ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಗೈದ ರಾಜ್ಯದ 10 ವಿಶಿಷ್ಠ ಮಹಿಳಾ ಸಾಧಕಿಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರನ್ನು ಗೌರವಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಸಾಕಷ್ಟು ಮಹಿಳಾ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಜನರು ತಮ್ಮ ಕೆಲಸಕ್ಕೆ ಮನ್ನಣೆ ಸಿಗಬೇಕು ಎಂದು ಆಶಿಸುತ್ತಾರೆ. ರಾಜ್ಯದಲ್ಲಿ ಸಾಕಷ್ಟು ಕ್ರಿಯಾತ್ಮಕ ಮಹಿಳೆಯರಿದ್ದು, ಅವರ ಸೇವೆಗೆ ಮನ್ನಣೆ ಸಿಗಬೇಕು. ಕಲೆ, ವಿಜ್ಞಾನ, ಸಮಾಜ ಸೇವೆ ಮತ್ತು ಪೊಲೀಸ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನಾರ್ಹ ವಿಚಾರ. ಈ ಮೂಲಕ ಪತ್ರಿಕಾ ಸಮೂಹ ಇತರರಿಗೂ ಮಾದರಿಯಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಪಾದಕೀಯ ನಿರ್ದೇಶಕರಾದ ಪ್ರಭು ಚಾವ್ಲಾ ಅವರು ಮಾತನಾಡಿ, ಸಾಧನೆಗೈದ ಮಹಿಳೆಯರನ್ನು ಗುರುತಿಸಲು ಮತ್ತು ಅವರನ್ನು ಗೌರವಿಸಲು ಹೆಮ್ಮೆಯಾಗುತ್ತದೆ. ಮನೆ ಕೆಲಸಗಳನ್ನು ಸಂಬಾಳಿಸುವುದರೊಂದಿಗೇ ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಲ್ಟಿಟಾಸ್ಕಿಂಗ್ (ಬಹುಕಾರ್ಯ) ಆಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಶತಮಾನಗಳ ಹಿಂದೆಯೇ ಭಾರತೀಯ ಮಹಿಳೆಯರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಪಡೆದ ಸಾಧಕಿಯರು:
ಸುಕನ್ಯಾ ರಾಮ್ ಗೋಪಾಲ್ (ಘಟಂ ಕಲಾವಿದೆ)
ಶಿಲೋ ಶಿವ ಸುಲೇಮಾನ್ (ತಾಂತ್ರಿಕ ಕಲಾವಿದೆ)
ವಿದ್ಯಾ ಕೊಲ್ಯೂರ್ (ಯಕ್ಷಗಾನ ನಿರೂಪಕರು)
ನೇಮಿಚಂದ್ರ (ಬರಹಗಾರರು ಮತ್ತು ಎಂಜಿನಿಯರ್)
ಜಯ್ನಾ ಕಠಾರಿ (ಮಾನವ ಹಕ್ಕು ವಕೀಲೆ)
ರೋಹಿಣಿ ಗೋಡ್ಬಳೆ (ಕಣ ಭೌತ ಶಾಸ್ತ್ರಜ್ಞೆ)
ಆರ್ ಸುಶೀಲಾ (ಪೊಲೀಸ್ ಇನ್ಸ್ ಪೆಕ್ಟರ್)
ಡಾ. ವಿಜಯಲಕ್ಷ್ಮಿ ದೇಶ್ ಮನೆ (ಸರ್ಜಿಕಲ್ ಆಂಕಲಾಜಿಸ್ಟ್)
ಚಿತ್ರಾ ವಿಶ್ವನಾಥ್ (ವಾಸುಶಿಲ್ಪ ತಜ್ಞರು)
ಹೇಮಾಮಾಲಿನಿ ಮಯ್ಯಾ (ಹೊಟೆಲ್ ಉದ್ಯಮಿ)