ಕರ್ನಾಟಕ

ನಾಗರಿಕರೇ ಎಚ್ಚರ : ಆನ್ಲೈನ್ ನಲ್ಲಿ ಮೋಸ ಹೋಗದಿರಿ

Pinterest LinkedIn Tumblr

Online-dhokha-1ಬೆಂಗಳೂರು, ಜೂ. 28-ಕಾಲ ಬದಲಾದಂತೆ ಆನ್‌ಲೈನ್ ವ್ಯಾಪಾರಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ. ಆದರೆ ಆನ್‌ಲೈನ್ ವಹಿವಾಟು ಕೂಡ ಸುರಕ್ಷಿತವಲ್ಲ ಎಂಬುದು ಇದೀಗ ಸಾಬೀತಾಗಿದೆ. ಪ್ರಖ್ಯಾತ ಆನ್‌ಲೈನ್ ಕಂಪೆನಿಗಳಾದ ಕ್ವಿಕರ್ ಮತ್ತು ಓಎಲ್‌ಎಕ್ಸ್ ಮೂಲಕ ಸಾರ್ವಜನಿಕರಿಗೆ ವಂಚಿಸಿರುವ ಆರು ನೈಜೀರಿಯನ್ ಪ್ರಜೆಗಳು ಮತ್ತು ಇಬ್ಬರು ಮಹಿಳೆಯರೂ ಸೇರಿದಂತೆ 8 ಮಂದಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನೈಜೀರಿಯನ್ ಪ್ರಜೆಗಳಾದ ಬೋಲಾಜಿ ಲಾವಾಲ್ ಡೆಸ್ಮಂಡ್,  (36), ಆತನ ಪತ್ನಿ ಅವೇರಿಲ್‌ಲಾವಾಲ್ (24), ಓಕ್‌ಜೀ ಕೋಲಿಂಗ್ (28), ಓಜಾಲಾವಾಲ್ (24), ಕ್ರಿಷ್ಟಿಯಾನ್ ಒಬೀನಾ, (31), ಚುಕಾಓಕ್‌ಪಾಲಾ (30), ಎಬೀ ಏಈಸ್ (27) ಹಾಗೂ ಕಾವಲ್‌ಬೈರಸಂದ್ರ ನಿವಾಸಿ ಇಂದ್ರಾಣಿ(25) ಎಂದು ಗುರುತಿಸಲಾಗಿದೆ.
ಆರೋಪಿಗಳು ಕ್ವಿಕರ್ ಹಾಗೂ ಓಎಲ್‌ಎಕ್ಸ್ ಸಂಸ್ಥೆಗಳ ಮೂಲಕ ಜಾಹೀರಾತು ನೀಡಿ ದೇಶಾದ್ಯಂತ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಅವರಿಗೆ ಹೆಡೆಮುರಿ ಕಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸುದ್ದಿಗೋಷ್ಠಿಯಲ್ಲಿಂದು ವಿವರಣೆ ನೀಡಿದರು.

ಚಿಕ್ಕಪೇಟೆ ಪೊಲೀಸರ ಸಾಹಸ :

