ಕರ್ನಾಟಕ

ರಾಜ್ಯದಲ್ಲಿ ನಿಲ್ಲದ ಅನ್ನದಾತನ ಆತ್ಮಹತ್ಯೆ; ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ರೈತ ಆತ್ಮಹತ್ಯೆ ಯತ್ನ

Pinterest LinkedIn Tumblr

farmer suicide

ಬೆಂಗಳೂರು,ಜೂ.29: ದೇಶದ ಬೆನ್ನೆಲುಬಾದ ರೈತನ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಸರಣಿ ಆತ್ಮಹತ್ಯೆ ಮುಂದುವರೆದಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದ್ದು, ರಾಜ್ಯದಲ್ಲಿ ಇದು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಮಂಡ್ಯ ಹಾಗೂ ಗೌರಿಬಿದನೂರಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಲ್ಲದೆ ಶಿವಮೊಗ್ಗದಲ್ಲಿ ಸಾಲದ ಶೂಲಕ್ಕೆ ಸಿಕ್ಕಿ ದಂಪತಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಕಸಬಾ ಹೋಬಳಿಯ ಬಡಕನಹಳ್ಳಿ ಮಹೇಶ್(36) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಗೌರಿಬಿದನೂರಿನ ಗಿಡಗನಹಳ್ಳಿ ಗ್ರಾಮದ ಭೋಗನಂದೀಶಪ್ಪ (52) ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗದ ರೈತ ದಂಪತಿಗಳಾದ ಟೀಕಪ್ಪ (54), ಜಾನಕಮ್ಮ(45) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹೇಶ್ ತನ್ನ ತಾಯಿ ನಾಗಮ್ಮನವರ ಹೆಸರಿನಲ್ಲಿ ಬಡನಕಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದ. ಸಾಲ ಮಾಡಿ ತಂಗಿಯರ ಮದುವೆಯೂ ಮಾಡಿದ್ದ. ಬೆಳೆ ಕೈ ಕೊಟ್ಟಿದ್ದರಿಂದ ಸಾಲ ತೀರಿಸಲಾಗದೆ ಇಂದು ಮುಂಜಾನೆ 5.30ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಳವೆ ಬಾವಿ ವಿಫಲವಾಗಿದ್ದಕ್ಕೆ ಬೇಸತ್ತ ರೈತ ಭೋಗನಂದೀಶಪ್ಪ ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಜಮೀನಿನಲ್ಲಿ ಕೊಳವೆ ಬಾವಿ ಬತ್ತಿಹೋಗಿದ್ದು, ಭಾನುವಾರದಂದು ಕೊಳವೆ ಬಾವಿಯನ್ನು ರೀಬೋರ್ (ಮತ್ತೆ ಕೊರೆಸಿದ್ದು) ಮಾಡಿಸಿದ್ದರಿಂದ ಸ್ವಲ್ಪ ನೀರು ಸಿಕ್ಕಿ, ನಂತರ ನೀರು ಬತ್ತಿಹೋಗಿದೆ. ಮತ್ತೊಮ್ಮೆ ರೀಬೋರ್ ಮಾಡಿಸಿದಾಗ ನೀರು ಕಾಣಿಸಿದ್ದು, ಪೈಪ್ ಅಳವಡಿಸಿ ಮೋಟರ್ ಆನ್ ಮಾಡಿದಾಗ ನೀರು ಸ್ಪಲ್ವ ಹೊತ್ತು ಬಂದು ಮತ್ತೆ ಬತ್ತಿಹೋಗಿದೆ. ನಂತರ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಕೊಳವೆ ಬಾವಿಯಲ್ಲಿ ನೀರು ಬಂದಿರಬಹುದೆಂದು ಮೋಟರ್ ಆನ್ ಮಾಡಿದ್ದು, ನೀರು ಬಂದಿಲ್ಲ, ಕೊಳವೆ ಬಾವಿಯಲ್ಲಿ ನೀರು ಬರುವುದಿಲ್ಲ ಎಂದು ಗ್ರಾಮಸ್ಥರು ಮತ್ತು ಮೃತನ ಮಕ್ಕಳು ಹೇಳುತ್ತಿದ್ದರೂ, ಮೃತ ನಂದೀಶಪ್ಪ ನೀರು ಸಿಕ್ಕೇ ಸಿಗುತ್ತೇ ಎಂದು ಹಠ ಮಾಡಿಕೊಂಡು ಒಂದೇ ಕೊಳವೆ ಬಾವಿಗೆ ಮೂರು ಬಾರಿ ರೀಬೋರ್ ಮಾಡಿಸಿದ್ದರು. ನೀರು ಸಿಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಗಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಬನ್ನಂಗಾಡಿ ಗ್ರಾಮದ ಇನ್ನೊಬ್ಬ ರೈತ ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವರಾಜು (52) ಎಂಬುವವನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಬೇರೆ ಬೇರೆ ಬ್ಯಾಂಕುಗಳಿಂದ 1 ಲಕ್ಷ ರೂ. ಬೆಳೆ ಸಾಲ ಮಾಡಿದ್ದು, ಸಾಲ ಮರುಪಾವತಿಸಲು ಬ್ಯಾಂಕ್‌ನ ಅಧಿಕಾರಿಗಳು ನೋಟೀಸು ನೀಡಿದ್ದರು. ಸಾಲವನ್ನು ತೀರಿಸಲಾಗದೆ ತನ್ನ ಹೊಲದಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದಲ್ಲಿ ರೈತ ದಂಪತಿಗಳು ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿದ್ದು , ಇಬ್ಬರನ್ನು ಸ್ಥಳೀಯ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಗಾರು ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಸಾಲಗಾರರಿಗೆ ಅಂಜಿ ಹೊಲದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದರು. ಅಸ್ವಸ್ಥಗೊಂಡ ಟೀಕಪ್ಪ ಮತ್ತು ಜಾನಕಮ್ಮ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲಬಾಧೆಯಿಂದ ಕಳೆದ ಆರು ತಿಂಗಳಿನಿಂದ 40 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗಳ ಸರಣಿ ಮುಂದುವರೆದಿದೆ. ಸರ್ಕಾರ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುವಂತೆ ಮಾಡಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಅನ್ನದಾತರ ಶಾಪ ತಟ್ಟುವುದರಲ್ಲಿ ಅನುಮಾನವಿಲ್ಲ. ಕೆಆರ್‌ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸುವರ್ಣ ಸೌಧದ ಮುಂದೆ : ರೈತ ಆತ್ಮಹತ್ಯೆ ಯತ್ನ

