ಲಖನೌ: ರೇಪಿಸ್ಟ್ಗಳ ಪರ ಹೇಳಿಕೆ ನೀಡಿ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ‘ಒಬ್ಬರು ರೇಪ್ ಮಾಡಿದರೆ, ದೂರಿನಲ್ಲಿ ನಾಲ್ಕು ಮಂದಿ ಹೆಸರು ಸೇರಿಸುತ್ತಾರೆ. ನಾಲ್ಕು ಮಂದಿ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಲು ಸಾಧ್ಯವಿಲ್ಲ,’ ಎಂದು ತಮ್ಮಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
‘ಇಂಥ ಹಲವು ಪ್ರಕರಣಗಳು ನನಗೆ ತಿಳಿದಿದೆ. ಒಬ್ಬರು ಅತ್ಯಾಚಾರ ಎಸಗಿದರೆ ದೂರಿನಲ್ಲಿ ನಾಲ್ಕು ಮಂದಿ ಹೆಸರು ಸೇರುವುದು. ಒಬ್ಬರು ಅಪರಾಧ ಎಸಗಿದರೆ ಕುಟುಂಬದ ನಾಲ್ಕು ಸೋದರರನ್ನು ಬಂಧಿಸುತ್ತಾರೆ,’ಎಂದು ಇ-ರಿಕ್ಷಾ ಆಟೊ ವಿತರಣೆ ಕಾರ್ಯಕ್ರಮದಲ್ಲಿ ಎಸ್ಪಿ ವರಿಷ್ಠರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ರಾಜಕೀಯ ವೈಷಮ್ಯಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಲ್ಲದ ಟೀಕೆ ಮಾಡಲಾಗುತ್ತಿದೆ. ಬದಾಯು ಪ್ರಕರಣವನ್ನು ವಿನಾ ಕಾರಣ ದೊಡ್ಡದು ಮಾಡಲಾಯಿತು. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಕೇವಲ ಶೇ.2 ಆದರೆ, ಮಧ್ಯಪ್ರದೇಶದಲ್ಲಿ ಶೇ.9, ರಾಜಸ್ಥಾನದಲ್ಲಿ 7 ಹಾಗೂ ದಿಲ್ಲಿಯ ಪರಿಸ್ಥಿತಿ ಹೀನಾಯವಾಗಿದೆ,’ ಎಂದು ಹೇಳಿದ್ದಾರೆ.
ರೇಪಿಸ್ಟ್ಗಳ ಪರ ವಕಾಲತ್ತು ಮೊದಲಲ್ಲ:
ಅತ್ಯಾಚಾರಿಗಳ ಪರ ವಕಲಾತ್ತು ವಹಿಸಿ ಮುಲಾಯಂ ಹೇಳಿಕೆ ನೀಡಿರುವುದು ಇದು ಮೊದಲ್ಲ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ 2014 ಏಪ್ರಿಲ್ನಲ್ಲಿ ಇಂಥದ್ದೇ ಹೇಳಿಕೆ ನೀಡಿದ್ದರು. ‘ಹುಡುಗರು ಯಾವತ್ತಿದ್ದರೂ ಹುಡುಗರೇ, ಅವರು ತಪ್ಪು ಮಾಡೇ ಮಾಡುತ್ತಾರೆ. ರೇಪ್ ಮಾಡಿದರೆಂದು ಗಲ್ಲು ಶಿಕ್ಷೆ ವಿಧಿಸಲು ಆಗುತ್ತದೆಯೇ…? ಎಂದು ಹೇಳಿದ್ದರು.
ಹುಡುಗರು ಮತ್ತು ಹುಡುಗಿಯರು ಪ್ರೀತಿಯಲ್ಲಿ ಬೀಳುತ್ತಾರೆ. ಬಳಿಕ ಅವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಸಂಬಂಧ ಕೊನೆಗೊಳ್ಳುತ್ತದೆ. ಆಗ ಹುಡುಗಿಯರು ಹುಡುಗ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ನೀಡುತ್ತಾರೆ. ಇದು ಸರಿಯೇ? ಅವರು ದೂರು ನೀಡಿದ ಮಾತ್ರಕ್ಕೆ ಈ ಹುಡುಗರಿಗೆ ಮರಣದಂಡನೆ ವಿಧಿಸಬೇಕೇ? ಅತ್ಯಾಚಾರ ವಿರೋಧಿ ಕಾಯ್ದೆಯೇ ಸರಿ ಇಲ್ಲ. ಅದರಲ್ಲಿ ಬದಲಾವಣೆ ತರುವ ಅಗತ್ಯವಿದೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಬದಲಾಯಿಸಲಾಗುವುದು ಎಂದೂ ಮುಲಾಯಂ ಹೇಳಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.