ಕರ್ನಾಟಕ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ ..?

Pinterest LinkedIn Tumblr

Health-In-rainy

ಮನುಷ್ಯನೂ ಸೇರಿದಂತೆ ಪ್ರಾಣಿಗಳ ಆರೋಗ್ಯದ ಮೇಲೆ ಸ್ವಾಭಾವಿಕವಾಗಿ ಬದಲಾಗುವÀ ಋತುಗಳು ಮಹತ್ವದ ಪರಿಣಾಮ ಬೀರುತ್ತವೆ. ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ವಾತಾವರಣದ ಆಧಾರದ ಮೇಲೆ ಒಂದು ವರ್ಷವನ್ನು ಆರು ಋತು ಗಳನ್ನಾಗಿ ವಿಭಾಗಿಸಲಾಗಿದೆ. ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ, ಆಹಾರ ವಿಹಾರ, ಆಚಾರ, ಔಷಧಿಗಳ ವಿಚಾರದಲ್ಲಿ ಪ್ರತಿ ಋತುವಿನಲ್ಲೂ ಅನು ಸರಿಸಬೇಕಾದ ಕೇಂದ್ರ ನಿಯಮಗಳನ್ನು ವೈದ್ಯ ಶಾಸ್ತ್ರದಲ್ಲಿ ಋತುಚರ್ಯೆ ಎಂದು ಕರೆಯಲಾಗಿದೆ. ಆರು ಋತುಗಳಲ್ಲಿ ಪ್ರಸ್ತುತ ವರ್ಷಋತು ಪ್ರಾರಂಭವಾಗಿದೆ. ಜೂನ್ ಮೊದಲ ಅಥವಾ ಕೊನೆಯ ವಾರದಿಂದ ಪ್ರಾರಂಭವಾಗಿ ಸೆಪ್ಟಂಬರ್ ತಿಂಗಳ ಕೊನೆ ವಾರದವರೆಗೆ ಈ ಋತು ಶ್ರಾವಣ ಭಾದ್ರಪದ ಮಾಸಗಳ ನ್ನೊಳಗೊಂಡ ಮಳೆಗಾಲ ಆರೋಗ್ಯದ ದೃಷ್ಟಿಯಿಂದ ಇದು ಒಂದು ಬಹು ಮಹತ್ವದ ಕಾಲ. ಗ್ರೀಷ್ಮ ಋತುವಿನ ಬಿಸಿಲಿನ ಝಳ ದಿಂದ ಬೆಂದು ಬಳಲಿ ಕಂಗಾಲಾಗಿದ್ದ ಭೂಮಂಡಲದ ಜೀವರಾಶಿಗೆ ವರ್ಷ ಋತುವಿನ ಮಳೆ-ತಂಪಾದ ಗಾಳಿ, ಹೊಸ ಚೇತನವನ್ನು ತರುತ್ತವೆ.

ಮಳೆಯಿಂದ ಕೂಡಿದ ಶೀತಗಾಳಿ ವಾತಾವರಣವನ್ನು ತಂಪಾಗಿಸುತ್ತದೆ. ಬೇಸಿಗೆಯ ಬಿಸಿಲಿನಿಂದ ಬತ್ತಿದ ಕೆರೆ, ಕೊಳ್ಳಗಳು, ನದಿ, ಸರೋವರಗಳು ತುಂಬಿ ತುಳುಕಲಾರಂಭಿಸುತ್ತವೆ. ಹೊಲಗದ್ದೆ ಕಾಡುಮೇಡುಗಳಲ್ಲಿ ಸಸ್ಯ ರಾಶಿಯ ಹಸಿರು ಕಣ್ಮನಗಳಿಗೆ ಆನಂದ ವನ್ನುಂಟು ಮಾಡಿ ಮನಸ್ಸಿಗೆ ಮುದ ನೀಡುತ್ತದೆ. ಆದರೆ ದೇಹದ ಒಳಗಿನ ಪ್ರಕ್ರಿಯೆ ತೀರಾ ಭಿನ್ನ. ಶೀತ ಗಾಳಿ ಹಾಗೂ ಮಳೆಯಿಂದ ಒಮ್ಮೆಲೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಮನುಷ್ಯನ ದೇಹದಲ್ಲಿನ ವಾತದೋಷವು ಪ್ರವರ್ಧಮಾನ ಸ್ಥಿತಿಗೆ ಬರುತ್ತದೆ. ಹೊಸದಾಗಿ ಬಿದ್ದ ಮಳೆಯ ನೀರಿನಲ್ಲಿರುವ ಆಮ್ಲ ಗುಣವು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ಇವೆರಡೂ ಸೇರಿ ಕಫ ದೋಷವನ್ನು ಹಾಗೂ ಜೀರ್ಣಾಗ್ನಿಯನ್ನು ಕೆಡಿಸುತ್ತವೆ.

