ಕರ್ನಾಟಕ

ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರಕಾರ; ರಾಜ್ಯ ಸರಕಾರದ ವಿರುದ್ಧ ದೇವೇಗೌಡ ವಾಗ್ದಾಳಿ

Pinterest LinkedIn Tumblr

hdk

ಬೆಳಗಾವಿ, ಜೂ.29: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ಕಡೆಗಣಿಸುತ್ತಿವೆ. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಜೆಡಿಎಸ್ ಧಾರವಾಡದಿಂದ ಆರಂಭಿ ಸಿದ್ದ ಪಾದಯಾತ್ರೆ ಇಂದು ಬೆಳಗಾವಿ ಯಲ್ಲಿ ಪರಿಸಮಾಪ್ತಿಯಾದ ನಂತರ ಇಲ್ಲಿನ ಸಿಪಿಎಲ್ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕರ್ತರ ಸಮಾ ವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಇತ್ತೀಚಿನ ನೀತಿಗಳು ಕಾರ್ಪೊರೇಟ್ ಲಾಬಿಗೆ ಮಣಿದಿವೆ. ಇದರಲ್ಲಿ ಭೂ ಸ್ವಾಧೀನ ಮಸೂದೆ ಮತ್ತಿತರ ನೀತಿಗಳು ಒಳಗೊಂಡಿವೆ. ರೈತರ ವಿರೋಧಿಯಾಗಿರುವ ರಾಜ್ಯ ಸರ್ಕಾರದ ನಿಲುವಿನಿಂದ ನಿರಂತರವಾಗಿ ರೈತರ ಆತ್ಮಹತ್ಯೆ ನಡೆಯುತ್ತಿದೆ. ಇಷ್ಟಾದರೂ ಕಿಂಚಿತ್ತೂ ಎಚ್ಚೆತ್ತುಕೊಳ್ಳದ ಸರ್ಕಾರ ತನ್ನ ಧೋರಣೆ ಮುಂದುವರೆಸಿದೆ ಎಂದು ಹರಿಹಾಯ್ದರು.

ಈ ಕೂಡಲೇ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕ್ರಮಕ್ಕೆ ಮುಂದಾಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರೈತರನ್ನು ಕಡೆಗಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತವಿರೋಧಿಯಾಗಿದ್ದಾರೆ. ನಾವು ರೈತರಿಗೆ ವಿಶೇಷ ಸೌಲಭ್ಯ ತಂದಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಏನೇನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಒಂದು ಕಡೆ. ಬಾಕಿ ಪಾವತಿಸುವುದಾಗಿ ಹೇಳುತ್ತಿರುವ ಸರ್ಕಾರ ಸಕ್ಕರೆ ಜಪ್ತಿ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿರುವುದು ಮತ್ತೊಂದು ಕಡೆ. ಕಾರ್ಖಾನೆ ಮಾಲೀಕರೇ ಸಂಪುಟದಲ್ಲಿದ್ದರೂ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಏಕೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು.

ಇವರಿಗೆ ಯಾವ ಶಕ್ತಿ ಕೈಕಟ್ಟಿದೆ. ರೈತಪರ ಎಂದು ಹೇಳಿಕೊಳ್ಳುವುದಕ್ಕೆ ಮಾತ್ರವೇ. ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮುಂದಾಗ ಬಾರದೆ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ಅಂತ್ಯಕಾಲ ಆರಂಭ ವಾಗುತ್ತಿದೆ. ಸರ್ಕಾರ ಬೀದಿಗಿಳಿದು ಹೋರಾಟ ಮಾಡುವಂತಹ ವಾತಾವರಣವನ್ನು ನಿರ್ಮಿಸಿದೆ ಎಂದು ವಾಗ್ದಾಳಿ ಮಾಡಿದರು. ನಾವು ಪಾದಯಾತ್ರೆ ಮಾಡಿದರೆ ಇದು ರಾಜಕೀಯ ಗಿಮಿಕ್ ಎಂದು ಹೇಳುತ್ತಾರೆ. ಗಿಮಿಕ್ ಮಾಡಿ ಪಕ್ಷದ ಅಸ್ತಿತ್ವ ಉಳಿಸುವ ಅವಶ್ಯಕತೆ ನಮಗಿಲ್ಲ. ಇನ್ನಾದರೂ ರೈತರ ಬಗ್ಗೆ ಗಮನ ಕೊಡಿ, ಇಲ್ಲದಿದ್ದರೆ ಪಾಠ ಕಲಿಯುತ್ತೀರಿ ಎಂದು ತಿಳಿಸಿದರು. ಸಮಾವೇಶಕ್ಕೂ ಮುನ್ನ ಪಾದಯಾತ್ರೆ ಮೂಲಕ ಬೆಳಗಾವಿಗೆ ಬಂದಾಗ ಚೆನ್ನಮ್ಮ ವೃತ್ತದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮರ ಪ್ರತಿಮೆಗೆ ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದರು. ಇವರೊಂದಿಗೆ ಶಾಸಕ ಜಿ.ಟಿ.ದೇವೇಗೌಡ, ಕೋನಾರೆಡ್ಡಿ, ಎಂ.ಟಿ.ಕೃಷ್ಣಪ್ಪ, ತಮ್ಮಣ್ಣ, ಶ್ರೀಕಾಂತ್‌ಪಾಟೀಲ್, ಮಾಜಿ ಸಚಿವ ಬಂಡೆಪ್ಪಕಾಶ್ಯಂಪೂರ್ ಸೇರಿದಂತೆ ವಿಧಾನಪರಿಷತ್ತಿನ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಿದ್ದರು.

ಭವ್ಯ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಶಾಸಕ ವೈ.ಎಸ್.ವಿ.ದತ್ತ, ಮಧುಬಂಗಾರಪ್ಪ, ಎಚ್.ಸಿ.ಬಾಲಕೃಷ್ಣ, ಎಚ್.ಎಸ್. ಶಿವಶಂಕರ್, ಚಲುವರಾಯಸ್ವಾಮಿ, ಶಾರದಾ ಪೂರ್ಯನಾಯಕ್, ಅಪ್ಪಾಜಿಗೌಡ, ಬಸವರಾಜ್ ಹೊರಟ್ಟಿ, ಸಂದೇಶ್ ನಾಗರಾಜ್ ಉಪಸ್ಥಿತರಿದ್ದರೆ, ಹುಬ್ಬಳ್ಳಿ- ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಚಿಕ್ಕೋಡಿ, ದಾವಣಗೆರೆ, ಬಳ್ಳಾರಿಯಿಂದ ಆಗಮಿಸಿದ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Write A Comment