ಕರ್ನಾಟಕ

ಅಕ್ಕನ ಸೋಲಿಸಿದ ತಂಗಿ, ಲಾಟರಿ ಹೊಡಿಸಿದ ಗೆಲವು

Pinterest LinkedIn Tumblr

Gram-Panchayat-Election

ಬೆಂಗಳೂರು: ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದ ಕುತೂಹಲಕ್ಕೆ ತೆರೆ, ಸತ್ತವರನ್ನೂ ಆರಿಸಿ ಅಚ್ಚರಿ ತಂದರು ರಾಜ್ಯದ 5835 ಗ್ರಾಮ ಪಂಚಾಯಿತಿಯ 94348 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.

ರಾಜ್ಯದ 176 ತಾಲೂಕು ಕೇಂದ್ರಗಳಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಮತ ಎಣಿಕೆ ಕಾರ್ಯ ತಡರಾತ್ರಿಯವರೆಗೂ ಮುಂದುವರಿದಿದ್ದು, ರಾತ್ರಿ 8.30 ಗಂಟೆಯ ವೇಳೆಗೆ 55000 ಸ್ಥಾನಗಳ ಫಲಿತಾಂಶ ಅಧಿಕೃತವಾಗಿ ಲಭ್ಯವಾಗಿದೆ. ಪಂಚಾಯಿತಿ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಮಾತ್ರ ವಿದ್ಯುನ್ಮಾನ ಮತಯಂತ್ರವನ್ನು ಅಳವಡಿಸಲಾಗಿತ್ತು. ಬೀದರ್ ಜಿಲ್ಲೆಯ 2987 ಪಂಚಾಯಿತಿ ಸದಸ್ಯ ಸ್ಥಾನಗಳ ಫಲಿತಾಂಶ ಮಾತ್ರ ಸಂಜೆ 4 ಗಂಟೆಗೆ ಪ್ರಕಟಗೊಂಡಿದೆ. ಉಳಿದ 29 ಜಿಲ್ಲೆಗಳಲ್ಲಿ ಮತಪತ್ರ ಬಳಕೆಯಾಗಿದ್ದರಿಂದ ರಾತ್ರಿ 10.30ರವರೆಗೂ ಎಣಿಕೆ ಕಾರ್ಯ ನಡೆದಿದ್ದು, ಅತಿ ಹೆಚ್ಚು ಪಂಚಾಯಿತಿ ಸ್ಥಾನ ಮತ್ತು ಅಭ್ಯರ್ಥಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಿಂದ ಕೊನೆಯದಾಗಿ ಫಲಿತಾಂಶಗಳ ವಿವರ ಲಭ್ಯವಾಗಲಿದೆ.

ಸಂಜೆ ನಾಲ್ಕು ಗಂಟೆಗೆ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆ ಪ್ರಕಾರ 82408 ಸ್ಥಾನಗಳ ಪೈಕಿ 34500ಕ್ಕೆ ಮಾತ್ರ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಪ್ರಕಟ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಶ್ರೀನಿವಾಸಾಚಾರಿ ಮಾತನಾಡಿ, `ರಾಜ್ಯದ ಎಲ್ಲ ಜಿಲ್ಲೆಗಳ ಪಂಚಾಯಿತಿ ಸ್ಥಾನಗಳ ಫಲಿತಾಂಶದ ಸ್ಪಷ್ಟ ಚಿತ್ರಣ ಮತ್ತು ಗೆದ್ದ ಪುರುಷ-ಮಹಿಳೆಯರ ವಿವರ ಶನಿವಾರವೇ ಲಭ್ಯವಾಗುತ್ತದೆ. ಇದುವರೆಗೆ ಸುಮಾರು 55 ಸಾವಿರ ಸ್ಥಾನಗಳ ಫಲಿತಾಂಶ ಮಾತ್ರ ಲಭ್ಯವಾಗಿದೆ’ ಎಂದು ಹೇಳಿದರು.

