ಕರ್ನಾಟಕ

ಮೋಜಿನಲ್ಲಿ ಪಕ್ಷೇತರರು: ಕಾಂಗ್ರೆಸ್‌ಗೆ ಕೆಲವರ ಬೆಂಬಲ: ಬಿಜೆಪಿಯಿಂದಲೂ ಸದಸ್ಯರಿಗೆ ಗಾಳ

Pinterest LinkedIn Tumblr

bbmpಬೆಂಗಳೂರು: ಕೇರಳದಲ್ಲಿ ಬೀಡುಬಿಟ್ಟಿರುವ ಪಾಲಿಕೆ ಪಕ್ಷೇತರ ಸದಸ್ಯರಲ್ಲಿ ಕೆಲವರು ಸಂಪರ್ಕಕ್ಕೆ ಲಭ್ಯವಾಗಿದ್ದು, ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ತಾವು ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ರೆಸಾರ್ಟ್‌ ರಾಜಕೀಯದಿಂದ ಇತ್ತ ನಗರದ ರಾಜಕೀಯ ವಾತಾವರಣದಲ್ಲಿ ತಳಮಳ ಹೆಚ್ಚಾಗಿದ್ದರೆ, ಅತ್ತ ಪಕ್ಷೇತರ ಸದಸ್ಯರು ಕೇರಳದಲ್ಲಿ ಪ್ರವಾಸದ ಮೋಜು ಅನುಭವಿಸುತ್ತಿದ್ದಾರೆ.

ಕೆಂಪಾಪುರ ಅಗ್ರಹಾರ ವಾರ್ಡ್‌ನ ಸದಸ್ಯೆ ಎಂ.ಗಾಯತ್ರಿ ಅವರಿಗೆ ಕರೆ ಮಾಡಿದಾಗ ಅವರ ಪತಿ ಎಂ.ಗಣೇಶ್‌ ಮಾತಿಗೆ ಸಿಕ್ಕರು. ತಮ್ಮ ಪತ್ನಿ ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.

‘ನನ್ನ ಪತ್ನಿ ಮೊದಲು ಬಿಜೆಪಿಯಲ್ಲೇ ಇದ್ದಳು. ಆದರೆ, ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ನಿರಾಕರಣೆ ಮಾಡಲಾಯಿತು. ಹೀಗಾಗಿ ನನ್ನ ಪತ್ನಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಳು. ಬಿಜೆಪಿ ಬೆನ್ನಿಗೆ ಚೂರಿ ಹಾಕಿದ ಪಕ್ಷ. ಮತ್ತೆ ಆ ಪಕ್ಷದತ್ತ ಹೋಗುವ ಪ್ರಶ್ನೆಯೇ ಇಲ್ಲ. ಹೀಗಾಗಿ ಕಾಂಗ್ರೆಸ್‌ ಸೇರ್ಪಡೆಯಾಗಲು ನಿರ್ಧಾರ ಮಾಡಿದ್ದೇವೆ’ ಎಂದು ವಿವರಿಸಿದರು.

‘ನಾವು ಪ್ರವಾಸದಲ್ಲಿ ಕಾಲ ಕಳೆಯುತ್ತಿದ್ದು, ಯಾವುದೇ ಸಭೆಗಳನ್ನು ನಡೆಸುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ದೊಮ್ಮಲೂರು ವಾರ್ಡ್‌ನಿಂದ ಆಯ್ಕೆಯಾದ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ, ‘ನಮ್ಮ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಹೀಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದೇನೆ’ ಎಂದು ಹೇಳಿದರು. ‘ಮೇಯರ್‌ ಚುನಾವಣೆಗೆ ಇನ್ನೂ ಕಾಲಾವಕಾಶ ಇದೆ. ಅಂತಿಮ ನಿರ್ಧಾರ ಕೈಗೊಳ್ಳಲೂ ಅಷ್ಟು ಸಮಯ ಸಿಕ್ಕಿದೆ’ ಎಂದು ಒಗಟಾಗಿ ತಿಳಿಸಿದರು. ಲಕ್ಷ್ಮೀನಾರಾಯಣ ಅವರಿಗೂ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದರಿಂದ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದರು.

