ಕರ್ನಾಟಕ

ವೈಫು ವರ್ಕಿಂಗು ಮಾವ ಓವರ್ ಆಕ್ಟಿಂಗು

Pinterest LinkedIn Tumblr

mava2ಮಗಳು ಹೌಸ್‌ವೈಫ್ ಆಗಿದ್ದರೆ ಆಗಾಗ ಅವಳ ಮನೆಗೆ ಬಂದು ತಲೆಗೆ ಹುಳ ಬಿಡುವ ಕೆಲಸವನ್ನಷ್ಟೇ ಮಾವ ಮಾಡಬಹುದು. ಅವಳು ಗಂಡನ ಬಗ್ಗೆ ಬ್ಯಾಡ್ ರಿಪೋರ್ಟ್ ಕೊಟ್ಟರೆ ಮಾವ ಆಗಾಗ ಅಳಿಯನನ್ನು ಪರೋಕ್ಷವಾಗಿ ತರಾಟೆಗೂ ತೆಗೆದುಕೊಳ್ಳಬಹುದು. ಆದರೆ ಮಗಳು ಕೆಲಸಕ್ಕೆ ಹೋಗುವವಳಾಗಿದ್ದರೆ ಮಾವನ ಖದರೇ ಬೇರೆ ರೀತಿಯದ್ದಾಗಿರುತ್ತದೆ. ‘ಪಾಪ, ನನ್ ಮಗಳು ಎಷ್ಟೊಂದು ಕಷ್ಟಪಡ್ತಾಳೆ. ಇವನಿಗೆ ಅವಳ ಬಗ್ಗೆ ಕರುಣೆಯೇ ಇಲ್ಲ. ಮನೆಕೆಲಸವನ್ನೆಲ್ಲ ಇವಳ ಮೇಲೇ ಹಾಕ್ತಾನೆ. ಅವನಷ್ಟೇ ಇವಳೂ ಹೊರಗೆ ದುಡಿಯೋದಿಲ್ವಾ? ಹಾಗಿದ್ರೂ ಅವನ ಧಿಮಾಕು ನೋಡಿ’ ಎಂಬಂತೆ ನೆಂಟರಿಷ್ಟರ ಬಳಿ ಗೋಳು ತೋಡಿಕೊಳ್ಳಬಹುದು. ಮಗಳಿಗೆ ಕಷ್ಟವಾಗುತ್ತಿದೆ ಎಂದು ಇನ್ನೂ ತೀವ್ರವಾಗಿ ಅನ್ನಿಸಿದರೆ ಮಾವ ಓವರ್ ಆ್ಯಕ್ಟಿಂಗ್ ಮಾಡಲು ಆರಂಭಿಸುತ್ತಾನೆ. ಅಳಿಯ ಹೇಗಿರಬೇಕು, ಹೇಗಿರಬಾರದು ಎಂಬ ಲಕ್ಷ್ಮಣರೇಖೆಯನ್ನು ಅವನೇ ಎಳೆಯುತ್ತಾನೆ. ಅದು ಜಿರಳೆಗೆ ಎಳೆಯುವ ಲಕ್ಷ್ಮಣರೇಖೆಯಂತೆ ಅಳಿಯನಿಗೆ ಕಾಣಿಸಬಹುದು.

ಅಳಿಯಂದಿರ ಬಗ್ಗೆ ಮಾವಂದಿರ ದೃಷ್ಟಿಕೋನ ಬದಲಾಗಿದ್ದೇ ಹೆಣ್ಮಕ್ಕಳು ಮದುವೆಯಾದ ಮೇಲೂ ಕೆಲಸಕ್ಕೆ ಹೋಗುವುದು ಹೆಚ್ಚಿದ ಮೇಲೆ. ಅವರು ಕೆಲಸಕ್ಕೆ ಹೋಗುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ಮಾವಂದಿರು ಮಗಳ ಸಂಸಾರದಲ್ಲಿ ವಿಲನ್ ಆಗುವುದು ತಪ್ಪು. ಮೊದಲೇ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಸಂಸಾರದಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಹಾಗೂ ಡೈವೋರ್ಸ್ ಪ್ರಮಾಣ ಹೆಚ್ಚು. ಅದಕ್ಕೆ ಸರಿಯಾಗಿ ಮಾವನೂ ವರ್ತಿಸತೊಡಗಿದರೆ ಹೋಮಕ್ಕೆ ತುಪ್ಪ ಸುರಿದಂತೆ ಭಗ್ಗನೆ ಬೆಂಕಿ ಹೊತ್ತಿಕೊಳ್ಳಬಹುದು. ಆಗಬಾರದ್ದು ಆದ ಮೇಲೆ ಮಾವ ಪಶ್ಚಾತ್ತಾಪ ಪಟ್ಟರೆ ಪ್ರಯೋಜನವಿಲ್ಲ. ಆಗ ಕಷ್ಟ ಅನುಭವಿಸುವವರು ಮಗಳು ಹಾಗೂ ಮಾಜಿ ಅಳಿಯ.

ಬರೀ ಪಾಠವನ್ನಷ್ಟೇ ಹೇಳುವುದಿಲ್ಲ, ಮಗಳ ಮೂಲಕ ಅಳಿಯನ ಹಣಕಾಸು ವ್ಯವಹಾರವನ್ನು ನಿಯಂತ್ರಿಸತೊಡಗುತ್ತಾನೆ. ದುಡಿಯುವುದು ಅಳಿಯನೇ ಆಗಿದ್ದರೂ ಅದನ್ನು ಹೇಗೆ ಖರ್ಚು ಮಾಡಬೇಕು ಮತ್ತು ಹೇಗೆ ಉಳಿಸಬೇಕು ಎಂಬುದನ್ನು ಬಹಳ ಸಲ ಮಾವ ನಿರ್ಧರಿಸುತ್ತಾನೆ. ಎಂಟು ಲಕ್ಷ ರೂಪಾಯಿಯ ಕಾರು ಕೊಳ್ಳಲು ಹೊರಟರೆ ಅಷ್ಟೆಲ್ಲ ದುಬಾರಿಯದ್ದು ಯಾಕೆ, ಆಲ್ಟೋ ತಗೋ ಸಾಕು ಎನ್ನಬಹುದು. ಎರಡು ಬೆಡ್‌ರೂಮಿನ ಫ್ಲ್ಯಾಟ್ ಕೊಳ್ಳಲು ಹೊರಟರೆ ಮೂರು ಬೆಡ್‌ರೂಮಿನದ್ದು ತಗೋಬೇಕು ಎನ್ನಬಹುದು, ಈ ವರ್ಷ ಸಂಬಳ ಎಷ್ಟು ಹೆಚ್ಚಾಯಿತು, ಹೆಚ್ಚಾದ ಸಂಬಳವನ್ನು ಹೇಗೆ ಮತ್ತು ಎಲ್ಲೆಲ್ಲಿ ಇನ್ವೆಸ್ಟ್ ಮಾಡಬೇಕು, ಮನೆಯ ಖರ್ಚು ತಿಂಗಳಿಗೆ ಎಷ್ಟಿರಬೇಕು, ಮೊಮ್ಮಗಳಿಗೆ ಎಷ್ಟು ಪಾಕೆಟ್‌ಮನಿ ಕೊಡಬೇಕು, ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಡಬೇಕು (ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದು ಮಾವನಿಗೆ ಮಾತ್ರ ಗೊತ್ತಿರುತ್ತದೆ. ಏಕೆಂದರೆ ಅವನಿಗೆ ಎಕ್ಸ್‌ಪೀರಿಯನ್ಸ್ ಇದೆ!), ತೆರಿಗೆ ಉಳಿಸಲು ಯಾವ ಅಕೌಂಟೆಂಟ್ ಬಳಿ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಿಸಬೇಕು ಎಂಬುದರಿಂದ ಹಿಡಿದು ದುಡ್ಡಿನ ಅ ಆ ಇ ಈಯಿಂದ ಲ ಕ್ಷ ಜ್ಞವರೆಗೆ ಪ್ರತಿಯೊಂದನ್ನೂ ಕಂಟ್ರೋಲ್ ಮಾಡುವ ಮಾವಂದಿರಿದ್ದಾರೆ.

