ಕರ್ನಾಟಕ

ನಾಲೆಯಲ್ಲಿ ಮೊಸಳೆ… ಗ್ರಾಮಸ್ಥರಲ್ಲಿ ಆತಂಕ !

Pinterest LinkedIn Tumblr

Crocodile

ಅರಕಲಗೂಡು, ಜು.2: ತಾಲೂಕಿನ ಅರಸೀಕಟ್ಟೆ ಕಾವಲು ಗ್ರಾಮದ ಸಮೀಪದ ಹೇಮಾವತಿ ಬಲಮೇಲ್ದಂಡೆ ನಾಲೆಯಲ್ಲಿ ಮೊಸಳೆ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದ ಗಂಗಾಧರ ಎಂಬುವರು ಜಮೀನಿಗೆ ಹೋಗಿ ಬರುವ ವೇಳೆ ನೀರಿಲ್ಲದ ನಾಲೆಯಲ್ಲಿ ಒದ್ದಾಡುತ್ತಿದ್ದ ಮೊಸಳೆ ಮರಿಯನ್ನು ರಕ್ಷಿಸಿ ತಮ್ಮ ಬಾವಿಗೆ ಬಿಟ್ಟು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಬಾವಿಯಲ್ಲಿ ಬಿಡಲಾಗಿರುವ ಮೊಸಳೆ ಮರಿಯನ್ನು ವಶಕ್ಕೆ ಪಡೆಯುವಲ್ಲಿ ನಿರ್ಲಕ್ಷವಹಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮದ ಬಾವಿಯಿಂದ ನೀರನ್ನು ಗ್ರಾಮಸ್ಥರು ಬಳಸದೇ ಇರುವುದರಿಂದ ನೀರಿನಲ್ಲಿ ಬಿಡಲಾಗಿರುವ ಮೊಸಳೆ ಮರಿಯಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಬಲಮೇಲ್ದಂಡೆ ನಾಲೆ ಹಾದುಹೋಗಿರುವ ಕೆಲವು ಕಿಮೀ ದೂರದ ತನಕ ಸುರಂಗಮಾರ್ಗವಿದ್ದು, ಇಲ್ಲಿ ಸದಾ ಕಾಲ ನೀರು ನಿಂತಿರುತ್ತದೆ. ದಟ್ಟವಾದ ಕಾಡು ಮತ್ತು ಬಯಲು ಸೀಮೆಯಂತಿರುವ ಈ ಪ್ರದೇಶದಲ್ಲಿ ಜನರು ಸುಳಿದಾಡುವುದಿಲ್ಲ.

ಮಾಧ್ಯಮದವರು ಗ್ರಾಮಕ್ಕೆ ತೆರಳಿದ ವೇಳೆ ನೂರು ಅಡಿ ಆಳದ ಬಾವಿಗೆ ಬಿಡಲಾಗಿರುವ ಮೊಸಳೆ ಮರಿಯನ್ನು ಮೇಲೆ ತರಲು ಹರಸಹಾಸ ಪಡಲಾಯಿತು. ಸದ್ಯಕ್ಕೆ ಮೊಸಳೆ ಮರಿ ಇಲ್ಲಿಯೇ ಇದ್ದು, ಅರಣ್ಯ ಇಲಾಖೆಯವರು ಶೀಘ್ರ ತೆಗೆದುಕೊಂಡು ಹೋಗಬೇಕು. ಮರಿಯ ಅಮ್ಮನನ್ನು ಹಿಡಿದು ದೂರ ಪ್ರದೇಶಕ್ಕೆ ಸಾಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Write A Comment