ರಾಷ್ಟ್ರೀಯ

ಸುಷ್ಮಾ ಸ್ವರಾಜ್ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು

Pinterest LinkedIn Tumblr

sushma-lalit

ನವದೆಹಲಿ,ಜೂ.15: ಬಹು ಕೋಟಿ ರೂಪಾಯಿಗಳ ಆರೋಪ ಎದುರಿಸುತ್ತಿರುವ ಕಳಂಕಿತ ಐಪಿಎಲ್‌ನ ಮಾಜಿ ಆಯುಕ್ತ ಲಲಿತ್ ಮೋದಿ ಅವರಿಗೆ ವೀಸಾ ವಿಸ್ತರಣೆಗೆ ನೆರವು ನೀಡಿರುವುದರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ವಹಿತಾಸಕ್ತಿ ನಿಚ್ಚಳವಾಗಿ ಕಾಣುತ್ತಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.

ಸಚಿವೆ ಸುಷ್ಮಾ ಸ್ವರಾಜ್ ಮತ್ತು ಲಲಿತ್ ಮೋದಿ ಕುಟುಂಬದ ನಡುವೆ ಇರುವ ಸಂಬಂಧಗಳು ಎಲ್ಲರಿಗೂ ತಿಳಿದಿವೆ. 700 ಕೋಟಿ ರೂ.ಗಳ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಸಿಲುಕಿ, ಬಂಧನಕ್ಕೆ ಹೆದರಿ ವಿದೇಶದಲ್ಲಿರುವ ಲಲಿತ್ ಮೋದಿಗೆ ಮಾನವೀಯತೆಯ ನೆಪವೊಡ್ಡಿ ಸಹಾಯ ಮಾಡಿರುವುದು ಸಚಿವರ ಸ್ವಹಿತಾಸಕ್ತಿಗೆ ದ್ಯೋತಕವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ವಕ್ತಾರ ಪಿ.ಎಲ್.ಪುನಿಯಾ ಹೇಳಿದ್ದಾರೆ.

ಪ್ರಶಾಂತ್ ಭೂಷಣ್ ಆಗ್ರಹ

ಸುಷ್ಮಾ ಸ್ವರಾಜ್‌ರವರ ಈ ಪ್ರಕರಣದಲ್ಲಿ ಮಾನವೀಯ ನೆಲೆ ಎಲ್ಲಿಯೂ ಇಲ್ಲ. ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ಹಿತಾಸಕ್ತಿಯ ಕೆಲಸವಾಗಿದ್ದು, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಇದು ಅಪ್ಪಟ ಅಧಿಕಾರದ ದುರ್ಬಳಕೆಯಾಗಿದೆ. ಮೋದಿಗೆ ಸ್ವತಃ ಸ್ವರಾಜ್‌ರವರ ಪುತ್ರಿಯೇ ವಕೀಲರಾಗಿದ್ದಾರೆ. ಹಾಗಾಗಿ ಇಲ್ಲಿ ಅವರ ಸಂಬಂಧಗಳು ಕೆಲಸ ಮಾಡಿವೆ. ಮೋದಿ ಪರ ಸಚಿವೆ ಕೆಲಸ ಮಾಡಿದ್ದಾರೆ. ಇದು ಭಾರತ, ಬ್ರಿಟನ್‌ಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಬಿಗಿಭದ್ರತೆ: ಸುಷ್ಮಾ ಸ್ವರಾಜ್ ವೀಸಾ ಪ್ರಕರಣದ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದು, ಸಚಿವೆಯ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Write A Comment