ಕನ್ನಡ ವಾರ್ತೆಗಳು

ತಣ್ಣೀರು ಬಾವಿಯಲ್ಲಿ ಶೀಘ್ರದಲ್ಲೇ ಟ್ರೀ ಪಾರ್ಕ್‌ : ಅರಣ್ಯ ಇಲಾಖೆಯ ನೂತನ ಅತಿಥಿ ಗೃಹ ಉದ್ಘಾಟಿಸಿ ಸಚಿವ ರೈ

Pinterest LinkedIn Tumblr

Gust_house_Open_1

ಮಂಗಳೂರು : ತಣ್ಣೀರು ಬಾವಿಯಲ್ಲಿ ಟ್ರೀ ಪಾರ್ಕ್‌ ಯೋಜನೆ ಸಿದ್ಧಗೊಳ್ಳುತ್ತಿದ್ದು ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ. ಮುಂಜಾನೆಯಿಂದ ಸಾಯಂಕಾಲದ ವರೆಗೆ ಇಲ್ಲಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಪ್ರವೇಶವಿದ್ದು, ಇಲ್ಲಿ ವುಡನ್‌ ಕಾಟೇಜ್‌ಗಳು, ಜೋಕಾಲಿಗಳು, ತುಳು ಪಾರಂಪರಿಕ ಮೂರ್ತಿಗಳು ಇರಲಿವೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.ಶನಿವಾರ ತಣ್ಣೀರುಬಾವಿಯಲ್ಲಿ ಅರಣ್ಯ ಇಲಾಖೆಯ ನೂತನ ಅತಿಥಿ ಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಎಕರೆಯಷ್ಟು ಅರಣ್ಯ ಒತ್ತುವರಿಯಾಗಿದೆ. ಇದರಲ್ಲಿ 1978ರಿಂದ ಇರುವವರಿಗೆ ಹಾಗೂ ಮೂರು ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವ ನಿರ್ಧಾರ ಕೈ ಬಿಡಲಾಗಿದೆ. ಒಟ್ಟು 85,000 ಕುಟುಂಬಗಳು ಈ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದರು.

Gust_house_Open_2 Gust_house_Open_3 Gust_house_Open_4 Gust_house_Open_6a

ಕುದುರೆಮುಖದಲ್ಲಿ ಹುಲಿ ಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರದಿಂದ ಈ ಬಗ್ಗೆ ಸಲಹೆ ಬಂದಿದೆ. ಆದರೆ ರಾಜ್ಯ ಸರಕಾರ ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಹುಲಿ ಯೋಜನೆ ಕುರಿತು ಸ್ಥಳೀಯರಲ್ಲಿ ಈಗಲೇ ಭೀತಿ ಉಂಟಾಗಿದೆ. ಸರಕಾರ ಪರಿಸ್ಥಿತಿಯನ್ನು ಹದೆಗೆಡಿಸಲು ಇಷ್ಟಪಡುವುದಿಲ್ಲ. ಇದೊಂದು ಸೂಕ್ಷ್ಮ ವಿಚಾರ ಎಂದರು.

ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ ಇಕೋ ಟೂರಿಸಂಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜಂಗಲ್‌ ಲಾಡ್ಜ್, ಕ್ಯಾಂಪ್‌ಗ್ಳು ಮತ್ತಿತರ ಚಟುವಟಿಕೆಗಳು ಅರಣ್ಯ ಇಲಾಖೆ ಮೂಲಕ ನಡೆಯುತ್ತಿದೆ ಎಂದರು. ದ.ಕ. ಜಿಲ್ಲೆಯಲ್ಲಿ ಒಟ್ಟು 78,000 ಎಕರೆ ಅರಣ್ಯ ಪ್ರದೇಶ ಗುರುತಿಸಲಾಗಿದ್ದು ಇದನ್ನು ಒತ್ತುವರಿಯಾಗದಂತೆ ಯಥಾಸ್ಥಿಯಲ್ಲಿ ಉಳಿಸಲು ಸಕಲ ಕ್ರಮ ಕೈಗೊಳ್ಳಲಾಗುವುದು. 1980ರ ಹಿಂದೆ ಭೂಮಿ ಮಂಜೂರಾದ ಕುಟುಂಬಗಳನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಚಿಂತಿಸಲಾಗಿದೆ ಎಂದು ರೈ ಹೇಳಿದರು.

ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರಿಕೆ :

ಬಂಡೀಪುರ ರಸ್ತೆಗೆ ಪರ್ಯಾಯವಾಗಿ ನಿರ್ಮಿಸಲಾದ ಕುಟ್ಟಿ ತಿತ್ತಪಟ್ಟಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಕೇರಳಕ್ಕೆ ಸಾಗುವ ವಾಹನಗಳು ಅದರ ಮೂಲಕ ಸಂಚರಿಸ ಬಹುದಾಗಿದೆ. ಈಗಿರುವ ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರಿಯಲಿದೆ. ಬಂಡೀಪುರ ಅರಣ್ಯ ಮೀಸಲು ವ್ಯಾಪ್ತಿಯಲ್ಲಿರುವುದರಿಂದ ಪ್ರಾಣಿಗಳ ವಾಸಸ್ಥಾನವಾಗಿದೆ. ಹೀಗಾಗಿ ಸರಕಾರ ವಿಧಿಸಿರುವ ವಾಹನ ಸಂಚಾರದ ಸಮಯ ಮಿತಿಯನ್ನು ಸಡಿಲಗೊಳಿಸುವ ಪ್ರಶ್ನೆಯೇ ಸರಕಾರದ ಮುಂದಿಲ್ಲ. ಈ ಬಗ್ಗೆ ಕೇರಳದ ಮುಖ್ಯಮಂತ್ರಿಯವರಿಗೆ ಚರ್ಚೆ ವೇಳೆಗೆ ಸ್ಪಷ್ಟಪಡಿಸಲಾಗಿದೆ. ಹೊಸ ರಸ್ತೆ ಕೇವಲ 20 ಕಿ.ಮೀ. ಮಾತ್ರ ಹೆಚ್ಚುವರಿಯಾಗಿ ಕ್ರಮಿಸಲು ಸಿಗುತ್ತದೆ; ಆದರೆ ಸುರಕ್ಷಿತವಾಗಿ ಸಂಚಾರ ಕೈಗೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಮೊಯ್ದಿನ್ ಬಾವಾ, ಉಪಮೇಯರ್‌ ಪುರುಷೋತ್ತಮ್‌ ಚಿತ್ರಾಪುರ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ. ಸುಗೂರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment