ಕುಷ್ಟಗಿ (ಕೊಪ್ಪಳ); ಸಾರಿಗೆ ಬಸ್ ಚಾಲನೆ ವೇಳೆಯಲ್ಲೇ ಹದಯಾಘಾತ ಸಂಭವಿಸಿದರೂ 35 ಪ್ರಯಾಣಿಕರ ಜೀವ ಉಳಿಸಿದ ನಂತರ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 50ರ ಮ್ಯಾದನೇರಿ ಕ್ರಾಸ್ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.
ವಿಜಯಪುರ ಜಿಲ್ಲೆ ಇಂಡಿ ಸಾರಿಗೆ ಘಟಕದ ಸುವಿಹಾರಿ ಬಸ್ ಚಾಲಕ ಅಬ್ದುಲ್ ರೆಹಮಾನ್ ಕೊಟ್ನಾಳ(35) ಹದಯಾಘಾತದಿಂದ ಮೃತರಾದವರು. ಬೆಂಗಳೂರಿನಿಂದ ಇಂಡಿಗೆ ಸುವಿಹಾರಿ ಬಸ್ ಚಾಲನೆ ಮಾಡುತ್ತಿದ್ದಾಗ ಯಲಬುರ್ಗಾ ತಾಲೂಕು ಮ್ಯಾದನೇರಿ ಕ್ರಾಸ್ ಬಳಿ ಚಾಲಕಗೆ ಹದಯಾಘಾತವಾಗಿದೆ. ತಕ್ಷಣ ವೇಗ ಕಡಿಮೆಗೊಳಿಸಿ, ಪಕ್ಕದ ಹೊಲಕ್ಕೆ ನುಗ್ಗಿಸಿ ಬಸ್ ನಿಲ್ಲಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು, ಸಾರಿಗೆ ಸಿಬ್ಬಂದಿ ಏನಾಗುತ್ತಿದೆ? ಎಂದು ತಿಳಿಯುವಷ್ಟರಲ್ಲೇ ಕೈಯಲ್ಲಿ ಸ್ಟಿಯರಿಂಗ್ ಹಿಡಿದ ಸ್ಥಿತಿಯಲ್ಲೇ ಚಾಲಕ ಮತರಾಗಿದ್ದರು.
ಪ್ರಯಾಣಿಕರು ಸುರಕ್ಷಿತ: ಸಾರಿಗೆ ಬಸ್ಸಿನ ಮುಂಭಾಗ ಸ್ವಲ್ಪ ಜಖಂಗೊಂಡಿದೆ. ಆದರೆ ಅದರಲ್ಲಿದ್ದ ಎಲ್ಲ 35 ಪ್ರಯಾಣಿಕರು ಮತ್ತು ಇಬ್ಬರು ಸಾರಿಗೆ ಸಿಬ್ಬಂದಿಗೆ ಕೂದಲೆಳೆಯಷ್ಟೂ ಗಾಯಗಳಾಗಿಲ್ಲ. ಎಲ್ಲರೂ ಚಾಲಕನ ಸಾವಿನ ಬಗ್ಗೆ ಮರುಗಿದರು. ಇಲ್ಲಿನ ತಾಲೂಕು ಆಸ್ಪತ್ರೆಗೆ ಚಾಲಕನ ಮೃತದೇಹ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಕಣ್ಣೀರಾದ ಸಹಚಾಲಕ: ”ಬೆಂಗಳೂರಿನಿಂದ ಹೊಸಪೇಟೆವರೆಗೆ ನಾನೇ ಚಾಲನೆ ಮಾಡುತ್ತಿದ್ದೆ. ಹೊಸಪೇಟೆಯಲ್ಲಿ ಬದಲಾವಣೆ ಮಾಡಿ, ಅಬ್ದುಲ್ ರೆಹಮಾನ್ ಅವರಿಗೆ ಚಾಲನೆ ವಹಿಸಿ ನಿದ್ದೆಗೆ ಜಾರಿದ್ದೆ. ಹದಯಾಘಾತವಾಗಿ ಸಾವಿನ ಅಂಚಿನಲ್ಲಿದ್ದಾಗಲೂ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಎಲ್ಲರ ಜೀವ ಉಳಿಸಿ, ತಾವು ಇಹಲೋಕ ತ್ಯಜಿಸಿದರು’ ಎಂದು ಸಾರಿಗೆ ಬಸ್ ನ ಎರಡನೇ ಚಾಲಕ ಅಲ್ಲಾವುದ್ದೀನ್ ನದಾಫ್ ಕಣ್ಣಂಚಿನಲ್ಲಿ ನೀರು ತಂದರು.
ಕೊಪ್ಪಳದ ಸಾರಿಗೆ ಡಿಸಿ ಎಸ್.ವಿ.ಹಾವೇರಿ, ಕುಷ್ಟಗಿ ಘಟಕ ವ್ಯವಸ್ಥಾಪಕ ಜೆ.ಮಂಜುನಾಥ, ಕಂಟ್ರೋಲರ್ ಕಾಶೀಂಸಾಬ್ ಕಾಯಿಗಡ್ಡಿ, ಪರಶುರಾಮ ಇತರರಿದ್ದರು. ಸ್ವ-ಗ್ರಾಮ ಇಂಡಿಗೆ ಚಾಲಕನ ಶವ ಸಾಗಿಸಲಾಯಿತು. ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.