ಇದರಿಂದ ದೇಹದಲ್ಲಿ ಆರೋಗ್ಯದ ಆಧಾರಸ್ಥಂಭಗಳಾದ ತ್ರಿದೋಷ ಗಳು ಮತ್ತು ಜೀರ್ಣಶಕ್ತಿ ಕ್ಷೀಣವಾಗಿ ಶರೀರದ ಧಾತುಗಳಲ್ಲಿನ ಜೈವಿಕಕ್ರಿಯೆಗಳು ಸಮತೋಲನ ಕಳೆದುಕೊಳ್ಳುತ್ತವೆ. ಇದರಿಂದ ದೇಹದ ನೈಸರ್ಗಿಕ ಬಲ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ವರ್ಷಋತುವಿನಲ್ಲಿ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಹಾಗೂ ವಿವಿಧ ಬಗೆಯ ಸಹಜ ವಾತ ಕಫ ರೋಗಗಳು ಶರೀರವನ್ನು ಬಾಧಿಸುತ್ತವೆ. ಇದನ್ನು ತಡೆದು ಆರೋಗ್ಯವನ್ನು ರಕ್ಷಿಸಿ ಕೊಳ್ಳಲು ಶರೀರದ ತ್ರಿದೋಷ (ವಾತ, ಪಿತ್ತ ಮತ್ತು ಕಫ)ಗಳು ಹಾಗೂ ಇದರ ಧಾತುಗಳ ಜೈವಿಕ ಕ್ರಿಯೆಯ ಸಮತೋಲವನ್ನು ಕಾಯ್ದುಕೊಳ್ಳುವುದು ಅತಿ ಆವಶ್ಯಕವಾಗಿದೆ. ಈ ಜೈವಿಕ ಸಮತೋಲನವನ್ನು ಕಾಪಾಡಿಕೊಂಡು, ದೇಹದ ಬಲ ಮತ್ತು ಆರೋಗ್ಯವನ್ನು ರಕ್ಷಿಸಿಕೊಳ್ಳಲು ಋತುಚರ್ಯದ ನಿಯಮದಂತೆ ಆಹಾರ ವಿಹಾರಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದುದು ಬಹಳ ಆವಶ್ಯಕ.
ಆಯುರ್ವೇದ ಪ್ರಕಾರ ಯಾರು ಋತುಮಾನಕ್ಕೆ ಅನುಗುಣವಾಗಿ ಆಹಾರ, ವಿಹಾರ, ಆಚಾರ, ಔಷಧಿಗಳನ್ನು ಅಳವಡಿಸಿಕೊಳ್ಳುತ್ತಾರೋ ಅವರ ಆರೋಗ್ಯ ಮತ್ತು ಆಯಸ್ಸು ವೃದ್ಧಿಯಾಗುತ್ತಾ ಹೋಗುತ್ತದೆ ಎಂದು ಸ್ಪಷ್ಟಪಡಿಸಿಲಾಗಿದೆ,  ಈಗ ಮುಂಗಾರು ಮಳೆ ಪ್ರಾರಂಭವಾಗಿದೆ, ಆಗಾಗ ಬರುವ ಮಳೆ, ಮೋಡ ಮುಸುಕಿದ ವಾತಾವರಣ, ತಣ್ಣನೆಯ ಗಾಳಿ ಇರುವುದರಿಂದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ನೀಡಬೇಕು. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಈ ತಂಪು ಹವಾಮಾನದಿಂದ ಕಾಯಿಲೆ ಬರದಂತೆ ತಡೆಯಲು ನೀವು ಮಳೆಯಲ್ಲಿ ನೆನೆಯದಿದ್ದರೆ ಮಾತ್ರ ಸಾಲದು, ಈ ಕೆಳಗಿನ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಒಳ್ಳೆಯದು.