ದುಡ್ಡಿಗಾಗಿ ಡಿಮ್ಯಾಂಡ್

ಕೆಲ ಜಾತಿಗಳಲ್ಲಿ ಈಗ ವರದಕ್ಷಿಣೆಯ ಕಾಲ ಹೋಗಿ ವಧುದಕ್ಷಿಣೆಯ ಕಾಲ ಬಂದಿದೆ. ಇನ್ನು ಕೆಲ ಜಾತಿಗಳಲ್ಲಿ ಯಾವ ದಕ್ಷಿಣೆಯೂ ಇಲ್ಲ. ಕೆಲವೇ ಸಮುದಾಯಗಳಲ್ಲಿ ಈಗಲೂ ವರದಕ್ಷಿಣೆ ಉಳಿದಿದೆ. ಅದೇನೇ ಇದ್ದರೂ ಮದುವೆಯಾದ ಮೇಲೆ ಮಾವನಿಂದ ಹಣ ಕೀಳುವ ಅಳಿಯಂದಿರ ಸಂತತಿಯೀಗ ಅಳಿವಿನಂಚಿನಲ್ಲಿದೆ. ಅದರ ಬದಲಿಗೆ ಸಾಕಷ್ಟು ಮಾವಂದಿರು ಮದುವೆಯ ನಂತರ ಅಳಿಯಂದಿರ ಬಳಿಯೇ ಆಗಾಗ ಹಣ ವಸೂಲಿ ಮಾಡುವುದಿದೆ. ಸಾಮಾನ್ಯವಾಗಿ ಬಡ ಮಾವಂದಿರು ಅಥವಾ ಐಷಾರಾಮದ ಬದುಕಿಗೆ ಒಗ್ಗಿಕೊಂಡು ಅದನ್ನು ಸಂಭಾಳಿಸಲಾಗದೆ ಒದ್ದಾಡುವ ಮಾವಂದಿರು ಹೀಗೆ ಮಾಡುತ್ತಾರೆ. ಕೆಲ ಮಾವಂದಿರಂತೂ ಮಗಳನ್ನು ಎಮೋಷನಲ್ಲಾಗಿ ಬ್ಲ್ಯಾಕ್‌ಮೇಲ್‌ಮಾಡಿ ತಿಂಗಳಿಗೆ ಇಷ್ಟು ಅಂತ ಅಳಿಯ ತಮಗೆ ಹಣ ಕೊಡುವಂತೆ ಮಾಡಿಕೊಂಡಿರುತ್ತಾರೆ. ‘ಪಾಪ, ಅಪ್ಪನಿಗೆ ಕಷ್ಟ ಇದೆ ಕಣೋ, ಪ್ರತಿ ತಿಂಗಳು ಸ್ವಲ್ಪ ಹಣ ಕೊಡೋಣ’ ಎಂದು ಹೆಂಡತಿ ರಾಗ ಎಳೆಯುತ್ತಾಳೆ. ಅವಳು ಖುಷಿಯಾಗಿರಬೇಕು ಅಂದರೆ ಇವನು ಹಣ ಕೊಡಬೇಕು. ಕೊಡದಿದ್ದರೆ ಮಾವನಿಗೇನೂ ಫರಕ್ ಆಗುವುದಿಲ್ಲ, ಆದರೆ ಅಳಿಯ-ಮಗಳು ಕಿತ್ತಾಡಲು ಶುರು ಮಾಡುತ್ತಾರೆ. ನೆಮ್ಮದಿಯಿಂದಿದ್ದ ಅವರ ಬದುಕು ಮಾವನಿಗೆ ಹಣ ಕೊಡುವ ವಿಚಾರದಲ್ಲಿ ಸುಂಟರಗಾಳಿಗೆ ಸಿಲುಕುತ್ತದೆ. ಕೊನೆಗೆ ಹೆಂಡತಿ ಬೇಕೋ? ಹಣ ಬೇಕೋ? ಎಂದು ಅಳಿಯ ನಿರ್ಧರಿಸುವ ಮಟ್ಟಕ್ಕೆ ಇದು ಬರುತ್ತದೆ. ಆಗ ಮಾವನಿಗೆ ಹಣ ಕೊಡುವುದೇ ಒಳ್ಳೆಯದು ಎಂದು ನಿರ್ಧಾರವಾಗುತ್ತದೆ. ಕೊನೆಕೊನೆಗೆ ಇದು ಎಲ್ಲಿಗೆ ಹೋಗುತ್ತದೆ ಅಂದರೆ, ತಿಂಗಳ ಸಂಬಳ ಆದಾಕ್ಷಣ ಮಾವನ ಬ್ಯಾಂಕ್ ಅಕೌಂಟಿಗೆ ದುಡ್ಡು ಹಾಕದಿದ್ದರೆ ಕರೆಕ್ಟಾಗಿ ಆವತ್ತಿನಿಂದಲೇ ಮನೆಯಲ್ಲಿ ಪಾತ್ರೆಗಳು ಹೆಚ್ಚು ಸದ್ದು ಮಾಡುತ್ತವೆ. ಮಾವ ಕುಡಿತಕ್ಕೆ ಅಂಟಿಕೊಂಡಿದ್ದರಂತೂ ಅಳಿಯನ ಕತೆ ಮುಗಿಯಿತು. ಆ ಕಷ್ಟ ಮರೆಯಲು ಅಳಿಯನೂ ಮಾವನ ಜೊತೆ ಕುಳಿತು ಅಥವಾ ಅವನ ಕಣ್ತಪ್ಪಿಸಿಕೊಂಡು ಗುಂಡು ಹಾಕಬೇಕಾಗುತ್ತದೆ!

