ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ ಶನಿವಾರ ರಾತ್ರಿ ನಡೆದ ತ್ರಿವಳಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿ ಪ್ರವೀಣ್ ಭಟ್ ನನ್ನು ಬಂಧಿಸಿದ್ದಾರೆ.
‘ಕೊಲೆಯಾದ ರೀನಾ ರಾಕೇಶ್ (35) ಹಾಗೂ ನೆರೆಮನೆಯ ಪ್ರವೀಣ್ (23) ಕಳೆದೊಂದು ಒಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ವೈಮನಸ್ಯದಿಂದ ಪ್ರೇಯಿಸಿ ರೀನಾ ಹಾಗೂ ಆಕೆ ಮಕ್ಕಳನ್ನು ಆರೋಪಿ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ರೀನಾಳನ್ನು ಕೊಲೆ ಮಾಡಿದ ನಂತರ ಎಚ್ಚರಗೊಂಡ ಮಗ ಆದಿತ್ಯಾ(12), ಮಗಳು ಸಾಹಿತ್ಯ(4)ಳನ್ನು ಆರೋಪಿ ಕೊಲೆ ಮಾಡಿದ್ದಾನೆ,’ ಎಂದು ಮಹಾನಗರ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ.
ಕೊಲೆಯಾದ ರಾತ್ರಿ ಮನೆಯಲ್ಲಿ ರೀನಾ, ಆದಿತ್ಯಾ, ಸಾಹಿತ್ಯ ಹಾಗೂ ಸಾಕು ಮಗ ಹರ್ಷ ಇದ್ದರು. ಒಳಗಿನ ಕೊಠಡಿಯಲ್ಲಿ ಮಲಗಿದ್ದ ಹರ್ಷ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಪ್ರೇಮ ವಿವಾಹವಾಗಿದ್ದ ರಾಕೇಶ್, ರೀನಾ ದಂಪತಿ ಬಳ್ಳಾರಿ ಮೂಲದವರು. ಬಟ್ಟೆ ವ್ಯಾಪಾರಿಯಾದ ರಾಕೇಶ್ ಕಳೆದ ಮೂರು ದಿನಗಳಿಂದ ಮನೆಯಲ್ಲಿ ಇರಲಿಲ್ಲ.
ಪ್ರೇಯಿಸಿ ಭೇಟಿಗೆ ಹಗ್ಗ ಕಟ್ಟಿದ್ದ:
ಸಿಎ ಓದುತ್ತಿರುವ ಬಂಧಿತ ಆರೋಪಿ ಪ್ರವೀಣ್ ಭಟ್, ಮಾಜಿ ಯೋಧನ ಪುತ್ರ. ನೆರೆಮನೆ ರೀನಾ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಪ್ರವೀಣ್ ಆಕೆಯ ಮನೆಗೆ ಹೋಗಲು ಮಹಡಿಯಿಂದ ಒಂದು ಹಗ್ಗ ಕಟ್ಟಿದ್ದ ಎಂದು ತಿಳಿದುಬಂದಿದೆ.