ಅಬುಧಾಬಿ: ಆರ್ಥಿಕ ಪ್ರಗತಿಗಾಗಿ ಭಾರತದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸದ್ಯದಲ್ಲೇ 1 ಲಕ್ಷ ಕೋಟಿ ಡಾಲರ್ ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಸೋಮವಾರ ತಿಳಿಸಿದ್ದಾರೆ.
ಸೋಮವಾರ ಕಾರ್ಬನ್ ಮುಕ್ತ ಮಸ್ಡಾರ್ ನಗರಕ್ಕೆ ಭೇಟಿ ನೀಡಿದರು. ಭಾರತದಲ್ಲಿ ಹೂಡಿಕೆ ಮಾಡುವಂತೆ ಯುಎಇ ಉದ್ದಿಮೆಗಳಿಗೆ ಮನವಿ ಮಾಡಿದ ಪ್ರಧಾನಿ, ದೇಶದ 125 ಕೋಟಿ ಜನತೆ ಕೇವಲ ಮಾರುಕಟ್ಟೆ ಅಲ್ಲ. ಮಹಾನ್ ಶಕ್ತಿಯ ಮೂಲ,’ ಎಂದಿದ್ದಾರೆ.
‘ಭಾರತ ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಅಭಿವೃದ್ಧಿಗೆ ದೇಶದಲ್ಲಿ ವಿಪುಲ ಅವಕಾಶಗಳಿವೆ. ಐಎಂಎಫ್, ವಿಶ್ವಬ್ಯಾಂಕ್ ಸಹ ಭಾರತವನ್ನು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದನ್ನು ಒಪ್ಪಿಕೊಂಡಿವೆ,’ ಎಂದಿದ್ದಾರೆ.
ವ್ಯಾಪಾರ ವೃದ್ಧಿ, ಇಂಧನ, ಬಂಡವಾಳ ಹೂಡಿಕೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅರಬ್ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಮಕ್ತೌಮ್ ಜತೆ ಮೋದಿ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ರಾಷ್ಟ್ರಗಳ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.
ವಿಜ್ಞಾನವೇ ಜೀವನ:
ಅರಬ್ ರಾಷ್ಟ್ರಗಳ ಎರಡನೇ ದಿನದ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕ್ಲೀನ್ ಟೆಕ್ ಕಂಪನಿಗಳ ಕೇಂದ್ರವಾಗಿ ವಿನ್ಯಾಸಗೊಂಡಿರುವ ಅರಬ್‌ನ ಹೈಟೆಕ್ ನಗರ ಮಸ್ಡಾರ್‌ಗೆ ಭೇಟಿ ನೀಡಿದರು. ಟಚ್ ಸ್ಕ್ರೀನ್ ನಲ್ಲಿ ತಮ್ಮ ಇ ಸಿಗ್ನೇಚರ್ ಹಾಕಿದ ಪ್ರಧಾನಿ, ವಿಜ್ಞಾನವೇ ಜೀವನ ಎಂದು ಬರೆದು ಎಲ್ಲರ ಗಮನ ಸೆಳೆದರು.
1981ರಲ್ಲಿ ಇಂದಿರಾಗಾಂಧಿ ನಂತರ ಅರಬ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೋದಿ ಅವರನ್ನು ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ವಿಮಾನ ನಿಲ್ದಾಣದಲ್ಲಿ ಭಾನುವಾರ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಅರಬ್ ರಾಷ್ಟ್ರ ಪ್ರವೇಶಿಸಿದ ಕೂಡಲೇ ಮೋದಿ ತಮ್ಮ ಭೇಟಿಯ ಬಗ್ಗೆ ಸಂತಸ ಹಂಚಿಕೊಂಡು ಟ್ವೀಟ್ ಮಾಡಿದ್ದರು. ಅದೂ ಅರಬ್ ಭಾಷೆಯಲ್ಲೇ ಟ್ವೀಟ್ ಮಾಡಿದ್ದು ವಿಶೇಷವಾಗಿತ್ತು.
ಹೆಚ್ಚಿದೆ ಕಾತುರ:
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದು, ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿನ ಅನಿವಾಸಿ ಭಾರತೀಯರು ಕಾತರದಿಂದ ಕಾದಿದ್ದಾರೆ.