* ಮಳೆಗಾಲದಲ್ಲಿ ಕಾಡುವ ಕಾಯಿಲೆಗಳು :
ಸಾಮಾನ್ಯವಾಗಿ ನಮಗೆ ಮಳೆಗಾಲ ಬಂತೆಂದರೆ ಬರುವ ಯೋಚನೆಗಳೆಂದರೆ ಬಿಸಿ ಬಿಸಿ ಟೀ ಮತ್ತು ಕುರುಕುಲು ತಿಂಡಿಗಳು, ಹಿನ್ನೆಲೆಯಲ್ಲಿ ಹಳೆಯಕಾಲ ಹಾಡುಗಳ ಧ್ವನಿ, ಮತ್ತು ಕಿಟಕಿಯ ಗಾಜಿನ ಮೇಲೆ ಬೀಳುವ ಮಳೆಹನಿಗಳ ಟಪ್-ಟಪ್ ಸಪ್ಪಳ. ಆದರೆ ಇಂತಹ ಸನ್ನಿವೇಶವನ್ನು ಬಿಟ್ಟು ಹೊರಗೆ ಹೆಜ್ಜೆ ಇಟ್ಟರೆ ಸಾಕು, ಈ ಎಲ್ಲ ಮಜಾ ಹೋಗಿ, ಹೊರಗಿನ ಮಳೆ ಮತ್ತು ಚಳಿಯನ್ನು ಎದುರಿಸಬೇಕಾಗುತ್ತದೆ. ಹೀಗೆ ಹೊರಗೆ ಬಂದಾಗ, ಮಳೆಗಾಲದ ಕಾಯಿಲೆಗಳ ಬಗ್ಗೆ ತಿಳಿದಿರಬೇಕು. ಕೆಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸಬಹುದಾದರೂ, ಮಿಕ್ಕ ಕೆಲವು ಪ್ರಾಣಕ್ಕೆ ಅಪಾಯಕಾರಿಯಾಗಬಹುದು. ಮಲೇರಿಯಾ ಮಳೆಗಾಲದ ಎಲ್ಲಾ ಕಾಯಿಲೆಗಳ ಪಟ್ಟಿಯಲ್ಲಿ ಮಲೇರಿಯಾ ಮೊದಲನೇ ಸ್ಥಾನದಲ್ಲಿದೆ. ಹೆಣ್ಣು ಸೊಳ್ಳೆಮಲೇರಿಯಾಕ್ಕೆ ಮುಖ್ಯ ಕಾರಣ. ಈ ಸೊಳ್ಳೆಯು ಸಾಧಾರಣವಾಗಿ ನೀರಿನ ತೊಟ್ಟಿಗಳಲ್ಲಿ, ನೀರುನಿಂತಿರುವ ತಗ್ಗು ಪ್ರದೇಶಗಳಲ್ಲಿ, ಚರಂಡಿಗಳಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ನಿಮ್ಮ ನೀರಿನ ತೊಟ್ಟಿಗಳನ್ನು ಸೊಳ್ಳೆಗಳು ಉತ್ಪತ್ತಿಯಾಗವುದನ್ನು ತಡೆಯಲು ಮತ್ತು ಮಲೇರಿಯಾ ಬರದಂತೆ ನೋಡಿಕೊಳ್ಳಲು ಅಗಿಂದಾಗ್ಗೆ ಸ್ವಚ್ಚಗೊಳಿಸುತ್ತಿರಿ. ಮಲೇರಿಯಾ ಕಾಯಿಲೆಯ ಸಾಧಾರಣ ಲಕ್ಷಣಗಳು ಯಾವುದೆಂದರೆ ಜ್ವರ, ನಡುಗುವುದು, ಸ್ನಾಯು ನೋವು ಮತ್ತು ಬಲಹೀನತೆ.

