ಕರ್ನಾಟಕ

ಆರ್‌ಟಿಪಿಎಸ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್

Pinterest LinkedIn Tumblr

RTPS-364874959578685ರಾಯಚೂರು, ಜು.16-ಬೂದಿ ಮಿಶ್ರಿತ ನೀರನ್ನು ಕೃಷ್ಣಾ ನದಿಗೆ ಬಿಡುತ್ತಿರುವ  ಹಿನ್ನೆಲೆಯಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್)ಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೊಟೀಸ್ ಮೇಲೆ ನೋಟಿಸ್ ನೀಡುತ್ತಿದೆ. ಆದರೆ, ಆರ್‌ಟಿಪಿಎಸ್

ಅಧಿಕಾರಿಗಳು ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ಗೆ ತಲೆಕೆಡಿಸಿಕೊಂಡಿಲ್ಲ. ತಳಬೂದಿ ಮಿಶ್ರಿತ ನೀರನ್ನು ಕೃಷ್ಣಾ ನದಿಗೆ ಬಿಡದಂತೆ ಕ್ರಮಕೈಗೊಂಡು 3 ದಿನದಲ್ಲಿ ವರದಿ ಸಲ್ಲಿಸುವಂತೆ ರಾಯಚೂರಿನಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಜು.2 ಹಾಗೂ 6 ರಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಿ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ ತಳಬೂದಿಯನ್ನು ತೆರೆದ ಲಾರಿ, ಟ್ಯಾಕ್ಟರ್‌ಗಳಿಗೆ ತುಂಬುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು. ಹಾರುಬೂದಿಯನ್ನು ಸಿಮೆಂಟ್ ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಪೂರೈಸುವಾಗ ಒದ್ದೆ ಮಾಡಿ ನೀಡಬೇಕು.

ಈ ಮೂಲಕ ಮಾಲಿಣ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ ಈ ನೋಟಿಸ್‌ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ಕಚೇರಿ ಆರ್‌ಟಿಪಿಎಸ್‌ಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಿದೆ. ತಳಬೂದಿಯನ್ನು ಶೇಖರಣಾ ಹೊಂಡಗಳಿಗೆ ಸಾಗಿಸಿದ ನೀರನ್ನು ಪುನರ್ಬಳಕೆ ಮಾಡಬೇಕೆಂಬ ನಿರ್ದೇಶನ ಉಲ್ಲಂಗಿಸಿ ತಳಬೂದಿ ಮಿಶ್ರಿತ ನೀರನ್ನು ನೇರವಾಗಿ ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಅಲ್ಲದೆ, ತೆರೆದ ಹೊಂಡ ಹಾಗೂ ಬ್ಯಾರೆಲ್‌ಗಳಲ್ಲಿ ತೈಲ ಸಂಗ್ರಹಿಸುತ್ತಿರುವುದು ಕಂಡು ಬಂದಿದೆ. ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಈ ತೈಲ ಮಳೆಗಾಲದಲ್ಲಿ ಕೃಷ್ಣಾ ನದಿಯನ್ನು ಸೇರುವ ಸಾಧ್ಯತೆಗಳಿವೆ. ಇನ್ನು ಮುಂದೆ ಕೃಷ್ಣಾ ನದಿಗೆ ಕಲುಷಿತ ನೀರನ್ನು ಹರಿಸಿದ್ದೇ ಆದರೆ ದಂಡನೆಗೆ ಗುರಿಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.  ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ವಿಭಾಗೀಯ ಕಚೇರಿ ಅಧಿಕಾರಿಗಳು ಎಚ್ಚರಿಕೆ ನೋಟಿಸ್‌ನಲ್ಲಿ ಆರ್‌ಟಿಪಿಎಸ್‌ಗೆ ಯಾವುದೇ ಕಾಲಮಿತಿ ಹಾಕದಿರುವುದು ಅಚ್ಚರಿಯ ವಿಷಯವಾಗಿದೆ.

Write A Comment