಆಯ್ದ ಪ್ರದೇಶಗಳಲ್ಲಿ 4,800 ಕಾರು ಮತ್ತು 10,000 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಬೇಡಿಕೆ ಇದೆ. ಸದ್ಯ 2,500 ಕಾರು ಮತ್ತು 5,000 ದ್ವಿಚಕ್ರ ವಾಹನ ನಿಲುಗಡೆಗಷ್ಟೇ ಅವಕಾಶ ಇದೆ ಎಂದು ಡಲ್ಟ್‌ ವರದಿಯಲ್ಲಿ ವಿವರಿಸಲಾಗಿದೆ.

ಶುಲ್ಕ ವಿಧಿಸುವ ಮೀಟರ್‌ (ಸ್ವೈಪ್‌ ಕಾರ್ಡ್‌, ಮೊಬೈಲ್‌ ಅಪ್ಲಿಕೇಶನ್‌) ಹಾಗೂ ರಸ್ತೆ ಮಾರ್ಗಸೂಚಿ ಅಳವಡಿಕೆ, ನಿಲುಗಡೆ ವ್ಯವಸ್ಥೆ ಹೊಂದಿದ ರಸ್ತೆಗಳ ಸ್ಥಳಾವಕಾಶದ ಕ್ಷಣ, ಕ್ಷಣದ ಮಾಹಿತಿ ಒದಗಿಸುವಿಕೆ ಮತ್ತು ಪಾರ್ಕಿಂಗ್‌ ಅಂಕಣಗಳಲ್ಲಿ ಸಿ.ಸಿ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಈ ಯೋಜನೆಯು ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಸಮಗ್ರ ಪ್ಯಾಕೇಜ್‌ ಒಳಗೊಂಡಿದೆ.

ಪಾರ್ಕಿಂಗ್‌ ಸ್ಥಳ ಲಭ್ಯವಿರುವ ಪ್ರತಿ ರಸ್ತೆಯಲ್ಲಿ ಟಿಕೆಟ್‌ ನೀಡುವ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅದು ವಾಹನ ಬಂದ ಸಮಯವನ್ನು ದಾಖಲಿಸಿಕೊಳ್ಳುತ್ತದೆ. ವಾಪಸ್‌ ಹೋಗುವಾಗ ಯಂತ್ರದ ಬಾಯಿಗೆ ಆ ಟಿಕೆಟ್‌ ಕೊಡಬೇಕು. ಅದು ಅವಧಿಯನ್ನು ಲೆಕ್ಕಹಾಕಿ ಶುಲ್ಕ ವಿಧಿಸುತ್ತದೆ.

ಸ್ಮಾರ್ಟ್‌ ಕಾರ್ಡ್‌, ಡೆಬಿಟ್‌ ಇಲ್ಲವೆ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಐದು ವರ್ಷಗಳ ಅವಧಿಗೆ ಟೆಂಡರ್‌ ಕರೆದು ಆದಾಯ ಹಂಚಿಕೊಳ್ಳುವ ಷರತ್ತಿನ ಮೇಲೆ ಖಾಸಗಿ ಸಂಸ್ಥೆಗೆ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುವ ಹೊಣೆಯನ್ನು ವಹಿಸಿಕೊಡಲು ಉದ್ದೇಶಿಸಲಾಗಿದೆ.

ಈ ಯೋಜನೆ ಮೂಲಕ ಬಿಬಿಎಂಪಿಗೆ ವಾರ್ಷಿಕ ₹80 ಕೋಟಿಯಷ್ಟು ಆದಾಯ ಬರುವ ನಿರೀಕ್ಷೆ ಇದ್ದು, ಯಾವುದೇ ಬಂಡವಾಳ ಹೂಡುವ ಅಗತ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅನಿಯಂತ್ರಿತವಾಗಿ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರಿಂದ ಜಟಿಲಗೊಂಡ ಪಾರ್ಕಿಂಗ್‌ ಸಮಸ್ಯೆ ಸಹ ಬಗೆಹರಿಯಲಿದೆ ಎಂದು ಡಲ್ಟ್‌ ತಿಳಿಸಿದೆ.

ಸಂಚಾರ ದಟ್ಟಣೆ ಸಮಯ, ಸಾಮಾನ್ಯ ಅವಧಿ ಮತ್ತು ರಜಾ ದಿನಗಳಲ್ಲೂ ಶುಲ್ಕ ಆಕರಣೆ ವಿಧಾನ ಒಂದೇ ಆಗಿರುತ್ತದೆ. ಪಾರ್ಕಿಂಗ್‌ ಶುಲ್ಕವನ್ನು ವಾರ್ಷಿಕವಾಗಿ ಸಗಟು ಬೆಲೆ ಸೂಚ್ಯಂಕ ಬೆಳವಣಿಗೆ ದರದ ಆಧಾರದ ಮೇಲೆ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ವ್ಯವಸ್ಥೆಗೆ ‘ಬೆಂಗಳೂರು ಇನಿಷಿಯೇಟಿವ್‌ ಫಾರ್‌ ಪಾರ್ಕಿಂಗ್‌’ ಎಂದು ಹೆಸರಿಸಲಾಗಿದೆ.

‘ಪ್ರತಿ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್‌ ಶುಲ್ಕ ಆಕರಿಸುವ ಕಾರಣ, ಜನಸಾಮಾನ್ಯರು ಪ್ರತಿದಿನ ನೂರಾರು ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಈ ಪ್ರಸ್ತಾವ ಕಾರ್ಯಸಾಧುವೇ ಎಂಬುದನ್ನು ಪರಾಮರ್ಶಿಸಬೇಕಿದೆ’ ಎಂಬುದು ಹಲವು ಮಾಜಿ ಮೇಯರ್‌ಗಳ ಅನಿಸಿಕೆ.