ಈಗಾಗಲೇ ರಾಜ್ಯಾದ್ಯಂತ ತನ್ನ ಆಟ ಶುರುವಿಟ್ಟುಕೊಂಡ ಡೆಂಗ್ಯೂ ಮಳೆಗಾಲದಲ್ಲಿ ಸೊಳ್ಳೆ ಕಡಿತದಿಂದ ಬರುವ ಕಾಯಿಲೆ. ಡೆಂಗ್ಯೂವಿನ ಸಾಮಾನ್ಯ ಲಕ್ಷಣಗಳು ಜ್ವರ, ದೇಹದ ನೋವು, ಕೀಲು ನೋವು ಮತ್ತು ಗುಳ್ಳೆ. ಸೊಳ್ಳೆ ಈ ಮಳೆಗಾಲದ ಈ ಕಾಯಿಲೆಗೆ ಕಾರಣ. ಸೊಳ್ಳೆಗಳಿಗೆ ಬಲಿಯಾಗದಿರಲು, ಕೀಟನಿವಾರಕ ಬಳಸಿ ಮತ್ತು ನಿಮ್ಮ ಮೈತುಂಬ ನಿಮ್ಮ  ಬಟ್ಟೆಗಳನ್ನು  ಹಾಕಿಕೊಳ್ಳಿರಿ.    ಸಾಮಾನ್ಯವಾಗಿ ವೈರಲï ಜ್ವರವು ಎಲ್ಲಾ ಕಾಲದಲ್ಲಿ ಬಂದರೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವೈರಲï ಜ್ವರದ ಸಾಮಾನ್ಯ ಲಕ್ಷಣಗಳು 3 ರಿಂದ 7 ದಿನಗಳವರೆಗೆ ಶೀತ ಮತ್ತು ಕೆಮ್ಮಿನ ಜೊತೆ ಶುರುವಾಗಿ ಗಂಭೀರ ಜ್ವರ ಬರುವುದು. ಕಾಲರಾ ಮಳೆಗಾಲದ ಮಾರಣಾಂತಿಕ ಕಾಯಿಲೆಯಾಗಿದೆ. ಕಲುಷಿತ ಆಹಾರ ಮತ್ತು ನೀರು ಸೇವನೆಯಿಂದ ಕಾಲರಾ ಬರುತ್ತದೆ. ಇದು ಕಳಪೆ ಮತ್ತು ಅನಾರೋಗ್ಯಕರ ವಾತಾವರಣದಿಂದಲೂ ಬರುತ್ತದೆ. ತೀವ್ರ ಡಯೇರಿಯಾ ಮತ್ತು ಅತಿಸಾರ ಭೇದಿ ಇವುಗಳು ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ಕಾಲರಾವನ್ನು ತಪ್ಪಿಸಲು ಶುಚಿಯಾದ ನೀರು ಕುಡಿಯಬೇಕು ಮತ್ತು ಸರಿಯಾದ ನೈರ್ಮಲ್ಯವನ್ನು ಪಾಲಿಸಬೇಕು.