ಮೇ 29 ಮತ್ತು ಜೂನ್ 2ರಂದು ರಾಜ್ಯದ 5835 ಗ್ರಾಮ ಪಂಚಾಯಿತಿಯ 94348 ಸ್ಥಾನಗಳಿಗಾಗಿ ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ 233489 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ 176 ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿತ್ತು. ಪ್ರತಿ ಮತ ಎಣಿಕೆ ಕೇಂದ್ರಕ್ಕೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ ಮತ್ತು ಒಬ್ಬ ಗ್ರೂಪ್ ಡಿ ಉದ್ಯೋಗಿಯನ್ನು ನಿಯೋಜಿಸಲಾಗಿತ್ತು. 5835 ಪಂಚಾಯಿತಿಯ 94348 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ 233489 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಅವರಲ್ಲಿ 109237 ಮಹಿಳಾ ಅಭ್ಯರ್ಥಿಗಳಾಗಿದ್ದರು.

ಮೇ 29 ರಂದು 3154 ಪಂಚಾಯಿತಿಗಳ 48593 ಸ್ಥಾನಗಳಿಗೆ 119648 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ 54653 ಮಹಿಳಾ ಅಭ್ಯರ್ಥಿಗಳಿದ್ದರು. 582 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. 4466 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಮೊದಲ ಹಂತದಲ್ಲಿ ಶೇ.80.33ರಷ್ಟು ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಜೂನ್ 2ರಂದು 2681 ಗ್ರಾಮ ಪಂಚಾಯಿತಿಗಳ 45755 ಸ್ಥಾನಕ್ಕೆ 113841 ಮಂದಿ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ 54584 ಮಹಿಳಾ ಅಭ್ಯರ್ಥಿಗಳಾಗಿದ್ದು, 4224 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.320 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಕಡ್ಡಾಯ ಮತದಾನ ಪದ್ಧತಿ ಜಾರಿಗೆ ಬಂದಿದ್ದರೂ ಕಳೆದ ವರ್ಷಕ್ಕಿಂತ ಕೇವಲ ಶೇ.1ರಷ್ಟು ಮಾತ್ರ ಮತದಾನ ಹೆಚ್ಚಳವಾಗಿತ್ತು.

ಸೋಲಿನ ಭೀತಿಗೆ ಆತ್ಮಹತ್ಯೆ

ಚುನಾವಣೆಯಲ್ಲಿ ಸೋಲುವ ಭೀತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಚಿಂತಾಮಣಿ ತಾಲೂಕಿನ ಪೆರಮಾಕನಹಳ್ಳಿ ಗ್ರಾಪಂ ವ್ಯಾಪ್ತಿಯ ಗುನ್ನಹಳ್ಳಿ ಗ್ರಾಮದ ತಮ್ಮಣ್ಣ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ತಮ್ಮ ಸಂಬಂಧಿಕರ ಮತಗಳೇ ತನಗೆ ಬಂದಿಲ್ಲ ಎಂದು ಮಾನಸಿಕವಾಗಿ ನೊಂದ ತಮ್ಮಣ್ಣ ಬೆಟ್ಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು

ಮತ ಮರು ಎಣಿಕೆ

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಪಂನ ಅರಿಕೆರೆ ಕ್ಷೇತ್ರದ ಅಭ್ಯರ್ಥಿಗಳಾದ ಸುನಿಲ್‍ಕುಮಾರ್ 182 ಮತ್ತು ಶಿವಾರೆಡ್ಡಿ 183 ಮತ ಪಡೆದು ಕೇವಲ ಒಂದು ಮತ ವ್ಯತ್ಯಾಸವಿದ್ದ ಕಾರಣ ಸುನಿಲ್ ಕುಮಾರ್ ಮರು ಎಣಿಕೆಗೆ ಮನವಿ ಮಾಡಿದರು. ಮರು ಎಣಿಕೆ ನಡೆಸಿದಾಗ ಸುನಿಲ್‍ಗೆ 182 ಮತ ಮತ್ತು ಶಿವಾರೆಡ್ಡಿ ಅವರಿಗೆ 184 ಮತ ಬಂದು ಜಯದ ನಗೆಬೀರಿದರು ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಕದಿರನ್ನಗಾರಿ ಪಲ್ಲಿ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಶ್ರೀನಿವಾಸ್ ಮತ್ತು ನಾಗರತ್ನಮ್ಮ ಇಬ್ಬರಿಗೂ ಸಮಾನ ಮತಗಳು ಬಂದ ಕಾರಣ ಮರು ಎಣಿಕೆಗೆ ಆದೇಶಿಸಲಾಗಿದ್ದು, ಮರು ಎಣಿಕೆಯಲ್ಲಿ ಕೆ.ವಿ. ಶ್ರೀನಿವಾಸ್ ಒಂದು ಮತ ಹೆಚ್ಚು ಪಡೆದು ವಿಜಯಿಯಾದರು.

ಸತ್ತವನನ್ನೇ ಆಯ್ಕೆ ಮಾಡಿದ್ರು!

ಚುನಾವಣೆಗೆ 4 ದಿನ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯನ್ನೇ ಗ್ರಾಮದ ಮತದಾರರು ಆಯ್ಕೆ ಮಾಡಿದ್ದಾರೆ! ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಪಂಚಾಯಿತಿ ವ್ಯಾಪ್ತಿಯ ಬಿ.ಗುಂಡಾಪುರ 6ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಮೇ 29ರಂದು ನಡೆದ ಮತದಾನದಲ್ಲಿ ಜನರು ಸತ್ತ ವ್ಯಕ್ತಿಗೆ ಆಶೀರ್ವದಿಸಿರುವುದು ಆಶ್ಚರ್ಯ ಮೂಡಿಸಿದೆ. ನಾಗರಾಜು ಅವರು 390 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಗೆ ಕೇವಲ 89 ಮತಗಳು ಬಂದಿವೆ.

ಶತಾಯುಷಿ ಗೆಲವು

ಶತಾಯುಷಿ ಅಜ್ಜಿಯ ರಾಜಕೀಯ ಹುರುಪಿಗೆ ಮತದಾರರು ಹಸಿರು ನಿಶಾನೆ ತೋರಿದ್ದಾರೆ. ರಾಜ್ಯದ ಅತಿ ಹಿರಿಯ ಜನಪ್ರತಿನಿಧಿಯಾಗಿ ದೊಡ್ಡಾಲತ್ತೂರಿನ ಶತಾಯುಷಿ ಗವಿ ತಿಮ್ಮಮ್ಮ ಆಯ್ಕೆಯಾಗಿದ್ದಾರೆ. ಚಾಮರಾಜನಗರದ ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾ.ಪಂ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಸ್ಪರ್ಧಿಸಿದ್ದ 102 ವರ್ಷದ ಅಜ್ಜಿ ಗವಿ ತಿಮ್ಮಮ್ಮ ಅವರು

ಮೊದಲ ಬಾರಿಗೆ ಗ್ರಾ.ಪಂ ಸದಸ್ಯರಾಗಿದ್ದು, ತಮ್ಮ ಪ್ರತಿಸ್ಪರ್ಧಿ ಚಿನ್ನಮ್ಮ ಅವರನ್ನು 136 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮೃತಪಟ್ಟ ಮಹಿಳೆ ಗೆದ್ದರು!

