ಕೋಲಾರ/ಚಿಕ್ಕಮಗಳೂರು, ಜೂ.19: ಬೆಂಗಳೂರು ಮೂಲದ ಚಿನ್ನಾಭರಣ ಉದ್ಯಮಿಯ 18 ಕೆಜಿ ಚಿನ್ನವನ್ನು ಸಿನಿಮೀಯ ರೀತಿಯಲ್ಲಿ ದೋಚಿದ್ದ ಖದೀಮನಿಗೆ ಸಹಕ ರಿಸಿದ ನಾಲ್ವರನ್ನು ಬಂಧಿಸಿರುವ ಪೊಲೀಸರು 17 ಕೆಜಿ ಚಿನ್ನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲ್ಕತ್ತಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಚಿನ್ನಾಭರಣವನ್ನು ಕೋಲಾರದ ಬಳಿ ಚಾಲಾಕಿತನದಿಂದ ಕಾರು ಸಮೇತ ದೋಚಿದ್ದ ಪ್ರಮುಖ ಆರೋಪಿ ಪೈಕಿ ನಾಲ್ವರು ಖದೀಮರನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ.
ಬೆಂಗಳೂರು ಮೂಲದ ಚಿನ್ನಾಭರಣ ಉದ್ಯಮಿಗೆ ಸೇರಿದ ಸುಮಾರು 18 ಕೆಜಿ ಚಿನ್ನಾಭರಣವನ್ನು ಕಳೆದ ಜೂನ್ 6 ರಂದು ದೋಚಲಾಗಿತ್ತು. ತೀವ್ರ ಸಂಚಲನ ಸೃಷ್ಟಿಸಿದ್ದ ಪ್ರಕರಣವನ್ನು ಬೇಧಿಸಲು ಕೋಲಾರ ಹಾಗೂ ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಖದೀಮರು ಕೊಂಡೊಯ್ದಿದ್ದ ಕಾರು ಇತ್ತೀಚೆಗೆ ಕೋಲಾರದ ಬಳಿ ಪತ್ತೆಯಾಗಿತ್ತು. ಕಳೆದ ರಾತ್ರಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಲಾಡ್ಜ್ ಒಂದರಲ್ಲಿ ತಂಗಿದ್ದ ಶಿವಕುಮಾರ್, ವಿಶ್ವನಾಥ್, ಮನ್ಸೂರ್, ಅಮ್ಜದ್ ಎಂಬುವರನ್ನು ಬಂಧಿಸಿ, ಚಿಕ್ಕಮಗಳೂರು ಹೊರವಲಯದ ನಲ್ಲೂರಿನ ಜಮೀನು ಹಾಗೂ ದನದ ಕೊಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ : ಬೆಂಗಳೂರಿನ ಓಂ ಜುವೆಲರಿ ಅಂಗಡಿಯ ಮಾಲೀಕ ರಾಜೇಶ್ಭಟ್ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಕಾರಿನಲ್ಲಿ ಕೋಲ್ಕತ್ತಾಗೆ ಹೋಗಿ 18 ಕೆಜಿ ಚಿನ್ನದ ಆಭರಣಗಳನ್ನು ಮಾಡಿಸಿಕೊಂಡು ಹಿಂದಿರುಗುತ್ತಿದ್ದರು. ಜೂನ್ 6 ರಂದು ಬೆಂಗಳೂರಿಗೆ ಮರಳುವಾಗ ಕೋಲಾರದ ಸಮೀಪದ ಅಡಿಗಾಸ್ ಹೋಟೆಲ್ ಬಳಿ ಊಟಕ್ಕಾಗಿ ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಚಾಲಾಕಿ ಕಾರಿನ ಚಾಲಕ ತನಗೆ ಊಟ ಬೇಡವೆಂದು ಹೇಳಿ ಕಾರಿನಲ್ಲೇ ಕುಳಿತುಕೊಳ್ಳುವುದಾಗಿ ತಿಳಿಸಿದ್ದರಿಂದ ರಾಜೇಶ್ಭಟ್ ಮತ್ತು ಸ್ನೇಹಿತರು ಹೋಟೆಲ್ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಕಾರು ಚಾಲಕ ಬಾಬು ಆಭರಣಗಳ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ.
