ಕರ್ನಾಟಕ

ಮುಂಗಾರು ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರೈತರ ಆತ್ಮಹತ್ಯೆ, ಕಬ್ಬು ಬೆಳೆಗಾರರ ಬಾಕಿ ಪಾವತಿ ವಿಚಾರ; ಗದ್ದಲ-ಕೋಲಾಹಲ

Pinterest LinkedIn Tumblr

Belagavbi-Session-Day---1-3

ಬೆಳಗಾವಿ, ಜೂ.29: ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಆರಂಭವಾಗಿರುವ ಮುಂಗಾರು ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ರೈತರ ಆತ್ಮಹತ್ಯೆ, ಕಬ್ಬು ಬೆಳೆಗಾರರ ಬಾಕಿ ಪಾವತಿ ವಿಚಾರ ಪ್ರತಿಧ್ವನಿಸಿ ಸದನದಲ್ಲಿ ಗದ್ದಲ ಕೋಲಾಹಲ ಹಾಗೂ ಧರಣಿಗೆ ಕಾರಣವಾಯಿತು.

ಸಂತಾಪ ಸೂಚನಾ ನಿರ್ಣಯದ ನಂತರ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಲುವಳಿ ಸೂಚನೆಯಡಿ ರೈತರ ಆತ್ಮಹತ್ಯೆ, ಕಬ್ಬು ಬೆಲೆ ಬಾಕಿ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿಯೇ ಆರಂಭವಾಗಿದೆ. ಕಬ್ಬು ಬೆಳೆಗಾರರ ಬಾಕಿ ನೀಡಿಲ್ಲ. ದಾಳಿಂಬೆ, ದ್ರಾಕ್ಷಿ ಬೆಳೆಗಾರರಿರಬಹುದು, ಭತ್ತ ಬೆಳೆಯುವ ರೈತರರಿಬಹುದು ಎಲ್ಲರೂ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಸರ್ಕಾರಕ್ಕೆ ರೈತರು ಛೀಮಾರಿ ಹಾಕಿದ್ದಾರೆ. ರೈತರ ಸಂಕಷ್ಟಗಳಿಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜವಾಬ್ದಾರಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ರೈತರ ಕಷ್ಟಗಳಿಗೆ ಸ್ಪಂದಿಸುತಿಲ್ಲ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Session1

Session

cm soudha

Belagavbi-Session-Day---1-2

Belagavbi-Session-Day---1-1

ಪ್ರತಿಪಕ್ಷ ನಾಯಕರ ಮಾತಿನ ಟೀಕೆ ಆಡಳಿತ ಪಕ್ಷ ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿ ಆಡಳಿತ ಹಾಗೂ ವಿರೋಧ ಪಕ್ಷ ಸದಸ್ಯರ ನಡುವೆ ವಾಕ್‌ ಸಮರಕ್ಕೆ ಕಾರಣವಾಯಿತು. ಪರಸ್ಪರ ಮಾತಿನ ಚಕಮಕಿಯಿಂದ ಸದನದಲ್ಲಿ ಗದ್ದಲ ಕೋಲಾಹಲ ವಾತಾವರಣ ನಿರ್ಮಾಣವಾಯಿತು. ರೈತರ ಬಾಕಿ ಕೊಡದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ, ನಂತರ ಸದನಕ್ಕೆ ಬರಲಿ ಎಂಬ ಮಾತುಗಳು ವಿರೋಧ ಪಕ್ಷದ ಸದಸ್ಯರಿಂದ ಕೇಳಿ ಬಂತು.

