ಕರ್ನಾಟಕ

ರೈತರಿಗೆ ಸಾಂತ್ವನ ಹೇಳಲು 2ತಿಂಗಳು ಬೇಕಿತ್ತಾ : ಸರ್ಕಾರಕ್ಕೆ ಬರಗೂರು ಪ್ರಶ್ನೆ

Pinterest LinkedIn Tumblr

barguru-ramchandra75959ಬೆಂಗಳೂರು,ಜು.18- ಅನ್ನದಾತರ ನಿರಂತರ ಸಾವಿನಸರಣಿ ವರದಿಯಾಗುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು, ಸಚಿವರು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ ಸಾಂತ್ವನ ಹೇಳಲು ಎರಡು ತಿಂಗಳ ಕಾಲಾವಕಾಶ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಕಿಡಿಕಾರಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡರು ತಮಗೆ ಬಂದಿದ್ದ ಅಮೂಲ್ಯ ಕೊಡುಗೆಗಳನ್ನು ಹರಾಜು ಹಾಕಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಧನ ಸಹಾಯ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಪ್ರಸ್ತುತ ರಾಜಕೀಯ ನಾಯಕರ ನಡವಳಿಕೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದೇಶದಲ್ಲಿ 2005ರಿಂದ ಈವರೆಗೂ ಸುಮಾರು ಸುಮಾರು 1.50ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ  ಏಪ್ರಿಲ್‌ನಿಂದ ಈವರೆಗೂ 102 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸಚಿವರಿಗೆ, ಶಾಸಕರಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಎರಡು ತಿಂಗಳ ಕಾಲಾವಕಾಶ ಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು. ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಪರಸ್ಪರ ಜಗಳವಾಡುವುದನ್ನು ಬಿಟ್ಟು ಎಲ್ಲರೂ ಒಂದೇ ವೇದಿಕೆಗೆ ಬಂದು ನಿಮ್ಮೊಂದಿಗೆ ನಾವಿದ್ದೇವೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಕೃಷಿ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುತ್ತೇವೆ ಎಂದು ಭರವಸೆ ನೀಡಿ ಮತ್ತು ಅದರಂತೆ ನಡೆದುಕೊಳ್ಳಿ. ಅದನ್ನು ಬಿಟ್ಟು ಆಡಳಿತ ಪಕ್ಷ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದು, ಪ್ರತಿಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಮಾಡಿ ಕಾಲಹರಣ ಮಾಡಬೇಡಿ ಎಂದು ಸಲಹೆ ನೀಡಿದರು.

ಭಿನ್ನಾಭಿಪ್ರಾಯಗಳನ್ನು ಮರೆತು ರಾಜಕೀಯ ಪಕ್ಷಗಳು ಒಂದು ವೇದಿಕೆಯಲ್ಲಿ ನಿಂತು ರೈತರ ಪರವಾಗಿ ಮಾತನಾಡುವ ಮೂಲಕ ದೇಶದಲ್ಲೇ ಆದರ್ಶಪ್ರಾಯದವಾದ ಸಂಪ್ರದಾಯವನ್ನು ಹುಟ್ಟುಹಾಕಬೇಕು. ಅದನ್ನು ಬಿಟ್ಟು ಚಿಲ್ಲರೆ ರಾಜಕಾರಣ ಮಾಡಬೇಡಿ ಎಂದು ಹೇಳಿದರು.
ಜಾಗತೀಕರಣ ಏಕಮುಖವಾಗಿರುವುದರಿಂದ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಭಾರತ ವಿದೇಶಿ ವಸ್ತುಗಳ ಮಾರುಕಟ್ಟೆಯಾಗಿದೆ. ಚೀನಾದಿಂದ ರೇಷ್ಮೆ, ಸಕ್ಕರೆಯನ್ನು  ಆಮದುಕೊಳ್ಳುತ್ತಿದ್ದೇವೆ. ನಮ್ಮ ರೈತರ ಕೃಷಿ ಉತ್ಪನ್ನಗಳಿಗೆ ಬೆಲೆಯಿಲ್ಲದಂತಾಗುತ್ತಿದೆ. ಇಂತಹ ಏಕಮುಖ ಜಾಗತೀಕರಣ ನಮ್ಮ ರೈತರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದು ವಿಷಾದಿಸಿದರು. 20ನೆ ಶತಮಾನ ಆತ್ಮವಿಶ್ವಾಸದಿಂದ ಕೂಡಿತ್ತು. 21ನೇ ಶತಮಾನ ನಮ್ಮನ್ನು ಅಸಹಾಯಕತೆಗೆ ದೂಡುತ್ತಿದೆ. ಕಾರ್ಮಿಕರು, ದುಡಿಯುವ ವರ್ಗ, ರೈತರು ಅಸಾಯಕತೆಯಿಂದ ಅಧೀರರಾಗಿದ್ದಾರೆ. ಕೃಷಿ ಕ್ಷೇತ್ರ ಸಂಘಟಿತ ವಲಯವಾಗಿದ್ದು,  ಅಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಲೆಕ್ಕ ಸಿಗುತ್ತಿದೆ.

