ಕರ್ನಾಟಕ

ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ವಂಚನೆ; ಮೂವರ ಆರೋಪಿಗಳ ಬಂಧನ

Pinterest LinkedIn Tumblr

aro

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ನಂಬಿಸಿ, ಹಣ ಪಡೆದು ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ವಂಚನೆಗೊಳಗಾದ ಸಿದ್ಧಾರ್ಥ್ ಎಂಬ ವಿದ್ಯಾರ್ಥಿಯ ಪೋಷಕರು ದೇವರಜೀವನಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು. ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರು ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು. 2 ತಂಡಗಳಾಗಿ ಕಾರ್ಯಾಚರಣೆಗೆ ಇಳಿದ ಸಿಸಿಬಿ, ತುಮಕೂರು ಮತ್ತು ಮೈಸೂರಿನಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

‘ತುಮಕೂರಿನ ಹರ್ಷ (32), ಸೈಯದ್ ಅಯೂಬ್ (29) ಹಾಗೂ ಮೈಸೂರಿನ ಶಿವರಾಜ್ (36) ಎಂಬಾತನನ್ನು ಬಂಧಿಸಲಾಗಿದೆ. ನಗರದ ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಸಿದ್ದಾರ್ಥ್ ಎಂಬ ವಿದ್ಯಾರ್ಥಿಯಿಂದ 58 ಲಕ್ಷ ಹಣ ಪಡೆದಿದ್ದ ಆರೋಪಿಗಳು, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಈ ಜಾಲದ ಪ್ರಮುಖ ಆರೋಪಿ ಹರ್ಷ. ತಿಪಟೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಈತ, ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಸೈಯದ್ ಕೂಡ ಎಲೆಕ್ಟ್ರಿಕಲ್ ವಿಷಯದಲ್ಲಿ ವ್ಯಾಸಂಗ ಮಾಡಿ, ಮೂರನೇ ಸೆಮಿಸ್ಟರ್‌ಗೆ ಕಾಲೇಜು ತೊರೆದಿದ್ದ. ಪಿಯುಸಿ ಓದಿರುವ ಮತ್ತೊಬ್ಬ ಆರೋಪಿ ಶಿವರಾಜ್, ರಿಯಲ್ ಎಸ್ಟೆಟ್ ಉದ್ಯಮಿ’ ಎಂದು ಮಾಹಿತಿ ನೀಡಿದರು.

ಮೂಲತಃ ಮಳವಳ್ಳಿಯ ಸಿದ್ದಾರ್ಥ್, ನಗರದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಇಚ್ಛೆ ಹೊಂದಿದ್ದರು. ಈ ಬಗ್ಗೆ ವಿಚಾರಿಸಲು ಪ್ರತಿಷ್ಠಿತ ಕಾಲೇಜುವೊಂದರ ಬಳಿ ಹೋದಾಗ ಪ್ರವೇಶ ದ್ವಾರದಲ್ಲೇ ಅವರನ್ನು ತಡೆದಿದ್ದ ಆರೋಪಿಗಳು, ‘ನಮಗೆ ಕಾಲೇಜಿನ ಆಡಳಿತ ಮಂಡಳಿ ಪರಿಚಯವಿದೆ. ಜತೆಗೆ ಕೆಲ ರಾಜಕಾರಣಿಗಳು ಸಹ ಆಪ್ತರು. ಹಣ ಕೊಟ್ಟರೆ ಯಾವುದೇ ದಾಖಲೆಗಳನ್ನು ಪಡೆಯದೆ ನಾವೇ ಕೆಲಸ ಮಾಡಿಸಿಕೊಡುತ್ತೇವೆ’ ಎಂದು ನಂಬಿಸಿದ್ದರು.

