ಕರ್ನಾಟಕ

‘ಪೊಲೀಸರಲ್ಲಿ ಎಲ್ಲರೂ ಕೆಟ್ಟವರಲ್ಲ, ಸ್ಥೈರ್ಯ ಕುಗ್ಗಿಸಬೇಡಿ’

Pinterest LinkedIn Tumblr

HBubli-airport

ಹುಬ್ಬಳ್ಳಿ,ಜೂ.15: ಪೊಲೀಸ್ ಇಲಾಖೆಯಲ್ಲಿ ಎಲ್ಲರೂ ಕೆಟ್ಟವರಿಲ್ಲ. ಒಳ್ಳೆಯವರೂ ಹೆಚ್ಚಾಗಿ ಇದ್ದಾರೆ. ಕೆಲವರು ಮಾಡಿದ ಕೆಟ್ಟ ಕೆಲಸಗಳು ಇನ್ನುಳಿದವರ ಮೇಲೆ ಪರಿಣಾಮ ಬೀರಿ ಕೆಟ್ಟ ಹೆಸರು ಬರುತ್ತಿದೆ. ಸಿಬ್ಬಂದಿಗಳು ಎಚ್ಚರಿಕೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ತಿಳಿಸಿದರು.

ಪೊಲೀಸರು ಮುಕ್ತವಾಗಿ ಕಾರ್ಯನಿರ್ವಹಿಸದೇ ಇರಲು ಅವರ ದೌರ್ಬಲ್ಯಗಳು ಕಾರಣವಾಗಿವೆ. ಕೆಲವರು ಮಾಡುವ ಕೆಲಸದಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಇಂತಹ ಪ್ರಕರಣಗಳಿಂದ ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಬೇಡ. ಸಿಬ್ಬಂದಿಗಳು ಕೂಡ ಸ್ಥೈರ್ಯ ಕಳೆದುಕೊಳ್ಳದೆ ಕೆಲಸ ಮಾಡಬೇಕು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಇದರಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಸಿಐಡಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಹನುಮಂತರಾಯ ಸೇರಿದಂತೆ ಇಲಾಖೆಯ ನರೇಂದ್ರ, ಕಾಲವಾಡ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಇವರ ಮನೆಗಳ ಮೇಲೆ ದಾಳಿ ಮಾಡಿ ಮಹತ್ವದ ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಓಂಪ್ರಕಾಶ್, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕೆಂದರು. ಪೊಲೀಸರು ತಮ್ಮ ಕರ್ತವ್ಯದಲ್ಲಿ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಬೇಕೆಂದರು. ಪೊಲೀಸರು ಮಾಡಿದ ಒಳ್ಳೆಯ ಕೆಲಸಗಳು ಬೆಳಕಿಗೆ ಬರುವುದಿಲ್ಲ ಎಂದ ಓಂಪ್ರಕಾಶ್, ಕೆಲವು ವಿಷಯಗಳನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದರು. ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿನ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Write A Comment