ಎಲ್ಲದಕ್ಕೂ ನಾನಿದ್ದೇನೆ

ಮಾವನಿಂದ ಅಳಿಯನಿಗೆ ತೊಂದರೆಯಾಗುವುದು ಬೇರೆಲ್ಲದಕ್ಕಿಂತ ಹೆಚ್ಚಾಗಿ ಎಮೋಷನಲ್ ಕಾರಣಗಳಿಗೆ. ಮಗಳ ಸಂಸಾರದ ಪ್ರತಿಯೊಂದರಲ್ಲೂ ಮಾವ ಮೂಗು ತೂರಿಸಲು ಶುರುಮಾಡಿದರೆ ಅದರಷ್ಟು ಪ್ರಾಬ್ಲಂ ಬೇರೆಯಿಲ್ಲ. ಇದರಿಂದ ಅಳಿಯನಿಗೆ ಮಟೀರಿಯಲ್ ಲಾಸ್‌ಗಿಂತ ಹೆಚ್ಚಾಗಿ ನೆಮ್ಮದಿಯ ನಷ್ಟವಾಗುತ್ತದೆ. ಎಲ್ಲವನ್ನೂ ನಿರ್ಧರಿಸಲು ಅಥವಾ ನನ್ನ ಪ್ರತಿಯೊಂದು ನಿರ್ಧಾರವನ್ನೂ ವಿಮರ್ಶೆ ಮಾಡಲು ಮಾವನಿರುವಾಗ ನಾನ್ಯಾಕೆ ಬೇಕು ಈ ಮನೆಯಲ್ಲಿ ಎಂಬ ಭಾವನೆ ಅವನನ್ನು ಡಿಪ್ರೆಶ್ಶನ್‌ಗೆ ತಳ್ಳಬಹುದು. ಹೆಂಡತಿ ಇವನ ಮಾತು ಕೇಳುವವಳಾಗಿದ್ದರೆ ಸ್ವಲ್ಪ ಪರವಾಗಿಲ್ಲ. ಅವಳೂ ಅಪ್ಪನ ಪರವಾಗಿದ್ದರೆ ಇವನು ಯಾತಕ್ಕೂ ಬೇಡದವನಾಗುತ್ತಾನೆ. ವೀಕೆಂಡ್‌ನಲ್ಲಿ ಹೆಂಡತಿ-ಮಕ್ಕಳ ಜೊತೆ ಹೊರಗೆ ಹೋಗೋಣ ಎಂದು ಹೊರಟರೆ ಆ ಸಮಯಕ್ಕೆ ಸರಿಯಾಗಿ ಅತ್ತೆ-ಮಾವ ಪ್ರತ್ಯಕ್ಷರಾಗಿ ‘ಈಗಾಗ್ಲೇ ಲೇಟಾಯ್ತು, ಬನ್ನಿ ಹೋಗೋಣ’ ಎಂದು ಮೊದಲೇ ಕಾರಿನ ಬಾಗಿಲು ತೆರೆದರೆ ಏನಾಗಬೇಡ.

ನನ್ನ ಮೊಮ್ಮಕ್ಕಳು ಕಣೋ!