‘ಎ’ ಪ್ಯಾಕೇಜ್‌ ರಸ್ತೆಗಳು
ಅವೆನ್ಯೂ ರಸ್ತೆ, ಎಸ್‌.ಸಿ. ರಸ್ತೆ, ರೇಸ್‌ ಕೋರ್ಸ್‌ ಲೂಪ್‌ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರಾಜಾರಾಮ್‌ ಮೋಹನರಾಯ್‌ ರಸ್ತೆ, ಮಲ್ಯ ರಸ್ತೆ, ಕಸ್ತೂರಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್‌ ರಸ್ತೆ ಮತ್ತು ಎನ್‌.ಆರ್‌. ರಸ್ತೆ.

‘ಬಿ’ ಪ್ಯಾಕೇಜ್‌ ರಸ್ತೆಗಳು
ಎಸ್‌.ಪಿ. ರಸ್ತೆಯ ಆರನೇ ಕ್ರಾಸ್‌ ಐದನೇ ಮುಖ್ಯರಸ್ತೆ, ಧನ್ವಂತ್ರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಅರಮನೆ ರಸ್ತೆ, ಎಸ್‌.ಸಿ ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟ್ರಿಕ್‌ ಆಫೀಸ್‌ ರಸ್ತೆ, ಕಾಳಿದಾಸ ಮಾರ್ಗ, ಲಿಂಕ್‌ ರಸ್ತೆ, ರಾಮಚಂದ್ರ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಅರಮನೆ ಅಡ್ಡರಸ್ತೆ, ಮೇನ್‌ ಗಾರ್ಡ್‌ ಅಡ್ಡರಸ್ತೆ, ಲೇಡಿ ಕರ್ಜನ್‌ ರಸ್ತೆ, ಕ್ರೆಸೆಂಟ್‌ ರಸ್ತೆ, ಮಿಲ್ಲರ್‌್ಸ ರಸ್ತೆ, ಮಿಲ್ಲರ್‌್ಸ ಟ್ಯಾಂಕ್‌ ಬಂಡ್‌ ರಸ್ತೆ, ಅಲಿ ಅಸ್ಗರ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಕೆನ್ಸಿಂಗ್ಟನ್‌ ರಸ್ತೆ, ವೀರಪಿಳ್ಳೈ ರಸ್ತೆ, ಡಿಸ್ಪೆನ್ಸರಿ ರಸ್ತೆ.

‘ಸಿ’ ಪ್ಯಾಕೇಜ್‌ ರಸ್ತೆಗಳು
ಇಬ್ರಾಹಿಂ ಸಾಹೇಬ್‌ ಸ್ಟ್ರೀಟ್‌, ಮೀನಾಕ್ಷಿ ಕೋಯಿಲ್‌ ರಸ್ತೆ, ನಾರಾಯಣ ಪಿಳ್ಳೈ ಸ್ಟ್ರೀಟ್‌, ಧರ್ಮರಾಜ ಕೋಯಿಲ್‌ ಸ್ಟ್ರೀಟ್‌, ಹೇನ್ಸ್ ರಸ್ತೆ, ಹಾಸ್ಪಿಟಲ್‌ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಸೆಟ್ಟಿ ರಸ್ತೆ, ವುಡ್‌ ಸ್ಟ್ರೀಟ್‌, ಕ್ಯಾಸಲ್‌ ಸ್ಟ್ರೀಟ್‌, ಬ್ರಂಟನ್‌ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್‌ ಮಾರ್ಕ್ಸ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಗ್ರ್ಯಾಂಟ್‌ ರಸ್ತೆ, ಹೇಯ್ಸ್‌ ರಸ್ತೆ, ಕಾನ್ವೆಂಟ್‌ ರಸ್ತೆ, ಪಂಪ ಮಹಾಕವಿ ರಸ್ತೆ, ಮಿಷನ್‌ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ ಮುಖ್ಯ ರಸ್ತೆ, ಎ.ಎಸ್‌. ಚಾರ್‌ ಸ್ಟ್ರೀಟ್‌, ಬಳೆಪೇಟೆ ರಸ್ತೆ, ಬನಪ್ಪ ಪಾರ್ಕ್‌, ಕಬ್ಬನ್‌ಪೇಟೆ ಮುಖ್ಯ ರಸ್ತೆ, ಕೆ.ವಿ. ಟೆಂಪಲ್‌ ಸ್ಟ್ರೀಟ್‌, ಕಿಲಾರಿ ಸ್ಟ್ರೀಟ್‌, ನಾಗರಪೇಟೆ ಮುಖ್ಯರಸ್ತೆ, ಪೊಲೀಸ್‌ ಸ್ಟೇಶನ್‌ ರಸ್ತೆ, ಆರ್‌.ಟಿ. ಸ್ಟ್ರೀಟ್‌, ಸುಲ್ತಾನ್‌ ಪೇಟೆ ರಸ್ತೆ, ಸ್ಯಾಂಕಿ ರಸ್ತೆ, ಜಸ್ಮಾ ಭವನ್‌ ರಸ್ತೆ, ಎಡ್ವರ್ಡ್‌ ರಸ್ತೆ, ಯೂನಿಯನ್‌ ಸ್ಟ್ರೀಟ್‌, ಅಣ್ಣಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್‌ವೇ, ಸೇಂಟ್‌ ಜಾನ್ಸ್‌ ರಸ್ತೆ, ಆಸ್ಬೋರ್ನ್‌ ರಸ್ತೆ, ಶಿವಾಜಿ ರಸ್ತೆ ಮತ್ತು ಚಿಕ್ಕ ಬಜಾರ ರಸ್ತೆ.

Write A Comment