ಕರ್ನಾಟಕ

ಸಿದ್ದು ವಿರುದ್ಧ ಮುನಿಸಿಕೊಂಡ ಅಂಬಿ; ಕೊನೆಗೂ ಸಂಧಾನ ಫಲಪ್ರದ !

Pinterest LinkedIn Tumblr

ambi

ಮಂಡ್ಯ/ಬೆಳಗಾವಿ, ಜು.9: ಅಪೆಕ್ಸ್ ಬ್ಯಾಂಕ್‌ಗೆ ಮಂಡ್ಯ ಜಿಲ್ಲೆಯಿಂದ ನಿರ್ದೇಶಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ನಾಮನಿರ್ದೇಶನಗಳನ್ನು ಮಾಡುವಾಗ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳಿಗೆ ಅಸಮಾಧಾನದ ಪತ್ರ ಬರೆದು ರಾಜೀನಾಮೆ ನೀಡುವ ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದ ವಸತಿ ಸಚಿವ ಅಂಬರೀಶ್ ಅವರನ್ನು ಸಮಾಧಾನಪಡಿಸುವಲ್ಲಿ ಸಚಿವರಾದ ಮಹದೇವಪ್ರಸಾದ್, ಎಚ್.ಸಿ.ಮಹಾದೇವಪ್ಪ ಹಾಗೂ ಇತರೆ ನಾಯಕರು ಸಂಧಾನ ನಡೆಸಿದ್ದಾರೆ.

ವಸತಿ ಸಚಿವ ಹಾಗೂ ಜಿಲ್ಲೆ ಉಸ್ತುವಾರಿಯಾಗಿರುವ ಅಂಬರೀಶ್, ನಿನ್ನೆ ಮುಖ್ಯಮಂತ್ರಿಗಳಿಗೆ ಖಾರವಾಗಿ ಪತ್ರ ಬರೆದು ನಂಬಿಕೆ, ವಿಶ್ವಾಸ, ನಿಷ್ಠೆಯಿಂದ ತಾವು ವಹಿಸಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದೇನೆ. ನಿಮ್ಮಿಂದ ನನಗೆ ನಿರೀಕ್ಷಿತ ಸಹಕಾರ ಸಿಗದಿರುವುದು ಖೇದಕರ ಸಂಗತಿ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಿಲ್ಲಾ ಮಟ್ಟದ ನಾಮನಿರ್ದೇಶನಗಳು ರಾಜಕೀಯ ತೀರ್ಮಾನಗಳನ್ನು ತೆಗೆದು ಕೊಳ್ಳುತ್ತಿರುವುದು ನನಗೆ ಹಾಗೂ ನನ್ನ ಬೆಂಬಲಿಗರಿಗೆ ನೋವು ತಂದಿದೆ ಎಂದಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ವೇಳೆ ನಿಮ್ಮ ತೀರ್ಮಾನವನ್ನು ನಾನು ಗೌರವಿಸಿದ್ದೇನೆ. ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಆಯ್ಕೆಯನ್ನು ನನ್ನ ಅಭಿಪ್ರಾಯದಂತೆ ಮಾಡಲು ಸಹಕಾರ ಸಚಿವರ ಮೂಲಕ ಸೂಚಿಸಿದ್ದೀರಾದರೂ ನನ್ನ ಅಭಿಪ್ರಾಯ ಪಡೆಯದೆ ನೇಮಕ ಮಾಡಿರುವುದು ನನಗೆ ತೀವ್ರ ಬೇಸರ ಮೂಡಿಸಿದೆ ಎಂದು ಪತ್ರ ಬರೆದು ಅವರು ನಿನ್ನೆ ಕಲಾಪದಲ್ಲೂ ಕೂಡ ಪಾಲ್ಗೊಳ್ಳದೆ ಬೆಳಗಾವಿಯಿಂದ ಬೆಂಗಳೂರಿಗೆ ಹಿಂದಿರುಗಿದರು.

ಈ ವಿಷಯ ತಿಳಿದ ತಕ್ಷಣವೆ ವಿವಿಧ ರಾಜಕೀಯ ಬೆಳವಣಿಗೆಗಳು ನಡೆದವು. ಅಸಮಾಧಾನಗೊಂಡ ಅಂಬರೀಶ್ ಪರೋಕ್ಷವಾಗಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದರಲ್ಲದೆ ಬೆಂಗಳೂರಿಗೆ ಹೋದ ಕೂಡಲೇ ಆದಿಚುಂಚನಗಿರಿ ಪೀಠಾಧ್ಯಕ್ಷರ ಬಳಿ ತೆರಳಿ ತಮಗಾಗಿರುವ ನೋವನ್ನು ಮನವರಿಕೆ ಮಾಡುವುದಾಗಿ ಹೇಳಿದರು.

ಇದರಿಂದ ಮುಂದಾಗಬಹುದಾದ ಪರಿಸ್ಥಿತಿಯನ್ನು ಅರಿತ ಮುಖ್ಯಮಂತ್ರಿಗಳು ಕೂಡಲೇ ಸಚಿವರಾದ ಮಹಾದೇವಪ್ರಸಾದ್ ಹಾಗೂ ಎಚ್.ಸಿ.ಮಹದೇವಪ್ಪನವರು ಅಂಬರೀಶ್ ಜೊತೆ ಸಂಧಾನ ನಡೆಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಅಂಬರೀಶ್ ನಾನು ಮಧ್ಯವರ್ತಿಗಳೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದಾಗ ಮುಖ್ಯಮಂತ್ರಿಗಳು ನಾನೇ ಅಂಬರೀಶ್ ಅವರೊಂದಿಗೆ ಮಾತನಾಡುತ್ತೇನೆ. ಮುಂದಿನ ತಿಂಗಳು ಮಂಡ್ಯ ಜಿಲ್ಲಾ ಕಾಂಗ್ರೆಸ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಅಂಬರೀಶ್‌ರವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ತಮ್ಮನ್ನು ನಿರ್ಲಕ್ಷಿಸಿರುವ ಬಗ್ಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ. ವಿಧಾನಸಭೆ ಕಲಾಪ ಮುಗಿದ ಮೇಲೆ ತಮ್ಮೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಇದರಿಂದ ಕೊಂಚ ಸಮಾಧಾನಗೊಂಡ ಅಂಬರೀಶ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಇಂದು ಯಾವುದೇ ಮಠಕ್ಕೆ ಹೋಗುವುದಿಲ್ಲವೆಂದು ಅಂಬಿ ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಸಿದ್ದರಾಮಯ್ಯ ಬೀಸೊ ದೊಣ್ಣೆಯಿಂ ದ ತಪ್ಪಿಸಿಕೊಂಡಿದ್ದಾರೆ. ದೂರವಾಣಿ ಮೂಲಕ ಅಂಬರೀಶ್ ಜೊತೆ ಮುಖ್ಯಮಂತ್ರಿಗಳು ನಡೆಸಿದ ಮಾತುಕತೆ ಫಲಪ್ರದವಾಗಿದೆ.

Write A Comment