ಬೆಂಗಳೂರು, ಜೂ.18: ಅಂಗಡಿಯ ಬಾಗಿಲು ಮುರಿದು 15 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ ಮೂವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಕಾಟನ್ ಪೇಟೆಯ ಹರ್ಷನ್ (21), ಸುರೇಂದ್ರ ಸಿಂಗ್ (24) ಬಂಧಿತ ಆರೋಪಿಗಳಾಗಿದ್ದಾರೆ. ಇವರು ನೀಡಿದ ಮಾಹಿತಿಯ ಆಧಾರದ ಮೇಲೆ ಕಾಟನ್ ಪೇಟೆಯ ಜಾಲಾಸಿಂಗ್(24) ಎಂಬಾತನನ್ನು ಬಂಧಿಸಿ 15 ಕೆ.ಜಿ. ಬೆಳ್ಳಿಯ ವಸ್ತುಗಳು ಸೇರಿದಂತೆ, ಏಳೂವರೆ ಲಕ್ಷ ರೂ.ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿಯವರು ತಿಳಿಸಿದ್ದಾರೆ.
ಆರೋಪಿಗಳು ಹಲಸೂರು ಗೇಟ್ನ ಬಸಣ್ಣ ಲೇನ್ನಲ್ಲಿರುವ ಆರ್ಜೆಎಂ ಸಿಲ್ವರ್ ವರ್ಕ್ಸ್ ಅಂಗಡಿಯ ಬೀಗ ಒಡೆದು ಒಳನುಗ್ಗಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದರು. ಕಳೆದ ಏಪ್ರಿಲ್ ಒಂದರಂದು ನಡೆದ ಈ ಕೃತ್ಯದ ಸಂಬಂಧ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಇವರ ಬಂಧನದಿಂದ ಹಲಸೂರು ಗೇಟ್ ಠಾಣೆಯ ಐದು ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಡಿಸಿಪಿ ಸಂದೀಪ್ ಪಾಟೀಲ್ ಇದ್ದರು.

