ಕರ್ನಾಟಕ

ಕೈ ಬೀಸಿ ಕರೆಯುವ ಉಂಚಳ್ಳಿ ಜಲಪಾತ

Pinterest LinkedIn Tumblr

unchalliಉತ್ತರ ಕನ್ನಡ ಎಂಬುದು ಪ್ರಕೃತಿಯ ವಿಸ್ಮಯವನ್ನು ಹೊದೆದು ಮಲಗಿರುವ ಅದ್ಭುತ ತಾಣ. ಮಲೆನಾಡು, ಕರಾವಳಿ ಬಯಲು ಸೀಮೆಯನ್ನೂ ಸೇರಿದಂತೆ ಭೂಮಿಯ ಎಲ್ಲ ಬಗೆಯ ವೈವಿಧ್ಯದಿಂದ ಕೂಡಿರುವ ಈ ತಾಣದಲ್ಲಿ ಪ್ರಕೃತಿಯ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಇಂತಹ ಉತ್ತರ ಕನ್ನಡದ ಅರಣ್ಯದಲ್ಲಿ ಜುಳುಜುಳು ನಾದಗೈಯ್ಯುತ್ತಾ ವೈಯ್ಯಾರವಾಗಿ ಸಾಗುವ ಅಘನಾಶಿನಿ ನದಿ ತನ್ನ ಒಡಲಿನಲ್ಲಿ ಹಲವು ಜಲಪಾತಗಳನ್ನೂ ಇರಿಸಿಕೊಂಡು ಸೌಂದರ್ಯ ರಾಣಿಯಾಗಿ ಮೆರೆಯುತ್ತಿದ್ದಾಳೆ. ಅದರಲ್ಲಿಯೂ ಕೆಪ್ಪ ಜೋಗವೆಂದೇ ಖ್ಯಾತಿಯಾಗಿರುವ ಉಂಚಳ್ಳಿ ಜಲಪಾತವಂತೂ ನೋಡುಗರ ಕಣ್ಣಿಗೆ ಸ್ವರ್ಗವನ್ನೇ ಧರೆಗಿಳಿಸಿರುವಂತೆ ಭಾಸವಾಗುತ್ತದೆ.

ಸುತ್ತಲೂ ಸೂರ್ಯನ ಬಿಸಿಲು ಭೂಮಿಗೆ ಸ್ಪರ್ಶಿಸದಂತೆ ಪಣ ತೊಟ್ಟಿವೆಯೋ ಎಂಬಂತಿರುವ ಕಡಿದಾದ ಅರಣ್ಯಗಳ ಸಾಲು, ಬಾನೆತ್ತರಕ್ಕೆ ಬೆಳೆದು ನಿಂತಿರುವ ಮರಗಳು ಕಣ್ಮನ ಸೆಳೆದರೆ ಇವೆಲ್ಲವುಗಳ ನಡುವೆ 116 ಮೀಟರ್ ಎತ್ತರದಿಂದ ಕೆಳಗಿಳಿಯುವ ಜಲ ರಾಶಿ ನೋಡುಗರ ತನ್ಮನ ತಣಿಸುತ್ತದೆ. 1865ರಲ್ಲಿ ಬ್ರಿಟೀಶ್ ಅಧಿಕಾರಿಯೊಬ್ಬ ನೋಡಿದನೆಂಬ ಪ್ರತೀತಿಯಿರುವ ಈ ಉಂಚಳ್ಳಿ ಜಲಪಾತ ತಾನು ಕೆಳ ಬೀಳುವ ನೀರಿನ ಶಬ್ದದ ಅಬ್ಬರದಿಂದಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಪ್ಪ ಜೋಗ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.

ಪ್ರಯಾಣದ ದಾರಿ ಹೇಗೆ..?
ಉತ್ತರ ಕನ್ನಡದ ಸಿದ್ದಾಪುರದಿಂದ 35 ಕಿ.ಮಿ ದೂರವಿರುವ ಈ ಜಲಪಾತಕ್ಕೆ ಗೋಳಿಮಕ್ಕಿ ಎಂಬ ಮಾರ್ಗವಾಗಿ ಹೋಗಬಹುದಾಗಿದ್ದು ಶಿರಸಿಯಿಂದಲೂ ಸಹ ಕುಮಟಾ ರಸ್ತೆಯಲ್ಲಿ 12 ಕಿ.ಮಿ ಕ್ರಮಿಸಿ ಹೆಗ್ಗರಣಿ ರಸ್ತೆಯಲ್ಲಿ 25 ಕಿ.ಮೀ. ಚಲಿಸಿದರೆ ಉಂಚಳ್ಳಿ ಜಲಪಾತ ತಲುಪಬಹುದಾಗಿದೆ. ಹತ್ತಿರದಲ್ಲಿ ಯಾವುದೇ ವಸತಿ ವ್ಯವಸ್ಥೆ ಇಲ್ಲದಿರುವುದರಿಂದ ದೂರದ ಪ್ರವಾಸಿಗರು ಶಿರಸಿ ಅಥವಾ ಸಿದ್ದಾಪುರದಲ್ಲಿ ವಸತಿ ಮಾಡಿಕೊಳ್ಳುವುದು ಸೂಕ್ತ.

ಎಚ್ಚರ ತಪ್ಪಿದರೆ ಅಪಾಯ ಖಚಿತ
ಉಂಚಳ್ಳಿ ಜಲಪಾತದ ಬುಡ ತಲುಪಲು ಸರಿಯಾದ ಮಾರ್ಗವಿಲ್ಲ. ಆದರೂ ಕಡಿದಾದ ಇಳಿಜಾರಿನಲ್ಲಿ ಅತ್ಯಂತ ಪ್ರಯಾಸಪಟ್ಟು ಕೆಳಗಡೆ ತೆರಳುತ್ತಾರೆ. ಜಲಪಾತದ ನೀರು ಬೀಳುವ ಸುತ್ತಮುತ್ತಲಿನಲ್ಲಿ ಕಡಿದಾದ ಕಲ್ಲುಗಳಿದ್ದು, ಅದರಲ್ಲೂ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚಿದೆ. ಅದರಲ್ಲಿಯೂ ವರ್ಷಕ್ಕೆ ಒಂದೆರಡು ಸಾವು ಇಲ್ಲಿ ಸಂಭವಿಸುವುದರಿಂದ ಜಾಗೃತೆಯಿಂದ ಹೆಜ್ಜೆಯಿಡುವುದು ಒಳಿತು.

Write A Comment