ಸಿದ್ದಾಪುರ ವಾರ್ಡ್‌ನಿಂದ ಆಯ್ಕೆಯಾದ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಸದಸ್ಯ ಮುಜಾಹಿದ್‌ ಪಾಷಾ, ‘ನಾನು ಕೇರಳಕ್ಕೆ ಹೋಗಿಲ್ಲ. ನಗರದಲ್ಲೇ ಇದ್ದು ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಮೂರೂ ಪಕ್ಷಗಳಿಂದ ಬೆಂಬಲಕ್ಕಾಗಿ ಮನವಿ ಬಂದಿದೆ. ಪಕ್ಷದ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ’ ಎಂದು ವಿವರಿಸಿದರು.

ಮಾರತ್‌ಹಳ್ಳಿ ವಾರ್ಡ್‌ನಿಂದ ಆಯ್ಕೆಯಾದ ಪಕ್ಷೇತರ ಸದಸ್ಯ ರಮೇಶ್‌, ‘ನಾನು ಇನ್ನೂ 3–4 ದಿನ ಕೇರಳದಲ್ಲಿದ್ದು ಬಳಿಕ ವಾಪಸ್‌ ಬರುತ್ತೇನೆ. ನಾನು ಈಗಲೇ ಏನನ್ನೂ ಹೇಳುವುದಿಲ್ಲ’ ಎಂದು ತಿಳಿಸಿದರು.

ಎಸ್‌ಡಿಪಿಐನ ಒಬ್ಬರು ಸೇರಿದಂತೆ ಎಂಟು ಜನ ಸ್ವತಂತ್ರವಾಗಿ ಸ್ಪರ್ಧಿಸಿ ಜಯಿಸಿದ್ದು, ಅದರಲ್ಲಿ ಹಲಸೂರು ವಾರ್ಡ್‌ನ ಮಮತಾ ಸರವಣ ಈಗಾಗಲೇ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಕೇರಳದಲ್ಲಿರುವ ಪಕ್ಷೇತರ ಸದಸ್ಯರನ್ನು ಸಂಪರ್ಕಿಸಿ, ಸೆಳೆಯಲು ಬಿಜೆಪಿ ಮುಖಂಡರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ದೂರಿದರು.
*
ಮೊಬೈಲ್‌ ಬಳಕೆ ನಿಷಿದ್ಧ
‘ಬಿಜೆಪಿಯಿಂದ ನಮ್ಮ ಪಕ್ಷದ ಕಾರ್ಪೊರೇಟರ್‌ಗಳನ್ನು ಸೆಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲರಿಗೂ ಮೊಬೈಲ್‌ ಬಳಕೆ ಮಾಡದಂತೆ ಸೂಚಿಸಲಾಗಿದೆ’ ಎಂದು ಜೆಡಿಎಸ್‌ ಶಾಸಕ ಕೆ.ಗೋಪಾಲಯ್ಯ ತಿಳಿಸಿದರು. ‘ನಮ್ಮ ಸದಸ್ಯರೊಂದಿಗೆ ಬಿಜೆಪಿ ಸಂಪರ್ಕಕ್ಕೆ ಯತ್ನಿಸುತ್ತಿರುವುದು ನಮಗೆ ಗೊತ್ತು. ಹೀಗಾಗಿ ನಮ್ಮ ಎಲ್ಲ 14 ಸದಸ್ಯರಿಗೂ ಮೊಬೈಲ್‌ ಬಳಕೆ ಮಾಡದಂತೆ ಸೂಚಿಸಿದ್ದೇನೆ’ ಎಂದು ಹೇಳಿದರು. ‘ನಮ್ಮ ನಾಯಕರು ಶೀಘ್ರವೇ ಕಾಂಗ್ರೆಸ್‌ ಮುಖಂಡರ ಜತೆ ಮಾತುಕತೆ ನಡೆಸಲಿದ್ದು, ಒಪ್ಪಂದ ಏರ್ಪಡಲಿದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಮೈತ್ರಿ ಅನಿವಾರ್ಯ’ ಎಂದು ವಿವರಿಸಿದರು.

Write A Comment