ಬೆಂಗಳೂರು: ವಿಧಾನಪರಿಷತ್ತಿನ ಉಪ ಸಭಾಪತಿ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ನೀಡಿದ್ದಾರೆ.
ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಇಂದು ಅವರು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಸಲ್ಲಿಸಿದ್ದು, ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ಹೇಳಿ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕಿ ಪಕ್ಷದ ವರಿಷ್ಠರ ಸೂಚನೆಯನ್ನು ಧಿಕ್ಕರಿಸಿ ಜೆಡಿಎಸ್ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡಿದ್ದ ಪುಟ್ಟಣ್ಣರವರಿಂದ ಕೊನೆಗೂ ರಾಜೀನಾಮೆ ಕೊಡಿಸುವಲ್ಲಿ ಜೆಡಿಎಸ್ ವರಿಷ್ಠರು ಯಶಸ್ವಿಯಾಗಿದ್ದಾರೆ.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನ ಹೊಂದಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮಗಿರುವ ಸಂಖ್ಯಾಬಲವನ್ನು ಬಳಸಿಕೊಂಡು ಸಭಾಪತಿ ಹಾಗೂ ಉಪಸಭಾಪತಿ ಸ್ಥಾನವನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದವು.
ಆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಉಪಸಭಾಪತಿಯಾಗಲು ಪುಟ್ಟಣ್ಣ, ಮರಿತಿಬ್ಬೇಗೌಡ ನಡುವೆ ಪೈಪೋಟಿ ನಡೆದು ಅಂತಿಮವಾಗಿ ತಲಾ ಒಂದು ವರ್ಷ ಅವಧಿ ಹಂಚಿಕೆಯ ಒಪ್ಪಂದದಂತೆ ಪುಟ್ಟಣ್ಣನವರನ್ನು ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್ ವರಿಷ್ಠರು ನೇಮಕ ಮಾಡಿದ್ದರು.
ಒಂದು ವರ್ಷದ ನಂತರ ಮರಿತಿಬ್ಬೇಗೌಡರನ್ನು ಉಪಸಭಾಪತಿಯನ್ನಾಗಿ ನೇಮಕ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಒಂದು ವರ್ಷ ಅವಧಿ ಪೂರ್ಣಗೊಂಡರೂ ಉಪಸಭಾಪತಿ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ಕೊಡಲು ಹಿಂದೇಟು ಹಾಕಿದ್ದರು.
ಕಳೆದ ವಾರವೇ ಅವರಿಂದ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಯತ್ನ ನಡೆಸಿದ್ದರಾದರೂ ಯಾರ ಕೈಗೂ ಪುಟ್ಟಣ್ಣ ಸಿಕ್ಕಿರಲಿಲ್ಲ. ಹಾಗಾಗಿ ಅವರಿಂದ ರಾಜೀನಾಮೆ ಪಡೆಯುವ ಪ್ರಯತ್ನ ಸಫಲವಾಗಿರಲಿಲ್ಲ. ಈ ಅಧಿವೇಶನದಲ್ಲಿ ಪುಟ್ಟಣ್ಣನವರಿಂದ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಆ ಸ್ಥಾನಕ್ಕೆ ಜೆಡಿಎಸ್‌ನ ಮರಿತಿಬ್ಬೇಗೌಡರನ್ನು ನೇಮಕ ಮಾಡುವುದು ಜೆಡಿಎಸ್ ಮುಖಂಡರ ಇಚ್ಛೆಯಾಗಿತ್ತು.
ಅಧಿವೇಶನವನ್ನು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಚರ್ಚೆಯ ಕಾರಣ ಎರಡು ದಿನ ಮುಂದುವರಿಸಿದ್ದು ಜೆಡಿಎಸ್ ನಾಯಕರಿಗೆ ಸ್ವಲ್ಪ ಅವಕಾಶ ಸಿಕ್ಕಂತಾಗಿ ಕೊನೆಗೂ ಪುಟ್ಟಣ್ಣ ಅವರಿಂದ ಇಂದು ರಾಜೀನಾಮೆ ಕೊಡಿಸಲು ಸಾಧ್ಯವಾಗಿದೆ.
ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಖಡಕ್ ಸೂಚನೆ ಮೇರೆಗೆ ಪುಟ್ಟಣ್ಣ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದು ಅದರಂತೆ ಇಂದು ಸಭಾಪತಿ ಅವರಿಗೆ ತಮ್ಮ ರಾಜೀನಾಮೆ ನೀಡಿದರು.