ಸಿಡಿಲು ಬಡಿದು ಮೃತಪಟ್ಟಿದ್ದ ಮಲ್ಲಮ್ಮ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಪಂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕೊಪ್ಪಳ ತಾಲೂಕಿನ ನೂತನ ಗ್ರಾಮ ಪಂಚಾಯತಿ ಹಾಲವರ್ತಿಯ 2ನೇ ವಾರ್ಡ್‍ಗೆ ಸ್ಪರ್ಧಿಸಿದ್ದ ಮಲ್ಲಮ್ಮ ಕಿನ್ನಾಳ 361 ಮತ ಗಳಿಸಿದ್ದಾರೆ. ಪ್ರತಿಸ್ಪರ್ಧಿ ಹನುಮವ್ವ ಕೌದಿ 261 ಮತ ಗಳಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಮಲ್ಲಮ್ಮ ಕಿನ್ನಾಳ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ವಾರ ಹೊಲದಲ್ಲಿಯೇ ಸಿಡಿಲು ಬಡಿದು ಮೃತಪಟ್ಟಿದ್ದರು. ಗೆದ್ದ ಅಮಾಸೆ ಕೊಳ್ಳೇಗಾಲ ತಾಲೂಕಿನ ರಾಮಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗಣ್ಣ ನಗರದಿಂದ ಪರಿಶಿಷ್ಟ ಜಾತಿ ಮಹಿಳಾ ವಿಭಾಗಕ್ಕೆ ಕಣದಲ್ಲಿದ್ದ ಅಮಾಸೆ ಹಾಗೂ ಪೆರುಮಾಯಿ ಎಂಬ ಮಹಿಳೆಯರಿಬ್ಬರಿಗೂ 220 ಮತ ಪಡೆದಿದ್ದರು. ಇಬ್ಬರಿಗೂ ಸಮಮತ ದೊರೆತ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆರಿಸಲಾಯಿತು. ಆಗ ಅಮಾಸೆ ಗೆದಿದ್ದಾರೆ.

ಚೀಟಿಯಲ್ಲಿ ಸೋತರು

ಚುನಾವಣೆಯಲ್ಲಿ ಸೋಲದಿದ್ದರೂ ಚೀಟಿ ಆಯ್ಕೆಯಲ್ಲಿ ಸೋತರು! ಕಾರವಾರದ ಮಲ್ಲಾಪುರ ಟೌನ್‍ಶಿಪ್ ವಿರ್ಜೆ ಭಾಗ- 1ರಲ್ಲಿ ಸ್ಪರ್ಧಿಸಿದ್ದ ಕಮಲಕಾಂತ ನಾಯ್ಕ ಅದೃಷ್ಟ ಈ ಬಾರಿಯೂ ಕೈಕೊಟ್ಟಿದೆ. ದೇವಿದಾಸ ದೇವಕರ ಮತ್ತು ಕಮಲಕಾಂತ ನಾಯ್ಕ ಅವರಿಗೆ ಸಮನಾಗಿ 103 ಮತಗಳು ಲಭಿಸಿದ್ದವು. ಕೊನೆಗೆ ಚೀಟಿ ಎತ್ತಿದಾಗ ದೇವಿದಾಸ ದೇವಕರ ಗೆದ್ದಿದ್ದಾರೆ.

ಮಗನಿಗೆ ಶರಣಾದ ಅಪ್ಪ

ತೀವ್ರ ಕುತೂಹಲ ಮೂಡಿಸಿದ್ದ ಅಪ್ಪ ಮತ್ತು ಮಗನ ನಡುವಿನ ಪಂಚಾಯ್ತಿ ಫೈಟ್‍ನಲ್ಲಿ ಅಂತಿಮವಾಗಿ ಮಗ ಗೆಲುವಿನ ನಗೆ ಬೀರಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಎಸ್.ಕೆ. ಗ್ರಾಮದಲ್ಲಿ ಅಪ್ಪ ರಾಮಪ್ಪ ದಾಸರ ಹಾಗೂ ಮಗ ಯಲ್ಲಪ್ಪ ದಾಸರ ಕಣಕ್ಕಿಳಿದಿದ್ದರು.

ಉಚಿತ ಪಂಕ್ಚರ್ ಗೆದ್ದಿತು!

