ಕರ್ನಾಟಕ

ಲಾಟರಿ ಹಗರಣ ತೆಲಗಿ ಹಗರಣಕ್ಕಿಂತಲೂ ಬಹುದೊಡ್ಡ ಹಗರಣ; ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸುತ್ತಿಲ್ಲ: ಬಿಜೆಪಿ ರಾಜ್ಯಾಧಕ್ಷ ಪ್ರಹ್ಲಾದ್ ಜೋಷಿ

Pinterest LinkedIn Tumblr

pralhad

ಗದಗ,ಜೂ.9: ರಾಜ್ಯದಲ್ಲಿ ನಡೆದಿರುವ ಲಾಟರಿ ಹಗರಣ ತೆಲಗಿ ಹಗರಣಕ್ಕಿಂತಲೂ ಬಹುದೊಡ್ಡ ಹಗರಣ. ಹಾಗಾಗಿ ತೆಲಗಿ ಹಗರಣದ ಅಜ್ಜನಂತಿದೆ ಎಂದು ಬಿಜೆಪಿ ರಾಜ್ಯಾಧಕ್ಷ ಪ್ರಹ್ಲಾದ್ ಜೋಷಿ ಟೀಕಿಸಿದರು.

ನಗರದಲ್ಲಿ ನಡೆದ ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಾಟರಿ ಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಹಗರಣ ತನಿಖೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸಿದರೆ, ದಾವಣಗೇರಿಯಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಅಪಹಾಸ್ಯ ಮಾಡಿದ್ದರು. ಮುಖ್ಯಮಂತ್ರಿಗಳ ಆಶಿರ್ವಾದವಿಲ್ಲದೇ, ಗೃಹ ಸಚಿವರ ಕುಮ್ಮಕ್ಕು ಇಲ್ಲದೇ ಇಂತಹ ಹಗರಣ ನಡೆಯಲು ಸಾಧ್ಯವಿಲ್ಲ. ನಮ್ಮನ್ನು ಎದುರಿಸುವ ಉದ್ದೇಶದಿಂದ ಈ ಬಗ್ಗೆ 2007ರಿಂದಲೇ ತನಿಖೆ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ನಾವು ಯಾವತ್ತು ಇಂತಹ ಹಗರಣಗಳನ್ನು ಮಾಡಿಲ್ಲ. ಯಾವುದೇ ತಪ್ಪು ಮಾಡದ ನಮಗೆ ಭಯವಿಲ್ಲ. ಕೂಡಲೇ ತನಿಖೆ ನಡೆಯಲಿ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ರಾಜಕಾರಣ ಹಾಗೂ ಅಭಿವೃದ್ಧಿ ಕನಿಷ್ಠ ಜ್ಞಾನವಿಲ್ಲದ ರಾಹುಲ್ ಗಾಂಧಿ ಚಿತ್ರ ನಿರ್ದೇಶಕರು ಹೇಳಿಕೊಟ್ಟಷ್ಟೆ ಡೈಲಾಗ್ ಹೇಳುವ ನಟರಿದ್ದಂತೆ ಎಂದು ಲೇವಡಿ ಮಾಡಿದರು. 60 ವರ್ಷದ ದೇಶದ ಇತಿಹಾಸದಲ್ಲಿ ಏಕೆ ಕಾನೂನುಗಳನ್ನು ಬದಲಾವಣೆಗೆ ತರಲಿಲ್ಲ. ಇಂದಿಗೂ ಕೂಡ ದೇಶದಲ್ಲಿ 21000 ಹಳ್ಳಿಗಳಲ್ಲಿ ಜನರು ಫ್ಲೋರೈಡ್ ನೀರು ಕುಡಿಯುತ್ತಿದ್ದಾರೆ. ರಾಜ್ಯದಲ್ಲಿ ಕಟ್ಟಡ ನಿರ್ಮಾಣಕಾರ್ಯ ಬಹುಪ್ರಯಾಸದ ಕಾರ್ಯವಾಗಿದೆ. ಕಟ್ಟಡ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಇದಕ್ಕೆ ಮರಳು ಮಾಫಿಯಾ ಕಾರಣ ಎಂದು ಜೋಷಿ ಆರೋಪಿಸಿದರು.

ಟೋಪಿ ಹಾಕಿ ಅಧಿಕಾರಕ್ಕೆ ಬಂದ ಕಾಂಗ್ರೆಸ್
ಗದಗ: ಜನರಿಗೆ ಟೋಪಿ ಹಾಕುವ ಮೂಲಕ ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಟೀಕಿಸಿದ್ದಾರೆ.

ನಗರದಲ್ಲಿ ನಡೆದ ಭಾರತಿಯ ಜನತಾ ಪಕ್ಷದ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಜನರಿಗೆ ದೇಶಾಭಿವೃದ್ಧಿಯ ಬಗ್ಗೆ ಮನವರಿಕೆ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು. 50 ವರ್ಷ ಗಾಂಧಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು, ಕೆಲವು ವರ್ಷ ಇಂದಿರಾಗಾಂಧಿ, ಇನ್ನು ಕೆಲವು ವರ್ಷ ರಾಜೀವಗಾಂಧಿ ಬೂದಿ ಹಿಡಿದುಕೊಂಡು ಅಧಿಕಾರಕ್ಕೆ ಬಂದಿದ್ದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಜನಪರ ಕಾರ್ಯಕ್ರಮಗಳೇನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಮಿಸ್‌ಕಾಲ್ ಮಾಡುವ ಮೂಲಕ ಪಕ್ಷದ ಸದಸ್ಯತ್ವ ಮಾಡಿಸುವ ಪ್ರಕ್ರಿಯೆ ಕಾಂಗ್ರೆಸ್ ಲೇವಡಿ ಮಾಡಿತ್ತು. ಆದರೆ ಈಗ ಪಕ್ಷದ ಸದಸ್ಯತ್ವ ಸಂಖ್ಯೆ ನೋಡಿ ದಂಗು ಬಡಿದವರಂತಾಗಿದ್ದಾರೆ ಎಂದು ಲೇವಡಿ ಮಾಡಿದರು. ದೇಶದ ಜನರ ಅಭಿವೃದ್ಧಿ ಹಾಗೂ ರಕ್ಷಣೆಯ ಭಾರ ಹೊತ್ತಿರುವ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಸುಳ್ಳು ಹೇಳಲೆಂದೆ ಹುಟ್ಟಿದವರೆಂಬುದು ಇಡೀ ದೇಶದ ಜನರಿಗೆ ಇಂದು ಅರ್ಥವಾಗಿದೆ ಎಂದು ಕುಟುಕಿದರು.

Write A Comment