ಅಸಂಘಟಿತ ಕಾರ್ಮಿಕರು ಲೆಕ್ಕವಿಲ್ಲದಷ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮಗೆ ಅದು ಕಾಣುತ್ತಿಲ್ಲ. ದೇಶದಲ್ಲಿ ವರ್ಷಕ್ಕೆ 25 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಶೇ.56ರಷ್ಟು 6ರಿಂದ 13ವರ್ಷದ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ನಮ್ಮಲ್ಲಿ ಆರ್ಥಿಕ ಸುಧಾರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು ಸಾಮಾಜಿಕ ಸುಧಾರಣೆಯ ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂದು ಹೇಳಿದರು. ಶಿಕ್ಷಣ, ಆರೋಗ್ಯದಂತಹ ಸೇವಾ ಕ್ಷೇತ್ರಗಳು ಉದ್ಯಮ ಕ್ಷೇತ್ರಗಳಾಗಿವೆ. ಮಾನವೀಯತೆ ಮರೆಯಾಗಿದೆ. ಇದು ಕಿರೀಟಗಳ ಕಾಲವಲ್ಲ. ನಿಲ್ಲದ ಕಾಟಗಳ ಕಾಲ. ಗದೆಯ ಕಾಲವಲ್ಲ, ಬಡವರಿಗೆ ಒದೆಯ ಕಾಲ, ಕತ್ತಿಯ ಕಾಲವಲ್ಲ, ಬರಿದಾದ ಬುತ್ತಿಗಳ ಕಾಲ. ಹೀಗಾಗಿ ನಾರಾಯಣಗೌಡರು ತಮಗೆ ಬಂದಿದ್ದ ಕತ್ತಿ, ಗದೆ, ಕೀರಿಟಗಳನ್ನು  ಸಾಂಕೇತಿಕವಾಗಿ ಹಾರಾಜು ಹಾಕಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಮಕ್ಕಳ ಶಿಕ್ಷಣದ ನೆರವಿಗೆ ಹಣ ನೀಡುತ್ತಿದ್ದಾರೆ ಎಂದು ತಿಳಿಸಿದರು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ಸಚಿವರು,ಶಾಸಕರು ಕೂಡ ತಮಗೆ ಬಂದಿದ್ದ ಇಂತಹ ಉಡುಗೊರೆಗಳನ್ನು ಹರಾಜು ಹಾಕಿ ತಮ್ಮ  ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೆರವು ನೀಡಬೇಕೆಂದು  ಒತ್ತಾಯಿಸಿದರು. ಹಿರಿಯ ಸಾಹಿತಿ ದೆ.ಜವರೇಗೌಡ, ಸಿದ್ದಲಿಂಗಯ್ಯ, ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Write A Comment