ರಾಜೇಶ್ಭಟ್ ಊಟ ಮುಗಿಸಿ ಹೊರಬಂದಾಗ ಕಾರು ಇಲ್ಲದಿರುವುದನ್ನು ಗಮನಿಸಿ ತಕ್ಷಣ ಪೊಲೀಸರ ಗಮನಕ್ಕೆ ತಂದು ದೂರು ನೀಡಿದ್ದರು. ಅತ್ತ ಕಾರು ಚಾಲಕ ಬಾಬು ತನ್ನನ್ನು ಕೆಲಸಕ್ಕೆ ಸೇರಿಸಿದ್ದ ಶಿವಕುಮಾರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪೂರ್ವ ನಿಯೋಜನೆಯಂತೆ ಶಿವಕುಮಾರ್ ಮತ್ತೊಂದು ಕಾರಿನಲ್ಲಿ ಬಾಬು ಹೇಳಿದ ಸ್ಥಳಕ್ಕೆ ತೆರಳಿ ಕದ್ದ ಕಾರನ್ನು ಅಲ್ಲಿಯೇ ಬಿಟ್ಟು ಮಾಲನ್ನು ಶಿವಕುಮಾರ್ ಕಾರಿಗೆ ವರ್ಗಾಯಿಸಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ನಂತರ ಇವರಿಬ್ಬರು ಹೊಸಪೇಟೆ ಬಳಿ ಬಂದು ವಿಶ್ವನಾಥ್ ಎಂಬಾತನನ್ನು ಹತ್ತಿಸಿಕೊಂಡು ಚಿಕ್ಕಮಗಳೂರಿಗೆ ಹೊರಟು ಹೋಗಿದ್ದರು. ಇಲ್ಲಿನ ಹೊರವಲಯದ ನಲ್ಲೂರಿಗೆ ತೆರಳಿ ಅಲ್ಲಿನ ನಿವಾಸಿ ಅಮ್ಜದ್ ಎಂಬಾತನ ಸಹೋದರ ಮನ್ಸೂರ್ ಮನೆಯಲ್ಲಿ ಅರ್ಧ ಭಾಗ ಚಿನ್ನ ಅಡಗಿಸಿಟ್ಟಿದ್ದರು.
ಉಳಿದ ಚಿನ್ನವನ್ನು ಬಾಬು ಇಟ್ಟುಕೊಂಡು ಅಂದಿನಿಂದ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೋಲಾರ ಎಸ್ಪಿ ಅಜಯ್ಹಿಲೋರಿ ಅವರು ಆರು ತಂಡ ರಚಿಸಿ, ಅಂದಿನಿಂದ ಈ ತಂಡ ಕಾರ್ಯಾಚರಣೆಗಿಳಿದಿತ್ತು. ಎಸ್ಪಿ ಅಜಯ್ ಹಿಲೋರಿ ಅವರು ಡಿಸಿಐಬಿ ಇನ್ಸ್ಪೆಕ್ಟರ್ ಮೋಹನ್, ಬೆಂಗಳೂರು ಗ್ರಾಮಾಂತರದ ನಾಗನಾಯಕನಹಳ್ಳಿ ಠಾಣೆ ಸಬ್ಇನ್ಸ್ಪೆಕ್ಟರ್ ಸುನಿಲ್, ಸಿಬ್ಬಂದಿಗಳಾದ ನಾರಾಯಣಸ್ವಾಮಿ, ರಾಘವೇಂದ್ರ, ಖಾಸೀಮ್, ತ್ರಿಭುವನ್ ಅವರನ್ನೊಳಗೊಂಡ ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಬಾಬು ಕದ್ದ ಆಭರಣವನ್ನು ಚಿಕ್ಕಮಗಳೂರಿನಲ್ಲಿ ಅಡಗಿಸಿಟ್ಟಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ಆಧರಿಸಿದ ಈ ತಂಡ ಚಿಕ್ಕಮಗಳೂರಿಗೆ ರಾತ್ರಿ ತೆರಳಿದ್ದ ವೇಳೆ ಬೆಂಗಳೂರಿನ ಅಶೋಕನಗರದ ಇನ್ಸ್ಪೆಕ್ಟರ್ ರಂಗಪ್ಪ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ತೆರಳಿ, ಜಂಟಿ ಕಾರ್ಯಾಚರಣೆ ನಡೆಸಿ ಸ್ಥಳೀಯರಿಂದ ಹಲವು ಮಾಹಿತಿಗಳನ್ನು ಪಡೆದು ನಲ್ಲೂರಿನಲ್ಲಿ ಆರೋಪಿಗಳಿರುವ ಬಗ್ಗೆ ಖಚಿತಪಡಿಸಿಕೊಂಡು ಅಲ್ಲಿ ದಾಳಿ ಮಾಡಿ ಆಭರಣ ದೋಚಲು ಹಾಗೂ ಆಭರಣಗಳನ್ನು ಅಡಗಿಸಿಡಲು ಸಹಾಯ ಮಾದ್ದ ಶಿವಕುಮಾರ್, ವಿಶ್ವನಾಥ್ ಸೇರಿದಂತೆ ಇಬ್ಬರನ್ನು ಬಂಧಿಸಿ ಅವರಿಂದ ಆಭರಣಗಳನ್ನು ವಶಪಡಿಸಿಕೊಂಡು ವಾಪಾಸಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಪ್ರಮುಖ ಆರೋಪಿ ಕಾರು ಚಾಲಕ ಬಾಬುಗಾಗಿ ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿ ಶಿವಕುಮಾರ್ ಎಂಬಾತನೇ ಬಾಬುನನ್ನು ಜುವೆಲರಿ ಅಂಗಡಿಯ ಮಾಲೀಕ ರಾಜೇಶ್ಭಟ್ ಅವರ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಸಿದ್ದನು. ಇಲ್ಲಿನ ಚಲನವಲನಗಳನ್ನು ಬಾಬು ಶಿವಕುಮಾರ್ಗೆ ತಿಳಿಸುತ್ತಿದ್ದ. ಅದರಂತೆ ಆಭರಣ ತರಲು ಕೊಂಡೊಯ್ದಿದ್ದ ಪೆಟ್ಟಿಗೆಯ ಕೀಯನ್ನು ಶಿವಕುಮಾರ್ ನಕಲಿ ಮಾಡಿಸಿಕೊಂಡಿದ್ದನು ಎನ್ನಲಾಗಿದೆ. ಆಭರಣ ದರೋಡೆಗೆ ಮೊದಲೇ ಸಂಚು ರೂಪಿಸಿ ಅದರಂತೆ ಅಂದು ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುವ ಮಾರ್ಗಮಧ್ಯೆ ಕೋಲಾರದ ಬಳಿ ಬಾಬು ಚಾಲಾಕಿತನದಿಂದ ಕಾರು ಸಮೇತ ಪರಾರಿಯಾಗಿ ಸ್ನೇಹಿತ ಶಿವಕುಮಾರ್ ಬಳಿ ಇದ್ದ ನಕಲಿ ಕೀ ಮೂಲಕ ಪೆಟ್ಟಿಗೆ ಯಲ್ಲಿದ್ದ ಆಭರಣ ಕಳ್ಳತನ ಮಾಡಿದ್ದ. ಕಳ್ಳತನ ಮಾಡಿದ್ದ 18 ಕೆಜಿ ಚಿನ್ನಾಭರಣಗಳ ಪೈಕಿ 1 ಕೆಜಿ ಚಿನ್ನಾಭರಣವನ್ನು ಮಾರಿ ಖರ್ಚು ಮಾಡಿಕೊಂಡಿರಬಹುದೇ ಎಂಬ ಬಗ್ಗೆಯೂ ತನಿಖೆ ಚುರುಕುಗೊಳಿಸಲಾಗಿದೆ. ಒಟ್ಟಾರೆ ಈ ಪ್ರಕರಣ ಜುವೆಲರಿ ಅಂಗಡಿಗಳ ಮಾಲೀಕರನ್ನು ದಿಗ್ಭ್ರಮೆಗೊಳಿಸಿತ್ತು.
