ಬೆಂಗಳೂರು: “ದೇವಸ್ಥಾನದಲ್ಲಿ ಪೂಜೆ ಮಾಡೋದು ಬಿಟ್ಟು, ರಾಜಕೀಯಕ್ಕೆ ಬಂದಿದ್ದೀಯಾ? ಮಟನ್ ಕೊಚ್ಚಿದಂತೆ ಕೊಚ್ಚಿ ಹಾಕ್ತೀವಿ. ಮಟನ್ ಅಂಗಡಿ ನೋಡಿದ್ದೀಯಾ?…ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಬ್ರಹ್ಮಣ್ಯನಗರ ವಾರ್ಡ್ ಜೆಡಿಎಸ್ ಅಭ್ಯರ್ಥಿಗೆ ದುಷ್ಕರ್ಮಿಗಳು ಕರೆ ಮಾಡಿ ಬೆದರಿಕೆ ಹಾಕಿರುವ ಪರಿ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಸುಬ್ರಹ್ಮಣ್ಯನಗರ ವಾರ್ಡ್ ಜೆಡಿಎಸ್ ಅಭ್ಯರ್ಥಿ ನಾಗರಾಜ್, ಯಾರೋ ನಮ್ಮ ವಿರೋಧಿಗಳು ನನಗೆ ಬೆದರಿಕೆ ಕರೆ ಮಾಡಿ…ಯಾಕೋ ನಿನಗೆ ಚುನಾವಣೆ..ದೇವಸ್ಥಾನದಲ್ಲಿ ಪೂಜೆ ಮಾಡೋದು ಬಿಟ್ಟು ರಾಜಕೀಯ ಮಾಡ್ತೀದ್ದಿಯಾ…ಇನ್ನೆರಡು ದಿನಗಳಲ್ಲಿ ಸ್ಯಾಂಪಲ್ ತೋರಿಸ್ತೀವಿ ಎಂದು ಧಮ್ಕಿ ಹಾಕಿರುವುದಾಗಿ ತಿಳಿಸಿದ್ದಾರೆ. ಯಾರೋ ಈ ಕರೆ ಮಾಡಿದ್ದಾರೋ ಗೊತ್ತಿಲ್ಲ. ಈಗಾಗಲೇ ದೂರು ನೀಡಿದ್ದೇವೆ. ಚುನಾವಣೆಯಲ್ಲಿ ಜೆಡಿಎಸ್ ಮುನ್ನುಗ್ಗುತ್ತಿರುವುದನ್ನು ನೋಡಿ ಈ ರೀತಿ ನಮ್ಮ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಬ್ರಹ್ಮಣ್ಯನಗರ ವಾರ್ಡ್ ಅಭ್ಯರ್ಥಿ ನಾಗರಾಜ್ ಗೆ ಬೆದರಿಕೆ ಕರೆ ಮಾಡಿರುವುದನ್ನು ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಿಡಿಗೇಡಿಗಳು ನಾಗರಾಜ್ ಅವರ ವಾಹನದ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ದೂರಿದ್ದಾರೆ.
-ಉದಯವಾಣಿ