ಬೆಳಗಾವಿ: ತಾಯಿ ಮತ್ತು ಇಬ್ಬರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಭಟ್‌ನನ್ನು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ರಾತ್ರಿ ವಿಚಾರಣಾಧೀನ ಕೈದಿಗಳು ಥಳಿಸಿದ್ದಾರೆ. ಇಬ್ಬರು ಪುಟ್ಟ ಮಕ್ಕಳನ್ನು ಕೊಂದಿದ್ದೇಕೆ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಇದರಿಂದ ಪ್ರವೀಣ್‌ಗಾಗಿ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿನ ಕುವೆಂಪು ನಗರದಲ್ಲಿ ಈಚೆಗೆ ಹತ್ಯೆ ಪ್ರಕರಣ ನಡೆದಿತ್ತು. ಹತ್ಯೆಗೀಡಾದ ವಿವಾಹಿತ ಯುವತಿಯ ಪಕ್ಕದ ಮನೆ ನಿವಾಸಿ ಪ್ರವೀಣನನ್ನು ಸೋಮವಾರವಷ್ಟೆ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು. ಈತ ಆ ಯುವತಿಯ ಇಬ್ಬರು ಮಕ್ಕಳನ್ನು ತೀರಾ ಬರ್ಬರವಾಗಿ ಹತ್ಯೆ ಮಾಡಿರುವುದೇ ಕೈದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಆರೋಪಿಯನ್ನು ತಮ್ಮೊಟ್ಟಿಗೆ ಇಡಬಾರದೆಂದೂ ಕೈದಿಗಳು ಜೈಲಿನ ಅಧಿಕಾರಿಗಳನ್ನು ಕೋರಿದ್ದಾರೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.
ಪ್ರವೀಣ ಜೈಲಿಗೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ವಿಚಾರಣಾಧೀನ ಕೈದಿಗಳು, ”ರೀನಾ ಜತೆಗಿನ ಅನೈತಿಕ ಸಂಬಂಧ ಬೇಡವಾಗಿದ್ದರೆ ಆಕೆಯ ಮೇಲೆ ಕೋಪ ತೀರಿಸಿಕೊಳ್ಳಬೇಕಿತ್ತು. ಆದರೆ ಆಕೆಯ ಇಬ್ಬರು ಮಕ್ಕಳಾದ ಆದಿತ್ಯ (12) ಹಾಗೂ ಸಾಹಿತ್ಯಾ (5) ಅವರನ್ನೂ ಬರ್ಬರವಾಗಿ ಹತ್ಯೆ ಮಾಡುವ ನೀಚ ಕೆಲಸಕ್ಕೆ ಕೈಹಾಕಿದ್ದೇಕೆ,” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರವೀಣ್ ಎದುರುತ್ತರ ನೀಡಿದ್ದರಿಂದ ಸಿಟ್ಟಿಗೆದ್ದ ಕೈದಿಗಳು ಆತನನ್ನು ಹಿಗ್ಗಾಮುಗ್ಗಾ ಥಳಿಸಿದರು ಎಂದು ಹೇಳಲಾಗಿದೆ.
ಗಲಾಟೆ ನಡೆಯುತ್ತಿರುವ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಜೈಲಿನ ಅಧಿಕಾರಿಗಳು ಪ್ರವೀಣನನ್ನು ರಕ್ಷಿಸಿದ್ದಾರೆ. ”ಆರೋಪಿ ತಪ್ಪು ಮಾಡಿದ್ದರೆ ಆತನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸಲು ಕೋರ್ಟ್ ಇದೆ. ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ನಿಮ್ಮ ಪಾಡಿಗೆ ಸುಮ್ಮನಿದ್ದು ಬಿಡಿ,” ಎಂದು ಅಧಿಕಾರಿಗಳು ಕೈದಿಗಳನ್ನು ಸಮಾಧಾನಪಡಿಸಿದರು ಎಂದು ಜೈಲಿನ ಮೂಲಗಳು ತಿಳಿಸಿವೆ.
ಪ್ರತ್ಯೇಕ ಸೆಲ್‌ಗೆ ಸ್ಥಳಾಂತರ
ಘಟನೆಯ ನಂತರ ಅಧಿಕಾರಿಗಳು ಪ್ರವೀಣನನ್ನು ವಿಚಾರಣಾಧೀನ ಕೈದಿಗಳ ಕೊಠಡಿಯಿಂದ ಬೇರ್ಪಡಿಸಿ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಿದ್ದಾರೆ. ಅಮಾನುಷವಾಗಿ ಅಪರಾಧ ಕೃತ್ಯ ಎಸಗಿ ಬಂದವರ ಮೇಲೆ ಕೈದಿಗಳು ಸಿಟ್ಟಿನಿಂದ ಹಲ್ಲೆ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಅತ್ಯಾಚಾರವೆಸಗಿ ಯುವತಿಯೊಬ್ಬಳನ್ನು ಬಾವಿಗೆ ಎಸೆದಿದ್ದ ಆರೋಪದ ಮೇಲೆ ಬಂಧಿತರಾದ ಇಬ್ಬರನ್ನು ಸಹ ಇದೇ ರೀತಿ ಜೈಲಿನಲ್ಲಿ ಕೈದಿಗಳು ಸೌದೆಯಿಂದ ಹೊಡೆದಿದ್ದರು.
ಮುಗ್ಧ ಮಕ್ಕಳನ್ನು ಹತ್ಯೆ ಮಾಡಿರುವುದು ಕೈದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೈದಿಗಳ ಕೋರಿಕೆಯ ಮೇರೆಗೆ ಪ್ರವೀಣನನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಲಾಗಿದೆ.
-ಬಿ.ವಿ. ಮೂಲಿಮನಿ, ಕಾರಾಗೃಹದ ಅಧೀಕ್ಷಕ