ಕರ್ನಾಟಕ

ಬಾಬುರಾವ್ ಚಿಂಚನಸೂರ್ ಪ್ರಕರಣ: ಜೀವ ಬೆದರಿಕೆ ಹಿನ್ನೆಲೆ ಭದ್ರತೆ ಕೋರಿದ ಅಂಜನಾ

Pinterest LinkedIn Tumblr

chinಬೆಂಗಳೂರು; ರಾಜ್ಯದ ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ನನ್ನ ಬಳಿ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಬೆಂಗಳೂರಿನ ಮಹಿಳಾ ಉದ್ಯಮಿ ಅಂಜನಾ ಎ.ಶಾಂತವೀರ್ ಅವರು ಪ್ರಸ್ತುತ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದು, ನನಗೆ ಜೀವ ಬೆದರಿಕೆ ಹಾಕಲಾಗುತ್ತಿದ್ದು ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ನಿನ್ನೆ ಸಂಜೆ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದ ಅಂಜನಾ, ಅಲ್ಲದೆ ಕಳೆದ ಜುಲೈ 4ರಂದು ನಗರದ ನಾಗರಬಾವಿ ಸಮೀಪ ಕೆಲವರು ನನ್ನನ್ನು ಅಡ್ಡಗಟ್ಟಿ ಪ್ರಾಣ ಬೆದರಿಕೆ ಹಾಕಿದ್ದರು. ಸಚಿವರ ವಿರುದ್ಧವೇ ದೂರು ದಾಖಲಿಸುತ್ತೀಯಾ ಎಂದು ಏಕ ವಚನದಲ್ಲಿ ಧಮಕಿ ಹಾಕಿದ್ದರು. ಆದರೆ ಆ ವೇಳೆಯಲ್ಲಿ ನನಗೆ ಭಯವಾದ ಕಾರಣ ನಾನು ಏನನ್ನೂ ಪ್ರತಿಕ್ರಿಯಿಸಲಿಲ್ಲ. ಆದರೆ ಜುಲೈ 7ರಂದು ಆ ಬಗ್ಗೆ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೂ ಜೀವ ಭಯ ಕಾಡುತ್ತಿದ್ದು, ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮಾಧ್ಯಮಗಳೊಂದಿಗೆ ಉದ್ಯಮಿ ಅಂಜನಾ ಅವರೇ ಖುದ್ದು ಪ್ರತಿಕ್ರಿಯಿಸಿದ್ದು, ಜ್ಞಾನಭಾರತಿ ಠಾಣೆಯಿಂದ ಭದ್ರತೆ ಒದಗಿಸುವ ಸಂಬಂಧ ಪೊಲಾಸರು ನನಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಸಚಿವರು ಪ್ರಭಾವಿ ವ್ಯಕ್ತಿಯಾಗಿದ್ದು, ನನ್ನ ಪ್ರಾಣದ ಮೇಲೆ ನನಗೆ ಭಯವಿದೆ. ಆದ್ದರಿಂದ ಭದ್ರತೆಯನ್ನು ಒದಗಿಸಬೇಕೆಂದು ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಆಯುಕ್ತರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಸೂಕ್ತ ಭದ್ರತೆ ಒದಗಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದರು.

ಏನಿದು ಪ್ರಕರಣ?:
ದೂರುದಾರೆ ಅಂಜನಾ ಅವರ ಪ್ರಕಾರ, ಸಚಿವ ಬಾಬುರಾವ್ ಚಿಂಚನಸೂರ್ ಅವರು, ತಮ್ಮ ಒಡೆತನದಲ್ಲಿರುವ 3 ಕಂಪನಿಗಳು ಪ್ರಸ್ತುತ ನಷ್ಟದಲ್ಲಿವೆ. ಅವುಗಳನ್ನು ಪುನಶ್ಚೇತನಗೊಳಿಸಬೇಕಾದ ಅನಿವಾರ್ಯತೆ ಇದ್ದು, ಹಣದ ಅಗತ್ಯವಿದೆ. ಆದ್ದರಿಂದ ತಾವು ಹಣ ನೀಡಬೇಕೆಂದು ಸಚಿವರು ನನ್ನ ಬಳಿ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಅವರಿಗೆ 11 ಕೋಟಿ 88 ಲಕ್ಷ ರೂಗಳನ್ನು 2012ರಲ್ಲಿ ನೀಡಿದ್ದೆ. ಈ ಸಂಬಂಧ ಸಚಿವರು ನನಗೆ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿದೆ. ಆದರೆ ಪ್ರಸ್ತುತ ಆ ಬಗ್ಗೆ ಸಚಿವರಲ್ಲಿ ತಿಳಿಸಿದರೆ ಹಣ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಸಚಿವರ ವಿರುದ್ಧ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ಬೆಂಬಲಿಗರು ಅಂಜನಾ ಅವರಿಗೆ ಜೀವಬೆದರಿಕೆ ಹಾಕುತ್ತಿರಬಹುದು ಎಂದು ಹೇಳಲಾಗುತ್ತಿದೆ.

Write A Comment