ಕರ್ನಾಟಕ

ಭಾರತ್ ಬಂದ್ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ: ಜನಜೀವನ ಅಸ್ತವ್ಯಸ್ತ

Pinterest LinkedIn Tumblr

Bang bandh

ಬೆಂಗಳೂರು, ಸೆ.2: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ `ಭಾರತ್ ಬಂದ್`ಗೆ ರಾಜ್ಯದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾದರೂ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ರಾಜಧಾನಿ ಬೆಂಗಳೂರು ಸೇರಿದಂತೆ, ದಾವಣಗೆರೆ, ಹುಬ್ಬಳ್ಳಿ – ಧಾರವಾಡ, ಚಿಕ್ಕಬಳ್ಳಾಪುರ ಹಾಗೂ ಇತರೆ ನಗರಗಳಲ್ಲಿ ಉದ್ರಿಕ್ತ ಗುಂಪು, ಬಸ್‌ಗಳ ಮೇಲೆ ಕಲ್ಲು ತೂರಾಟ, ಮತ್ತಿತರ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು. ಬಂದ್‌ಗೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಜಿಲ್ಲೆಗಳು ಸೇರಿದಂತೆ ಎಲ್ಲೆಡೆ ಬಂದ್ ಯಶಸ್ವಿಯಾದ ವರದಿಗಳು ಬಂದಿವೆ.

Bang bandh34

Bang bandh3

Bang bandh2

Bang bandh1

ಬಂದ್‌ನಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಉಳಿದೆಡೆ ಅಲ್ಲಿನ ಪರಿಸ್ಥಿತಿ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.

ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ ಬಸ್‌ಗಳು, ಕ್ಯಾಬ್, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳು ಬೀದಿಗಿಳಿದಿಲ್ಲ. ಅದೇ ರೀತಿ ಆಟೋ ರಿಕ್ಷಾಗಳ ಸಂಘಟನೆಗಳೂ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಸಾರ್ವಜನಿಕರು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಪರದಾಡಬೇಕಾಯಿತು.

ಹಾಜರಾತಿ ವಿರಳ

ರಾಜ್ಯ ಸರ್ಕಾರಿ ನೌಕರರೂ ಬಂದ್‌ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ರಾಜ್ಯದ ಶಕ್ತಿಸೌಧಗಳಾದ ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಬಹುಮಹಡಿ ಕಟ್ಟಡ ಸೇರಿದಂತೆ ವಿವಿಧ ಕಚೇರಿಗಳಲ್ಲಿ ನೌಕರರ ಹಾಜರಾತಿ ಕ್ಷೀಣಿಸಿದ್ದರಿಂದ ದಿನನಿತ್ಯದ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವಂತಾಗಿದೆ.

ಬ್ಯಾಂಕಿಂಗ್ ವಲಯ, ಜೀವವಿಮೆ, ಅಂಚೆ ಕಛೇರಿಗಳಲ್ಲಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಎಟಿಎಂ ಹೊರತುಪ‌ಡಿಸಿ, ಸಾರ್ವಜನಿಕ ವಲಯ ಹಾಗೂ ಖಾಸಗಿ ಮತ್ತು ಸಹಕಾರಿ ವಲಯದ ಬ್ಯಾಂಕ್‌ಗಳೂ ಕಾರ್ಯನಿರ್ವಹಿಸಿಲ್ಲ.

ಎಲ್ಲೆಡೆ ಅಂಗಡಿಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿದ್ದರಿಂದ ವ್ಯಾಪಾರಿ ವಲಯಕ್ಕೂ ಹೊಡೆತ ಬಿದ್ದಿದೆ. ಕೆಲವೆಡೆ ಪ್ರತಿಭಟನಾಕಾರರು ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಮುಚ್ಚಿಸಲು ಪ್ರಯತ್ನಿಸಿದಾಗ ಮಾತಿನ ಚಕಮಕಿ ಉಂಟಾಗಿತ್ತು.

ಪ್ರತಿಭಟನೆ

ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹಾಗೂ ನೌಕರರು ಹಲವೆಡೆ ಪ್ರತಿಭಟನಾ ಱ್ಯಾಲಿ, ಮೆರವಣಿಗಳನ್ನು ನಡೆಸುವ ಮೂಲಕ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.