soudha

ಬೆಳಗಾವಿ: ರಾಜ್ಯಾದ್ಯಂತ ಸರಣಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿ ರುವಂತೆಯೇ ಇಂದು ಬೆಳಗಾವಿ ಮುಂಗಾರು ಅಧಿವೇಶನ ಆರಂಭದ ದಿನವೇ ಸುವರ್ಣ ಸೌಧದ ಎದುರು ಕಬ್ಬು ಬಾಕಿ ಹಣ ಪಾವತಿಯಾಗದ್ದಕ್ಕೆ ನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಲದಿ ಗ್ರಾಮದ ಸಿದ್ದರಾಯ ಎಂಬ 27 ವರ್ಷದ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ರೈತ. ಸಿದ್ದರಾಯನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೈತ ಸಿದ್ದರಾಯ ಸಮೀಪದ ಕೆಂಪೇವಾಡ ಬಳಿಯ ಸಕ್ಕರೆ ಕಾರ್ಖಾನೆಯೊಂದಕ್ಕೆ ಕಬ್ಬು ಕೊಟ್ಟಿದ್ದ. ಆದರೆ ವರ್ಷಗಳೇ ಕಳೆದರೂ ಸಕ್ಕರೆ ಕಾರ್ಖಾನೆಯಿಂದ ಸಿದ್ದರಾಯನಿಗೆ ಕಬ್ಬಿನ ಹಣ ಬರಲೇ ಇಲ್ಲ. ಇದರಿಂದ ಮನನೊಂದ ಸಿದ್ದರಾಯ ಇಂದು ಅಧಿವೇಶನ ರಂಭವಾಗುತ್ತಿದ್ದಂತೆಯೇ ಸುವರ್ಣಸೌಧದೆದುರು ಪ್ರತಿಭಟನೆಯ ವೇಳೆ ವಿಷ ಕುಡಿದು, ಆತ್ಮಹತ್ಯೆಗೆ ಯತ್ನಿಸಿದ.

Write A Comment