ಕನ್ನಡ ವಾರ್ತೆಗಳು

ಸೆಪ್ಟಂಬರ್‌ನಲ್ಲಿ ಪಣಂಬೂರು ಬೀಚ್‌ನಲ್ಲಿ ಸರ್ಫಿಂಗ್ ಉತ್ಸವ

Pinterest LinkedIn Tumblr

Dc_Ibrahim_Pics

ಮಂಗಳೂರು, ಜುಲೈ.09:  ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಮುದ್ರದಲ್ಲಿ ಸಾಹಸಮಯ ಕ್ರೀಡೆಗಳ ಪ್ರದರ್ಶನ ಸರ್ಫಿಂಗ್ ಕ್ರೀಡಾಕೂಟವು ಸೆಪ್ಟಂಬರ್‌ನಲ್ಲಿ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆ ನಡೆಯಿತು. ಸೆಪ್ಟಂಬರ್‌ನಲ್ಲಿ ಸಮುದ್ರದಲ್ಲಿ ಗಾಳಿಯ ಪ್ರಮಾಣವು ಸರ್ಫಿಂಗ್ ಕ್ರೀಡೆ ನಡೆಸುವುದಕ್ಕೆ ಪೂರಕವಾಗಿರುವುದರಿಂದ ಆ ಸಂದರ್ಭದಲ್ಲಿಯೇ ಕ್ರೀಡೆ ನಡೆಸುವುದು ಸೂಕ್ತವಾಗಿದೆ. ಸೆಪ್ಟಂಬರ್‌ನಲ್ಲಿಯೇ ಚೆನ್ನೈನಲ್ಲಿ ಏಶಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್ ನಡೆಯಲಿದ್ದು, ಆ ಬಳಿಕ ಮಂಗಳೂರಿನಲ್ಲಿ ಸೆಪ್ಟಂಬರ್ 25ರಿಂದ 27 ರವರೆಗೆ ಕ್ರೀಡಾಕೂಟ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸಭೆಯಲ್ಲಿ ಮಾತನಾಡಿ, ಸರ್ಫಿಂಗ್ ಕ್ರೀಡಾಕೂಟಕ್ಕೆ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆಯು 24 ಲಕ್ಷ ರೂ. ಬಿಡುಗಡೆಗೊಳಿಸಿದೆ. ಕ್ರೀಡಾಕೂಟದ ಯಶಸ್ಸಿಗೆ ವಿವಿಧ ಗಣ್ಯರನ್ನೊಳಗೊಂಡ ಮತ್ತು ತಜ್ಞರ ಸಮಿತಿ ರಚಿಸಲಾಗುವುದು. ಮಂಗಳೂರಿನಲ್ಲಿ ನಡೆಯುವ ಈ ಕ್ರೀಡಾಕೂಟವು ಜಿಲ್ಲೆಯ ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು.

ಭಾರತೀಯ ಸರ್ಫಿಂಗ್ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುಮಾರ್ ಸಭೆಯಲ್ಲಿ ಮಾತನಾಡಿ, ಸರ್ಫಿಂಗ್ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯ, ಥಾಯ್‌ಲ್ಯಾಂಡ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರು ಬರಲಿದ್ದಾರೆ. ಕ್ರೀಡಾಕೂಟದಲ್ಲಿ ಸರ್ಫಿಂಗ್‌ಗೆ ಸಂಬಂಧಪಟ್ಟ ಇತರ ಪೂರಕ ಸಾಹಸ ಕ್ರೀಡೆಗಳೂ ನಡೆಯಲಿವೆ ಎಂದು ಹೇಳಿದರು.

ಸಭೆಯಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಿಗಮ ಬಿ. ವಾಸನ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್ ಮತ್ತಿತರರು ಇದ್ದರು.

Write A Comment