ಕಳೆದ ಜೂನ್ 20 ರಂದು ಶೇಖರ್ ಎಂಬುವರು ಕ್ವಿಕರ್ ಡಾಟ್‌ಕಾಮ್‌ನಲ್ಲಿ ಬಂದ ಜಾಹೀರಾತನ್ನು ಆಧರಿಸಿ ಕಾರ್ ಖರೀದಿಗೆ ಮುಂದಾಗಿದ್ದರು. ಆದರೆ ಜಾಹೀರಾತು ನೀಡಿದ ಖದೀಮರು ಸ್ಥಳೀಯ ಮಹಿಳೆಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿ ಅವರಿಂದ ಫೋನ್ ಮಾಡಿಸಿ ನೀವು ಕೊಳ್ಳುವ ಕಾರನ್ನು ಏರ್‌ಫೋರ್ಟ್‌ನಲ್ಲಿ ನಿಲ್ಲಿಸಿರುವುದಾಗಿ ತಿಳಿಸಿ ಕಾರಿನ ಮೌಲ್ಯದ ಹಣವನ್ನು ಶೇಖರ್ ಅವರಿಂದ ವಿವಿಧ ಬ್ಯಾಂಕಿನ ಅಕೌಂಟ್‌ಗಳಿಗೆ ವರ್ಗಾಯಿಸಿಕೊಂಡು ಹಣವನ್ನೂ ಹಿಂದಿರುಗಿಸದೆ ಕಾರನ್ನೂ ನೀಡದೆ, ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ ಎಂಬ ದೂರನ್ನಾಧರಿಸಿ ಕಾರ್ಯಾಚರಣೆಗಿಳಿದ ಚಿಕ್ಕಪೇಟೆ ಪೊಲೀಸರು ನಗರದ ವಿವಿಧ ಪ್ರದೇಶಗಳಲ್ಲಿ  ತಲೆಮರೆಸಿಕೊಂಡಿದ್ದ 6 ಮಂದಿ ನೈಜೀರಿಯನ್ ಪ್ರಜೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಬಗಲುಗುಂಟೆಯ ಶೇಷಾದ್ರಿನಗರದ ಮನೆಯೊಂದರಲ್ಲಿ ಆನ್‌ಲೈನ್ ಮೂಲಕ ವಿವಿಧ ಬಗೆಯ ಕಾರ್ ಫೋಟೋಗಳನ್ನು ಕ್ವಿಕರ್ ಮತ್ತು ಓಎಲ್‌ಎಕ್ಸ್‌ಗಳಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದರು. ಅದೇ ರೀತಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಮಿಶೆಲ್ ಒಬಾಮಾ ಅವರ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿರುವುದಾಗಿಯೂ ಹಣ ಸಂಗ್ರಹಿಸಿ ವಂಚಿಸಿರುವುದಲ್ಲದೆ, ನಕಲಿ ಪಾಸ್‌ಪೋರ್ಟ್, ವೀಸಾ ಮತ್ತು ಪಾನ್‌ಕಾರ್ಡ್‌ಗಳನ್ನು ಸೃಷ್ಟಿ ಮಾಡಿರುವುದಾಗಿಯೂ ಮಾಹಿತಿ ಲಭ್ಯವಾಗಿವೆ. ಆರೋಪಿಗಳು ಬೆಂಗಳೂರು ಸೇರಿದಂತೆ ದೇಶದಾದ್ಯಂತ ನೂರಾರು ಮಂದಿಗೆ ಆನ್‌ಲೈನ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.  ಬೋಲಾಜಿ ಲಾವಾಲ್ ಎಂಬಾತ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಯಾಮ್ಯೂಯಲ್ ಪೌಲ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಳೆದ ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಎಲ್‌ಓಸಿ ಹೊರಡಿಸಲಾಗಿದೆ.

ಕೊಡಿಗೇಹಳ್ಳಿಯಲ್ಲೂ ವಂಚನೆ :

ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಭೈರತಿ ಕ್ರಾಸ್‌ನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಎಬೀ ಏಈಸ್ ಎಂಬ ನೈಜೀರಿಯನ್ ಪ್ರಜೆ ಕಾವಲ್‌ಬೈರಸಂದ್ರದ ಇಂದ್ರಾಣಿ ಎಂಬ ಮಹಿಳೆಯ ಸಹಾಯದೊಂದಿಗೆ ಶ್ರೀನಿವಾಸ್‌ಬಾಬು ಎಂಬುವರಿಗೆ ವಂಚಿಸಿದ ಪ್ರಕರಣ ನಡೆದಿತ್ತು.
ಆರೋಪಿಗಳು ಓಎಲ್‌ಎಕ್ಸ್ ಡಾಟ್‌ಕಾಮ್‌ನಲ್ಲಿ 3.5 ಲಕ್ಷ ರೂ.ಗಳಿಗೆ ಹೋಂಡಾ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ನೀಡಿದ್ದರು. ಈ ಜಾಹೀರಾತನ್ನು ಗಮನಿಸಿದ ಶ್ರೀನಿವಾಸ್‌ಬಾಬೂ ಅವರು ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದ ಪೌಲ್ ಎಂಬಾತನ ಮೊಬೈಲ್‌ಗೆ ದೂರವಾಣಿ ಕರೆ ಮಾಡಿ ವ್ಯಾಪಾರ ಕುದುರಿಸಿದ್ದರು. ಆರೋಪಿಗಳು ಕಾರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದು, ನಾನು ಅನ್ಯ ಕಾರ್ಯ ನಿಮಿತ್ತ ದೆಹಲಿಗೆ ತೆರಳುತ್ತಿದ್ದು, ನನ್ನ ಸಹಾಯಕಿ ಸಾಧನಾ ಎಂಬುವರ ಮೊಬೈಲ್‌ನ್ನು ಸಂಪರ್ಕಿಸುವಂತೆ ತಿಳಿಸಿ ಅವರಿಂದ ಕಸ್ಟಮ್ಸ್  ಕ್ಲಿಯರೆನ್ಸ್‌ಗಾಗಿ 95 ಸಾವಿರ ರೂ. ಹಣ ಕಟ್ಟುವಂತೆ ಬಾಬು ಅವರಿಂದ ಜೂನ್ 16 ರಂದು ಕಂಟೋನ್‌ಮೆಂಟ್‌ನ ಕೆನರಾಬ್ಯಾಂಕ್ ಖಾತೆಗೆ 49 ಸಾವಿರ ಹಾಗೂ ವಸಂತನಗರದ ಕೆನರಾಬ್ಯಾಂಕ್‌ನಿಂದ 46 ಸಾವಿರ ರೂ.ಗಳೂ ಸೇರಿದಂತೆ 95 ಸಾವಿರ ರೂ.ಗಳನ್ನು ಡ್ರಾ ಮಾಡಿಸಿಕೊಂಡು ನಂತರ ತಮ್ಮ ಮೊಬೈಲ್‌ನ್ನು ಸ್ಥಗಿತಗೊಳಿಸಿ ಕಣ್ಮರೆಯಾಗಿದ್ದರು. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಕೊಡಿಗೇಹಳ್ಳಿ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ದಳವೊಂದನ್ನು ರಚಿಸಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಜೂನ್ 24 ರಂದು ಪ್ರಮುಖ ಆರೋಪಿಗಳಾದ ಎಬೀ ಏಈಸ್ ಹಾಗೂ ಇಂದ್ರಾಣಿ ಎಂಬುವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನಗರದಲ್ಲಿ ನೆಲೆಸಿರುವ ಎಬೀ ಏಈಸ್ ಅವರ ರಹದಾರಿ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಕುರಿತಂತೆಯೂ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ನೈಜೀರಿಯನ್ ಪ್ರಜೆ ಜೋಸೆಫ್, ಹೊರಮಾವು ನಿವಾಸಿಗಳಾದ ಸೋಫಿಯಾ ಹಾಗೂ ಮುರುಳೀಧರ್ ಎಂಬುವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಆರೋಪಿಗಳು ನಗರದ ವಿವಿಧ ಭಾಗಗಳಲ್ಲಿ ಇಂತಹ 13ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಬಂಧಿತರಿಂದ ಲ್ಯಾಪ್‌ಟಾಪ್, 3 ಮೊಬೈಲ್ ಫೋನ್, ವಿವಿಧ ಕಂಪೆನಿಗಳ ಸಿಮ್‌ಕಾರ್ಡ್‌ಗಳು ಸೇರಿದಂತೆ 90 ಸಾವಿರ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆನ್‌ಲೈನ್ ಮೂಲಕ ವಂಚಿಸುತ್ತಿದ್ದ ಈ ಜಾಲವನ್ನು ಭೇದಿಸುವಲ್ಲಿ ಪೊಲೀಸರಿಗೆ ಸೈಬರ್ ಕ್ರೈಂ ಹಾಗೂ ಸಿಐಡಿ ಅಧಿಕಾರಿಗಳು ತಾಂತ್ರಿಕ ಮಾಹಿತಿ ನೀಡಿದ್ದರು. ಈ ಆಧಾರದ ಮೇಲೆ ವಂಚಕರನ್ನು ಬಂಧಿಸಲು ಸಾಧ್ಯವಾಯಿತು ಎಂದು ಎಂ.ಎನ್.ರೆಡ್ಡಿ ವಿವರಣೆ ನೀಡಿದರು. ಇನ್ನು ಮುಂದೆ ನಗರದ ನಾಗರಿಕರು ಅನಾಮಧೇಯ ವ್ಯಕ್ತಿಗಳ ಕರೆಗಳು ಇಲ್ಲವೇ ಆನ್‌ಲೈನ್ ಜಾಹೀರಾತು ಬಗ್ಗೆ ಎಚ್ಚರ ವಹಿಸಬೇಕು. ತಮಗೆ ವಂಚನೆಯಾಗುತ್ತಿದೆ ಎಂಬ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

Write A Comment