ಕರ್ನಾಟಕ

ಟಿ.ಸಿ ನೀಡಲು ವಿಳಂಬ ಮಾಡಿದ ಮಾಸ್ತರ್‌ಗೆ ಹೊಡೆದ ಹುಡುಗರು

Pinterest LinkedIn Tumblr

teacher

ಹೊಸಪೇಟೆ: ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) ನೀಡಲು ವಿಳಂಬ ಮಾಡಿದರು ಎಂಬ ನೆಪದಲ್ಲಿ ಶಿಕ್ಷಕರೊಬ್ಬರನ್ನು ಶಾಲಾ ವಿದ್ಯಾರ್ಥಿಗಳೇ ಥಳಿಸಿದ ಘಟನೆ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನಗರದ ವಿದ್ಯಾಚೇತನ ಶಾಲೆಯಲ್ಲಿ ಏಳನೇ ತರಗತಿ ಪೂರ್ಣಗೊಳಿಸಿ, ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರು ಬಾಲಕರು ತಮ್ಮ ಇನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಶಿಕ್ಷಕ ಕಾರ್ತಿಕ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಕಾರ್ತಿಕ್‌ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಈ ಹುಡುಗರಿಬ್ಬರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ನಾಲ್ಕೈದು ಬಾರಿ ಶಾಲೆಗೂ ಹೋಗಿದ್ದರು. ಆದರೆ, ಪ್ರಮಾಣ ಪತ್ರ ಸಿಕ್ಕಿರಲಿಲ್ಲ. ಇದರಿಂದ ಕುಪಿತರಾಗಿದ್ದ ಇಬ್ಬರೂ ಶುಕ್ರವಾರ ಶಾಲೆ ಆವರಣದಲ್ಲಿ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದ್ದರು. ನಂತರ ರಾತ್ರಿ ಸ್ನೇಹಿತರ ಜೊತೆಗೂಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ‘ಹಲ್ಲೆ ಘಟನೆಗೂ ಮೊದಲು ನಾಲ್ವರು ಹುಡುಗರು ನನ್ನ ಹಾಗೂ ನನ್ನ ತಾಯಿ ಗಾಯತ್ರಿ ಅವರ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮೊಬೈಲ್‌ಗೆ ಕರೆ ಮಾಡುತ್ತಿದ್ದವರ ಪತ್ತೆಗೆ ಪೊಲೀಸರ ಸಹಾಯ ಪಡೆದಿದ್ದೆವು. ಕರೆ ಮಾಡುತ್ತಿದ್ದವರು ಟಿ.ಸಿಗೆ ಅರ್ಜಿ ಸಲ್ಲಿಸಿದ್ದವರು ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ಅವರಿಗೆ ದಂಡ ವಿಧಿಸಿದ್ದರು. ಇದೇ ಹಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಕಾರ್ತಿಕ್‌ ಆರೋಪಿಸಿದ್ದಾರೆ.

ಜಾತಿ ನಿಂದನೆ– ಬಂಧನ: ಮೊಬೈಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಒಂಬತ್ತು ಜನರ ವಿರುದ್ಧ ಕಾರ್ತಿಕ್‌ ಅವರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಬಾಲಕನ ತಂದೆ ಮತ್ತು ಆತನ ಮಾವನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Write A Comment