ಪ್ರಶ್ನೋತ್ತರ ಕಲಾಪ ಬದಿಗೊತ್ತಿ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸೋಣ ಎಂಬ ಒತ್ತಾಯವನ್ನು ಜಗದೀಶ್ ಶೆಟ್ಟರ್ ಮಾಡಿದರು. ಈ ಹಂತದಲ್ಲಿ ಎದ್ದುನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ನಿಲುವಳಿ ಸೂಚನೆಯಡಿ ಚರ್ಚೆಗೆ ನೋಟೀಸ್ ನೀಡಿದ್ದಾರೆ. ಈಗ ಚರ್ಚೆಯೇ ಬೇ‌ಡ ಎಂದರೆ ಹೇಗೆ. ಚರ್ಚೆಗೆ ಸರ್ಕಾರ ಸಿದ್ಧವಾಗಿದೆ. ಇವರು ಚರ್ಚೆ ಮಾಡಲಿ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಈ ಸರ್ಕಾರ ರೈತರ, ಬಡವರ ಪರವಾಗಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೇವೆ. ನಮ್ಮದು ರೈತ ಪರ ಸರ್ಕಾರ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದರು.

ಮುಖ್ಯಮಂತ್ರಿಗಳ ಮಾತಿನಿಂದ ತೃಪ್ತರಾಗದ ವಿರೋಧಿ ಸದಸ್ಯರು ಈ ಹಿಂದಿನ ಅಧಿವೇಶನದಲ್ಲೂ ರೈತರ ಸಮಸ್ಯೆಗಳು ಚರ್ಚೆಯಾಗಿದೆ. ಕಬ್ಬಿನ ಬಾಕಿ ನೀಡುತ್ತೇನೆ ಎಂದು ಸರ್ಕಾರ ನೀಡಿದ ಭರವಸೆ ಈಡೇರಿಲ್ಲ. ಈಗ ಮತ್ತೆ ಚರ್ಚೆ ಮಾಡುವ ಅಗತ್ಯವೇನು. ಕಬ್ಬಿನ ಬಾಕಿ ಪಾವತಿಗೆ ಸರ್ಕಾರ ಮುಂದಾಗಬೇಕು. ಇಲ್ಲವೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಚರ್ಚೆಗೆ ಅವಕಾಶ ನೀಡುತ್ತೇನೆ. ಚರ್ಚೆ ನಡೆಸಿ ಎಂದು ಮಾಡಿದ ಮನವಿಗೂ ಸ್ಪಂದಿಸದ ವಿರೋಧಿ ಸದಸ್ಯರು ಧರಣಿ ಮುಂದುವರೆಸಿದಾಗ ಸಭಾಧ್ಯಕ್ಷರು ಈ ಧರಣಿಯ ನಡುವೆಯೇ ಕಾಗದ ಪತ್ರ ಹಾಗೂ ಕಾರ್ಯದರ್ಶಿಗಳ ವರದಿ ಮಂಡನೆಯ ಕಲಾಪಗಳನ್ನು ನ‌ಡೆಸಿದರು.

ಧರಣಿ ನಿರತ ಬಿಜೆಪಿ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಈ ರೀತಿ ಸದನದ ಕಲಾಪ ನಡೆಸುವುದು ಸರಿಯಲ್ಲ ಎಂದು ಕೆಜಿಪಿಯ ಬಿ.ಆರ್. ಪಾಟೀಲ್ ಹೇಳಿದರಾದರೂ ಆ ಮಾತಿನ ಕಡೆ ಯಾರೂ ಗಮನ ನೀಡಲಿಲ್ಲ.

ಇಂದು ಸದನ ನ‌ಡೆಸಿದರೆ ರೈತರಿಗೆ ಅಗೌರವ ತಂದಂತೆ ಎಂಬ ಜೆಡಿಎಸ್‌ನ ಚೆಲುವರಾಯಸ್ವಾಮಿಯವರ ಮಾತಿಗೂ ಸದನದಲ್ಲಿ ಕಿಮ್ಮತ್ತು ಸಿಗಲಿಲ್ಲ. ಕಾಗದ ಪತ್ರ ಮಂಡನೆಯ ನಂತರ ಸಭಾಧ್ಯಕ್ಷರು ಪ್ರಶ್ನೋತ್ತರ ನಂತರ ಕೈಗೆತ್ತಿಕೊಳ್ಳೋಣ. ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಸಿ ಎಂದು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡಿದ ನಂತರ ಬಿಜೆಪಿ ಸದಸ್ಯರು ಧರಣಿಯನ್ನು ಕೈಬಿಟ್ಟರು.

Write A Comment