ಇದನ್ನು ನಂಬಿದ ಸಿದ್ಧಾರ್ಥ್, ತಂದೆ ಹೇಮರಾಜ್‌ಗೆ ವಿಷಯ ತಿಳಿಸಿದ್ದರು. ಕೃಷಿಕರಾದ ಹೇಮರಾಜ್, ಜಮೀನು ಮಾರಿ ₨ 58 ಲಕ್ಷ ಹೊಂದಿಸಿ ಕೊಟ್ಟಿದ್ದರು. ಹಣ ಸಿಗುತ್ತಿದ್ದಂತೆಯೇ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

‘ತಮ್ಮನ್ನು ಭೇಟಿಯಾಗುತ್ತಿದ್ದ ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಆರೋಪಿಗಳು ಕಾಯಂ ಮೊಬೈಲ್ ಸಂಖ್ಯೆ ಅಥವಾ ವಿಳಾಸವನ್ನು ಕೊಡುತ್ತಿರಲಿಲ್ಲ. ಹರ್ಷನ ಬಳಿಯೇ ಹತ್ತು ಮೊಬೈಲ್‌ ಹಾಗೂ ನೂರಕ್ಕೂ ಹೆಚ್ಚು ಸಿಮ್‌ಗಳಿದ್ದವು. ಆದರೆ, ಒಮ್ಮೆ ಆತ ಕಾಯಂ ಮೊಬೈಲ್ ಸಂಖ್ಯೆಯಿಂದ ಸಿದ್ದಾರ್ಥ್‌ಗೆ ಕರೆ ಮಾಡಿದ್ದ. ಆ ಸಂಖ್ಯೆಯ ವಾಟ್ಸ್‌ ಆ್ಯಪ್‌ ಪ್ರೊಫೈಲ್ ಚಿತ್ರವನ್ನು ಸಿದ್ದಾರ್ಥ್‌ ಡೌನ್‌ಲೋಡ್ ಮಾಡಿಕೊಂಡಿದ್ದರು’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಮೊಬೈಲ್ ಕರೆಗಳ ವಿವರ ಆಧರಿಸಿ ತನಿಖೆ ನಡೆಸಿದಾಗ ಆರೋಪಿ ತುಮಕೂರಿನವನು ಎಂದು ಗೊತ್ತಾಯಿತು. ಅಲ್ಲಿಗೆ ತೆರಳಿ ಆತನ ಚಿತ್ರವನ್ನು ತೋರಿಸಿದಾಗ ಆತ ಹರ್ಷ ಎಂಬುದು ಖಚಿತವಾಯಿತು. ಸಮೀಪದ ಕಾರೇಹಳ್ಳಿಯ ಸಂಬಂಧಿಕರ ಮನೆಯಲ್ಲಿ ಹರ್ಷ ಸಿಕ್ಕಿಬಿದ್ದ.

ವಿಚಾರಣೆ ವೇಳೆ ಆತ ನೀಡಿದ ಸುಳಿವಿನಿಂದ ಇತರರನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು. ಇವರು ಐದು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದರು. ಹರ್ಷ ಮತ್ತು ಸೈಯದ್ ವಿರುದ್ಧ ಮಂಡ್ಯ ಪೂರ್ವ ಪೊಲೀಸ್ ಠಾಣೆ ಹಾಗೂ ನಗರದ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಜಾಲದ ಬಗ್ಗೆ ಎಚ್ಚರಜಾಲದ ಬಗ್ಗೆ ಎಚ್ಚರ
‘ವಿವಿಧ ಕೋರ್ಸ್‌ಗಳ ಸೀಟು ಕೊಡಿಸುವುದಾಗಿ ವಂಚನೆ ಮಾಡುವ ದೊಡ್ಡ ಜಾಲವೇ ನಗರದಲ್ಲಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಎಚ್ಚರ ವಹಿಸಬೇಕು. ಮಧ್ಯವರ್ತಿಗಳ ಮೂಲಕ ಸೀಟು ಪಡೆಯುವ ಪ್ರಯತ್ನ ಬಿಟ್ಟು, ನೇರ ಕಾಲೇಜು ಆಡಳಿತ ಮಂಡಳಿಯನ್ನೇ ಸಂಪರ್ಕಿಸಬೇಕು’ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Write A Comment