ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಸರ್ವ ಪಕ್ಷ ನಿಯೋಗ ಹೋದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಹೆಚ್.ಡಿ.ರೇವಣ್ಣ ಮೊದಲಾದವರಿದ್ದ ಈ ನಿಯೋಗದ ಜತೆ ಮಾತನಾಡಿದ ಪ್ರಧಾನಿ ಮೋದಿ ಅವರು ಇದು ಮೂರು ರಾಜ್ಯಗಳ ವಿಚಾರವಾದ್ದರಿಂದ ತಾನು ಒಂದು ರಾಜ್ಯದ ಪರವಾಗಿ ನಿಲುವು ತೆಗೆದುಕೊಳ್ಳಲು ಆಗುವುದಿಲ್ಲ. ಮೂರು ರಾಜ್ಯಗಳ ಸರ್ವ ಪಕ್ಷಗಳ ನಾಯಕರನ್ನು ಕರೆತನ್ನಿ. ಆನಂತರ ಬೇಕಾದರೆ ಈ ಕುರಿತು ಚರ್ಚಿಸೋಣ ಎಂದು ಕರ್ನಾಟಕದ ನಿಯೋಗಕ್ಕೆ ಪ್ರಧಾನಿಗಳು ನೇರವಾಗಿಯೇ ತಿಳಿಸಿದರು ಎನ್ನಲಾಗಿದೆ.
ಅಲ್ಲದೇ ಮಹಾರಾಷ್ಟ್ರ ಮತ್ತು ಗೋವಾದ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಮೋದಿಯವರು ರಾಜ್ಯದ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆ ಎನ್ನಲಾಗಿದ್ದು ಅದೇ ರೀತಿ ಬಿಜೆಪಿಯವರಿಗೂ ಆಯಾ ರಾಜ್ಯಗಳ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ ಎಂಬ ಸಲಹೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.