ಕರ್ನಾಟಕ

ಸಕ್ಕರೆ ಕಾರ್ಖಾನೆಗಳಿಗೆ 6000 ಕೋಟಿ ಬಡ್ಡಿ ರಹಿತ ಸಾಲ

Pinterest LinkedIn Tumblr

Sugar-Factoryy

ನವದೆಹಲಿ, ಜೂ.10- ಸಕ್ಕರೆ ಕಾರ್ಖಾನೆಗಳಿಗೆ ನೆರವಾಗಲು ಸುಮಾರು 6 ಸಾವಿರ ಕೋಟಿ ರೂ.ಗಳನ್ನು ಬಡ್ಡಿ ರಹಿಸ ಸಾಲ ನೀಡಲು ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ಸೂಚಿಸಿದೆ. ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಸಾವಿರಾರು ಕೋಟಿ ರೂ. ಬಾಕಿ ಹಣವನ್ನು ನೀಡಲು ಇದರಿಂದ ಸಾಧ್ಯವಾಗಲಿದೆ.

ಮಹತ್ವದ ಈ ನಿರ್ಧಾರದಿಂದ ರೈತರಿಗೆ ಶೀಘ್ರದಲ್ಲಿಯೇ ಬಾಕಿ ಹಣ ಸಿಗುವ ಸಾಧ್ಯತೆ ಇದೆ. ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೂ ಇದು ಅನುಕೂಲವಾಗಲಿದೆ. ಕಾರ್ಖಾನೆಗಳು ಈಗ ಯಾವುದೇ ಸಬೂಬು ನೀಡದೆ ರೈತರಿಗೆ ಹಣ ಪಾವತಿಸಬೇಕಾಗಿದೆ.  ಕೆಲವು ಅಗತ್ಯ ಮಾಹಿತಿಗಳು ಹಾಗೂ ಭದ್ರತೆ ನೀಡಿ ಈ ಸಾಲವನ್ನು ಪಡೆಯಬಹುದಾಗಿದೆ ಮತ್ತು ಇದರ ಮರುಪಾವತಿಯನ್ನು ಯಾವುದೇ ಬಡ್ಡಿ ಇಲ್ಲದೆ ನೀಡಲು ದೀರ್ಘಾವದಿ ಕಾಲಾವಕಾಶವನ್ನು ನೀಡಲಾಗಿದೆ.

* ಕಬ್ಬು ಬೆಳೆಗಾರರ ನೆರವಿಗೆ ಕೇಂದ್ರಕ್ಕೆ ಒತ್ತಾಯ
ಬೆಂಗಳೂರು, ಜೂ.10-ಸಕ್ಕರೆ ಬೆಲೆ ಕುಸಿತದಿಂದ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. 2013-14ರಲ್ಲಿ ರಾಜ್ಯ ಸರ್ಕಾರ ಪ್ರತಿ ಮೆಟ್ರಿಕ್ ಟನ್‌ಗೆ 2500ರೂ. ಬೆಲೆ ಘೋಷಣೆ ಮಾಡಿತ್ತು. ಆದಾಗ್ಯೂ  2013 ನವೆಂಬರ್ 13ರಿಂದ ಬೆಲೆ ಕುಸಿಯುತ್ತಿದೆ.

ರಾಜ್ಯ ಸರ್ಕಾರ ವಿವಿಧ ತೆರಿಗೆ ರಿಯಾಯ್ತಿ ಹೆಸರಿನಲ್ಲಿ 1173 ರೂ. ಹಣ ನೀಡಿದೆ. ಸಕ್ಕರೆ ಕಾರ್ಖಾನೆಗಳಿಂದ 923 ಕೋಟಿ ರೂ. ಬಾಕಿ ಬರಬೇಕಿದೆ ಎಂದು ಕೇಂದ್ರ ಸಚಿವರಿಗೆ ವಿವರಿಸಿದ್ದಾರೆ. 2014-15ನೇ ಸಾಲಿನಲ್ಲಿ ರಾಜ್ಯದಲ್ಲಿ 448.77ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು 49.63ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ಕೇಂದ್ರ ಸರ್ಕಾರ 2200ರೂ. ಬೆಂಬಲ ಬೆಲೆ ಘೋಷಿಸಿದೆ. ಈಮೊದಲು ಪ್ರತಿ ಕೆಜಿ ಸಕ್ಕರೆ 30ರಿಂದ 34ರೂ. ದರವಿತ್ತು. ಇತ್ತೀಚೆಗೆ 23-25ರೂ.ಗೆ ಕುಸಿದಿದೆ.ಇದರಿಂದಾಗಿ ಸಕ್ಕರೆ ಕಾರ್ಖಾನೆಗಳು ಈ ವರ್ಷದ 2642 ಕೋಟಿ ರೂ. ಬಾಕಿಯನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿವೆ.  ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಡಾ.ಸಿ.ರಂಗರಾಜನ್ ಸಮಿತಿ ವರದಿಯಂತೆ ಆದಾಯ ಹಂಚಿಕೆ ನಿಯಮಗಳನ್ನು ಅನುಸರಿಸಿ 70:30ರಷ್ಟು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.ಕೇಂದ್ರ ಸರ್ಕಾರ ಘೋಷಿಸಿರುವ 2200ರೂ. ಬೆಂಬಲ ಬೆಲೆ ನೀಡಲು ಸಕ್ಕರೆ ಬೆಲೆ ಕುಸಿತದಿಂದ ಸಾಧ್ಯವಾಗುತ್ತಿಲ್ಲ. ಸುಮಾರು 400ರಿಂದ 500ರೂ.ನಷ್ಟು ನಷ್ಟವಾಗುತ್ತಿದೆ. 1800ರೂ. ಬೆಂಬಲ ಬೆಲೆ ನೀಡಲು ಸಾಧ್ಯ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಾಕಿ ಹಣವನ್ನು ಕೇಂದ್ರ ಸರ್ಕಾರವೇ ನೀಡಬೇಕೆಂದು ಮುಖ್ಯಮಂತ್ರಿ ಕೇಂದ್ರ ಸಚಿವರನ್ನು ಕೋರಿದ್ದಾರೆ.

Write A Comment