ತುರುವೇಕೆರೆ,ಜೂ.8- ಶಿಕ್ಷಕರು ಸೇವೆಯ ಆರಂಭದಲ್ಲಿ 5 ವರ್ಷಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಕಡ್ಡಾಯವಾಗಿ ಮಾಡಲೇಬೇಕೆಂಬ ಹೊಸ ನೀತಿಯನ್ನು ಜಾರಿಗೆ ತರುವ ಚಿಂತನೆ ಸರ್ಕಾರದ ಮುಂದಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು. ತುರುವೇಕೆರೆ ಪಟ್ಟಣದ ವಿಶ್ವವಿಜಯ ವಿದ್ಯಾ ಶಾಲಾ
ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್.ಟಿ.ಈ.ಶಿಕ್ಷಣ ಪದ್ದತಿಯನ್ವಯ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಆದರೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಗುರುತಿಸಲು ಜನವರಿ ತಿಂಗಳಲ್ಲಿ 5 ದಿನಗಳ ಕಾಲ ಅರ್ಹತಾ ಪರೀಕ್ಷೆ ನೆಡೆಸಲಾಗುವುದು, ಇದರಿಂದ ಪೋಷಕರಿಗೆ ತಮ್ಮ ಮಕ್ಕಳ ಕಲಿಕಾ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಉದ್ದೇಶ ಇದಾಗಿದೆ ಎಂದರು. ರಾಜ್ಯದ 55 ಸಾವಿರ ಸರ್ಕಾರಿ ಶಾಲಾ ಕಟ್ಟಡವನ್ನು ಸದೃಡಗೊಳಿಸಲು 6 ಸಾವಿರ ಕೋಟಿರೂಗಳ ಅವಶ್ಯಕತೆಇದೆ. ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕತೆಯೂ ಇದೆ ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಶ್ರಮಿಸುವುದಾಗಿ ತಿಳಿಸಿದರು.
——–
*ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ: ಕಿಮ್ಮನೆ
ಬೆಂಗಳೂರು, ಜೂ.8- ಇದೇ ತಿಂಗಳ 27ರ ವರೆಗೆ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆ ವಿಳಂಬವಾಯಿತು. ಯಾವುದೇ ಸರ್ಕಾರಿ ನೌಕರರ ವರ್ಗಾವಣೆ ಮಾಡಬಾರದು ಎಂದು ಮಾರ್ಚ್, ಏಪ್ರಿಲ್ನಲ್ಲಿ ಚುನಾವಣಾ ಆಯುಕ್ತರು ಸ್ಪಷ್ಟ ನಿರ್ದೇಶನ ನೀಡಿದ್ದರು. ನೀತಿ-ಸಂಹಿತೆ ಜಾರಿಯಲ್ಲಿದ್ದರಿಂದ ವರ್ಗಾವಣೆಯನ್ನು ಈ ತಿಂಗಳ 27ರ ವರೆಗೆ ಮುಂದುವರಿಸುವುದಾಗಿ ಕಿಮ್ಮನೆ ವಿವರಿಸಿದರು. ಜೂನ್ 5ರೊಳಗೆ ಶಿಕ್ಷಕರ ವರ್ಗಾವಣೆ ಪೂರ್ಣಗೊಳಿಸಬೇಕಿತ್ತು. ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಎದುರಾಗಿದ್ದರಿಂದ ವರ್ಗಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತೊಂಡಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಈ ತಿಂಗಳ 27ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