ವಿಜಯಪುರ ತಾಲೂಕಿನ ಬಾಬಾನಗರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿಯನ್ನು ಗೆಲ್ಲಿಸಿದರೆ ಐದು ವರ್ಷ ಇಡೀ ವಾರ್ಡಿನ ಮತದಾರರ ವಾಹನಗಳ ಪಂಕ್ಚರನ್ನು ಉಚಿತವಾಗಿ ತಿದ್ದುವುದಾಗಿ ಪತಿರಾಯ ನೀಡಿದ್ದ ಆಶ್ವಾಸನೆಗೆ ಮತದಾರರು ಮಣ್ಣನೆ ನೀಡಿದ್ದಾರೆ. ವೃತ್ತಿಯಲ್ಲಿ ಪಂಕ್ಚರ್ ತಿದ್ದುವ ಕೆಲಸ ಮಾಡಿಕೊಂಡಿರುವ ಲಕ್ಷ್ಮಣ ಈಶ್ವರ ಶಿಂಧೆ ತಮ್ಮ ಪತ್ನಿ ಭಾಗ್ಯಶ್ರೀ ಲಕ್ಷ್ಮಣ ಶಿಂಧೆ ಅವರನ್ನು ಬಾಬಾನಗರದ ನಾಲ್ಕನೇ ವಾರ್ಡಿನಿಂದ ಕಣಕ್ಕಿಳಿಸಿದ್ದರು. ಇವರೀಗೆ 85 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಇಲ್ಲಿನ ಜನರಿಗೆ ಇನ್ನು 5 ವರ್ಷ ಪುಕ್ಸಟ್ಟೆ ಪಂಕ್ಚರ್ ಸೇವೆ ಲಭ್ಯವಾಗಲಿದೆ.

ಏಳು ಬಾರಿ ಜಯ

ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಗ್ರಾಪಂನ ಲಿಂಗಾಪುರ ಕ್ಷೇತ್ರದ ಅಭ್ಯರ್ಥಿ ಮಹೇಶ್‍ಗೌಡ ಸತತ ಏಳನೇ ಬಾರಿಯೂ ಜಯ ಸಾಧಿಸಿದ್ದಾರೆ. 1971-72ನೇ ಸಾಲಿನಿಂದ ಅವರು ನಿರಂತರವಾಗಿ ಗ್ರಾಮ ಸಮರದಲ್ಲಿದ್ದಾರೆ. ಈ ಹಿಂದೆ ಮಂಡಲ ಪಂಚಾಯ್ತಿ ಇದ್ದಾಗಲೂ ಗೆಲವು ಪಡೆಯುತ್ತಿದ್ದ ಅವರು 1994ರ ನಂತರ ಗ್ರಾಮ ಪಂಚಾಯ್ತಿಯಾದಾಗಲೂ ಸೋಲು ಕಂಡಿಲ್ಲ. ಅವರು ಐದು ಅವಧಿಗೆ ಅಧ್ಯಕ್ಷರಾಗಿ, ಮೂರು ಅವಧಿಗೆ ಉಪಾಧ್ಯಕ್ಷರಾಗಿ, ಎರಡೂ ಸೇರಿ ಒಟ್ಟು 25 ವರ್ಷ ಕಾರ್ಯನಿರ್ವಹಿಸಿದ್ದಾರೆ. ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಅವಧಿಯಲ್ಲಿ ಭಾರಿ ಅಂತರದ ಗೆಲವು ಪಡೆದಿದ್ದಾರೆ.