ಮಾವ ಬಹಳ ಮುತುವರ್ಜಿ ವಹಿಸುವುದು ಮೊಮ್ಮಕ್ಕಳ ವಿಷಯದಲ್ಲಿ. ಆದರೆ ಅವನಿನ್ನೂ 1970ರಲ್ಲಿದ್ದಾನೆ. ಅಳಿಯ-ಮಗಳು 2015ರಲ್ಲಿದ್ದಾರೆ. ಹಾಗಾಗಿ ಮಕ್ಕಳ ವಿಷಯದಲ್ಲಿ ಇವರೊಂದು ಹೇಳಿದರೆ ಅವನೊಂದು ಹೇಳುತ್ತಾನೆ. ನಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಅಂತ ನಮಗೆ ಗೊತ್ತು ಬಿಡ್ರೀ ಎಂದು ಇವರು ಸೊಲ್ಲೆತ್ತುವ ಹಾಗೇ ಇಲ್ಲ. ಒಂದು ಹೆತ್ತವರು ನಾಲ್ಕು ಹೆತ್ತವರಿಗೆ ಉಪದೇಶ ಮಾಡ್ತೀರಾ ಎಂದು ದಬಾಯಿಸುತ್ತಾರೆ. ಇಂತಹ ಎಷ್ಟು ಮಕ್ಕಳನ್ನು ನಾವು ಬೆಳೆಸಿಲ್ಲ ಎಂದು ತಮ್ಮ ಅನುಭವಾಮೃತವನ್ನು ಧಾರೆಯೆರೆಯುತ್ತಾರೆ. ನಿಮ್ಮ ಕಾಲ ಈಗಿಲ್ಲ ಎಂದು ಹೇಳಬೇಕೆಂದು ಅದೆಷ್ಟೋ ಸಲ ಅಳಿಯನ ಬಾಯಿ ತುದಿಗೆ ಬಂದಿರುತ್ತದೆ, ಆದರೆ ಹೇಳುವ ಹಾಗಿಲ್ಲ. ‘ಪಾಪ, ಅಪ್ಪನಿಗೆ ಬೇಜಾರಾಗುತ್ತೆ ರೀ’. ಮನೆಗೆ ಬಂದಷ್ಟು ಹೊತ್ತು ಮಕ್ಕಳ ಬೇಕು-ಬೇಡಗಳನ್ನು ಅವನು ನಿರ್ಧರಿಸುತ್ತಾನೆ ಬಿಡು ಎನ್ನುವಂತಿಲ್ಲ. ವಾಪಸ್ ಹೋದ ಮೇಲೂ ಮೊಬೈಲ್ ಇರುತ್ತದೆಯಲ್ಲ. ಮೇಲಾಗಿ, ಮೊಮ್ಮಕ್ಕಳು ಹುಟ್ಟಿದ ಮೇಲೆ ಮಾವನ ಭೇಟಿಯ ಫ್ರೀಕ್ವೆನ್ಸಿ ಹೆಚ್ಚುತ್ತದೆ. ಪ್ರತಿ ಭೇಟಿಯ ಸಮಯವೂ ದೀರ್ಘವಾಗುತ್ತದೆ.

ಕಾಲೆಳೆಯಬೇಡಿ ಬಾಸ್

ಒಮ್ಮೆ ಅಳಿಯನ ಬಗ್ಗೆ ಮಾವನಿಗೆ ಅನಾದರ ಮೂಡಿತು ಅಂತಾದರೆ ಅಳಿಯನ ಭವಿಷ್ಯ ಅಪಾಯಕ್ಕೆ ಸಿಲುಕಿತು ಎಂದೇ ಅರ್ಥ. ಹೋದಲ್ಲಿ ಬಂದಲ್ಲಿ ಮಾವ ಹಂಗಿಸಿ ಮಾತನಾಡಲು ಶುರು ಮಾಡುತ್ತಾನೆ. ಮದುವೆಯಾಗಿ ನಾಲ್ಕೈದು ವರ್ಷದ ನಂತರ ಮಗಳಿಗೂ ಗಂಡನ ಬಗ್ಗೆ ಸಾಮಾನ್ಯವಾಗಿ ಇಂತಹದ್ದೇ ಭಾವನೆ ಬರುವುದರಿಂದ ಅವಳೂ ಅಪ್ಪನ ಜೊತೆ ಸೇರಿಕೊಳ್ಳುತ್ತಾಳೆ. ನಿನ್ನ ಕೆಲಸ ಸರಿಯಿಲ್ಲ, ನಿನ್ನ ಫ್ರೆಂಡ್ಸ್ ಸರಿಯಿಲ್ಲ, ಆಫೀಸು ಮುಗಿದಮೇಲೆ ಮನೆಗೆ ಬೇಗ ಬಂದು ಮಕ್ಕಳನ್ನು ನೋಡಿಕೊಳ್ಳೋದಕ್ಕೇನು ಧಾಡಿ, ಯಾಕೆ ಮನೆಕೆಲಸವನ್ನೆಲ್ಲ ಹೆಂಡತಿಯೇ ಮಾಡಬೇಕು, ರಾತ್ರಿ ಒಂದು ಗಂಟೆಗೇ ಮಲಗಿದರೂ ಬೆಳಿಗ್ಗೆ ಎಂಟಕ್ಕೆ ಏಕೆ ಏಳೋಲ್ಲ.

Write A Comment