ಇಂತಹ ಸಂದರ್ಭದಲ್ಲಿ ರಸ್ತೆ ತಡೆ ಚಳವಳಿ, ಟೈರ್‌ಗಳಿಗೆ ಬೆಂಕಿ, ಬಸ್ಸುಗಳಿಗೆ ಕಲ್ಲು ತೂರಾಟದಂತಹ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತುಮಕೂರು ವರದಿ

ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಟೌನ್‌ಹಾಲ್ ವೃತ್ತದಲ್ಲಿ ಎಐಟಿಯುಸಿ, ಸಿಐಟಿಯು, ಬಿ.ಎಂ.ಎಸ್., ಐಎನ್‌ಟಿಯುಸಿ, ಎಐಯುಟಿಯುಸಿ, ಜೆಸಿಟಿಯು, ಭಾರತೀಯ ಕೃಷಿಕ ಸಮಾಜ ಸೇರಿದಂತೆ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಂದ್ ಬಗ್ಗೆ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಪ್ರಚಾರಪಡಿಸಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಕಾರ್ಖಾನೆಗಳು, ಅಂಚೆ ಕಚೇರಿಗಳು ಬಂದ್ ಆಗಿದ್ದು, ವರ್ತಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳನ್ನು ಮುಚ್ಚುವ ಮೂಲಕ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ರಾಮನಗರ ವರದಿ

ಭಾರತ್ ಬಂದ್‌ಗೆ ರಾಮನಗರ ಜಿಲ್ಲಾದ್ಯಂತ ನಾಲ್ಕು ತಾಲ್ಲೂಕು ಪಟ್ಟಣ ಪ್ರದೇಶಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ಹಾಗೆಯೇ ಜಿಲ್ಲೆಯಾದ್ಯಂತ ಕೆಲವು ಮ್ಯಾಕ್ಸಿ‌ಕ್ಯಾಬ್‌ಗಳು, ಆಟೋಗಳನ್ನು ಹೊರತುಪಡಿಸಿದರೆ ಉಳಿದಂತೆ ಜಿಲ್ಲಾ ವ್ಯಾಪ್ತಿಯ ನಗರ, ಪಟ್ಟಣ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಸದಾ ವಾಹನಗಳಿಂದ ಗಿಜಿಗಿಜಿ ಎನ್ನುತ್ತಿದ್ದ ಬೆಂಗಳೂರು – ಮೈಸೂರು ರಸ್ತೆ, ಕನಕಪುರ – ಮಳವಳ್ಳಿ, ಮಾಗಡಿ – ಬೆಂಗಳೂರು, ಬೆಂಗಳೂರು – ಹಾಸನ ಹೆದ್ದಾರಿ ರಸ್ತೆಗಳು ಸಹ ವಾಹನ ಸಂಚಾರವಿಲ್ಲದೇ ಭಣಗುಡುತ್ತಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿತ್ಯಕ್ಕಿಂತ ವ್ಯಾಪಾರ ವಹಿವಾಟು ತೀರಾ ವಿರಳವಾಗಿತ್ತು. ಮುಷ್ಕರದ ಬಿಸಿ ಅರಿತಿದ್ದ ರೈತರು ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಕೃಷಿ ಉತ್ಪನ್ನಗಳನ್ನು ತಂದಿದ್ದರು.

ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದೆಯಾದರೂ ಮಾರುಕಟ್ಟೆಗೆ ಬಂದಿರುವ ರೈತರ ಸಂಖ್ಯೆ ವಿರಳಾಗಿತ್ತು.

ಮೈಸೂರು ವರದಿ

ಮೈಸೂರಿನಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಮುಖ ಬೀದಿಗಳಲ್ಲಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಕೆಎಸ್‌ಆರ್‌ಟಿಸಿ ಬಸ್ಸುಗಳು ಹೊರತುಪಡಿಸಿ ಉಳಿದ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದವು.

ಬಸ್ ನಿಲ್ದಾಣಗಳು, ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಇಲ್ಲದೆ ಬಿಕೋ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಚಾಮರಾಜನಗರ, ಮಂಡ್ಯ ನಗರಗಳಲ್ಲೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉತ್ತರ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಈ 5 ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜನಜೀವನ ಅಸ್ತವ್ಯಸ್ತಗೊಂಡಿದೆ.

ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಂಗಳೂರು ಸೇರಿದಂತೆ ವಿವಿಧೆಡೆ ಬಂದ್ ಯಶಸ್ವಿಯಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ರಸ್ತೆಗೆ ಇಳಿಯದೆ ಇದ್ದುದರಿಂದ ಜನರು ಪರದಾಡುವಂತಾಯಿತು.

ರಾಯಚೂರು ಜಿಲ್ಲೆಯಾದ್ಯಂತ ಬಂದ್‌ಗೆ ವ್ಯಾಪಕ ಸ್ಪಂದನ ದೊರಕಿತು. ವ್ಯಾಪಾರ ವಹಿವಾಟು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಯಾವುದೇ ಅಹಿತಕರ ಘಟನೆಗಳು ನ‌ಡೆದಿಲ್ಲ.

ವಿವಿಧ ಸಂಘಟನೆಗಳ ಕಾರ್ಮಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಆನೇಕಲ್‌ನಲ್ಲಿ ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ಡಿಪೋ ಮುಂದೆ ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಬೀದಿಗಿಳಿಯದೆ ಜನಸಾಮಾನ್ಯರು ತೊಂದರೆಗೀಡಾಗಿದ್ದರು. ಕೆಲವೆಡೆ ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾದ ವಾಗ್ವಾದ ನಡೆಯಿತು.

Write A Comment