ಲಾಟರಿ ಹೊಡೆಯಿತು

ಹಾವೇರಿ ತಾಲೂಕಿನ ಅಗಡಿ ಪಂಚಾಯ್ತಿಯ 1ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಮಂಜಯ್ಯ ಹಿರೇಮಠ ಅವರಿಗೆ ಅದೃಷ್ಟಲಕ್ಷ್ಮಿ ಒಲಿಯಿತು. ಅಶೋಕ ಬ್ಯಾಡಗಿ ಹಾಗೂ ಮಂಜಯ್ಯ ಹಿರೇಮಠ ಅವರಿಗೆ ತಲಾ 371 ಮತಗಳು ಬಿದ್ದಿದ್ದವು. ಆಗ ಚುನಾವಣಾಧಿಕಾರಿಗಳು ಲಾಟರಿ ಎತ್ತಲು ಮುಂದಾದರು. ಲಾಟರಿ ಎತ್ತಿದಾಗ ಮಂಜಯ್ಯ ಹಿರೇಮಠ ಹೆಸರು ಬಂದಿದ್ದರಿಂದ ಚುನಾವಣಾಧಿಕಾರಿಗಳು ಅವರನ್ನು ವಿಜಯಿ ಅಭ್ಯರ್ಥಿ ಎಂದು ಘೋಷಿಸಿದರು.

ಉಳಿದಂತೆ ಬಳ್ಳಾರಿ ಹಾಗೂ ಮೈಸೂರು ಮತ ಎಣಿಕೆ ಕೇಂದ್ರದಲ್ಲಿ ಸ್ವಲ್ಪ ಕಾಲ ಗದ್ದಲ ಏರ್ಪಟ್ಟಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ವಿಠಲ ಮಲೆಕುಡಿಯ ಸೋಲು ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಪಂ ವ್ಯಾಪ್ತಿಯ ಕುತ್ಲೂರು ವಾರ್ಡ್‍ನಲ್ಲಿ ಸ್ಪರ್ಧಿಸಿದ್ದ ನಕ್ಸಲ್ ಸಂಪರ್ಕದ ಆರೋಪ ಹೊತ್ತಿದ್ದ ವಿಠಲ ಮಲೆಕುಡಿಯ ಪರಾಭವಗೊಂಡಿದ್ದಾರೆ. 30 ಮತ ಪಡೆದಿದ್ದು, ಎದುರಾಳಿ ಕೃಷ್ಣಪ್ಪ 270 ಮತ ಪಡೆದು ಜಯಸಾಧಿಸಿದ್ದಾರೆ. ಸೋತ ಎಚ್‍ಐವಿ ಪೀಡಿತ ಬಹಳ ನಿರೀಕ್ಷೆಯೊಂದಿಗೆ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಪಂನಿಂದ ಸ್ಪರ್ಧಿಸಿದ್ದ ಎಚ್‍ಐವಿ ಸೋಂಕಿತ ಸಂಜೀವ ವಂಡ್ಸೆ ಸೋತಿದ್ದಾರೆ.

ಸೋಲಿಸಿದ ತಂಗಿ!

ಮಾಜಿ ಅಧ್ಯಕ್ಷೆ, ಅಕ್ಕನಿಗೆ ಸೋಲುಣ್ಣಿಸಿದ ತಂಗಿ! ಕಾರವಾರ ತಾಲೂಕಿನಲ್ಲಿ ಎಲ್ಲಕ್ಕಿಂತ ಮೊದಲು ಬಂದ ಫಲಿತಾಂಶ ಅಚ್ಚರಿ ಮೂಡಿಸಿತು. ಕುತೂಹಲವನ್ನು ತಣ್ಣಗಾಗಿ ಸಿತು. ತಾಲೂಕಿನ ವೈಲವಾಡಾ ಗ್ರಾಪಂ ಅಧ್ಯಕ್ಷೆಯಾಗಿದ್ದ ರುಕ್ಮಾ ವಿನೋದ ಹುಲುಸ್ವಾರ ಇವರ ತಂಗಿ ದೀಪಾ ಶೇಷು ಹುಲುಸ್ವಾರ ಎದುರು ಹೀನಾಯ ಸೋಲು ಕಂಡರು. ದೀಪಾ ಅವರಿಗೆ ಇದು ಮೊದಲ ಸ್ಪರ್ಧೆಯಾಗಿದೆ.

Write A Comment