* ಮಳೆಗಾಲದಲ್ಲಿ ಆಹಾರ ಪದ್ಧತಿ
ಮಳೆಗಾಲದಲ್ಲಿ  ಆರೋಗ್ಯಕರ ಆಹಾರ ಪದ್ಧತಿ ಅತೀ ಮುಖ್ಯ. ಜೀರ್ಣ ಶಕ್ತಿಯನ್ನು.  ಉದ್ದೀಪನಗೊಳಿಸಲು ಸಹಾಯಕವಾಗುವ ಲವಣ(ಉಪ್ಪು), ಆಮ್ಲ (ಹುಳಿ) ಮಧುರ (ಸಿಹಿ) ಹಾಗೂ ಕಟು (ಖಾರ)ರಸಗಳು ಪ್ರಧಾನವಾಗಿರುವ ಸ್ನೇಹ (ಜಿಡ್ಡು)ದಿಂದ ಕೂಡಿದ ಬೆಚ್ಚಗಿರುವ ಆಹಾರವನ್ನು ವಿಶೇಷವಾಗಿ ಸೇವಿಸಬೇಕು. ಆಹಾರವು ಲಘುವಾಗಿ ಅಂದರೆ ಸುಲಭವಾಗಿ ಜೀರ್ಣವಾಗುವಂಥದಾಗಿರಬೇಕು. ಹಳೆಯದಾದ ಅಕ್ಕಿ, ಗೋಧಿ, ಜೋಳ, ರಾಗಿ ಮತ್ತು ಇತರ ಧಾನ್ಯಗಳಿಂದ ತಯಾರಾದ ತುಪ್ಪ ಶುಂಠಿಗಳಿಂದ ಸಂಸ್ಕರಿಸಿದ ಬಿಸಿಯಾದ ಆಹಾರವನ್ನು ಉಪಯೋಗಿಸಬೇಕು. ಮೂಲಂಗಿ, ಹುರುಳಿಕಾಯಿ, ಕ್ಯಾರೆಟ್, ಗೋರಿಕಾಯಿ, ಹೀರೆಕಾಯಿ ಹಾಗೂ ಈ ಋತುಮಾನದಲ್ಲಿ ವಿಶೇಷವಾಗಿ, ಬೆಳೆಯುವ ಸೊಪ್ಪು ಮತ್ತು ಇತರ ಕಾಯಿಪಲ್ಯಗಳು ಉಪಯೋಗ ಒಳ್ಳೆಯದು. ಆಲೂಗಡ್ಡೆ, ಕಡಲೆಗಳು, ಬಟಾಣಿ, ಅವರೆ, ಉದ್ದು, ಮೊಟ್ಟೆ ಮುಂತಾದ ಜೀರ್ಣಕ್ಕೆ ಕಠಿಣವಾದ ಪದಾರ್ಥಗಳನ್ನು ವರ್ಜಿಸಬೇಕು. ಹುರುಳಿ, ತೊಗರಿಬೇಳೆ ಹೆಸರು ಇವುಗಳ ಬಳಕೆ ಹಿತಕರ. ಉಪ್ಪಿನಕಾಯಿ ಬಳಕೆ ಇತರೆ ಋತುಗಳಲ್ಲಿ ನಿಷಿದ್ಧ.
ಸೇಬು, ಮೂಸಂಬಿ, ಅನನಾಸ್, ದಾಳಿಂಬೆ ಮುಂತಾದ ಮಧುರ, ಆಮ್ಲ, ಲವಣ ರಸಗಳುಳ್ಳ ಹಾಗೂ ಈ ಋತುವಿನಲ್ಲಿ ವಿಶೇಷವಾಗಿ ಸಿಗುವ ನೇರಳೆ, ಕವಳೆ, ಮಂಗಳ ಮುಂತಾದ ಹಣ್ಣುಗಳನ್ನು ವಿಶೇಷವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಿತಕರ. ನದಿ, ಕೆರೆ, ಕೊಳಗಳಲ್ಲಿ ಹೊಸದಾಗಿ ಬಿದ್ದ ಮಳೆಯಿಂದ ನೀರು ಕಲುಷಿತವಾಗಿರುತ್ತದೆ. ಆದುದರಿಂದ ಈ ನೀರನ್ನು ಕುಡಿಯಬಾರದು. ಬಾವಿಯ ಅಥವಾ ಯಾವುದೇ ಕುಡಿಯುವ ನೀರನ್ನು ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು.

* ಬಾಧಿಸುವ ಬೀದಿ ತಿಂಡಿಗಳು :
ಬೀದಿ ಬದಿಯ ತಿಂಡಿಗಳನ್ನು ಈ ಸಮಯದಲ್ಲಿ ಆದಷ್ಟು ತಿನ್ನದಿರುವುದು ಒಳ್ಳೆಯದು. ಆದರೆ ಮಳೆಗಾಲದಲ್ಲಿ ಇಂತಹ ತಿಂಡಿಗಳನ್ನು, ಕರಿದ ತಿಂಡಿಗಳನ್ನು ತಿನ್ನಬೇಕೆನಿಸುವುದು ಸಹಜ, ಆದರೆ ಈ ಬೀದಿ ಬದಿಯಲ್ಲಿರುವ ತಿಂಡಿಗಳಲ್ಲಿ ಬ್ಯಾಕ್ಟೀರಿಯಾಗಳು ಕೂರುವುದು ಹೆಚ್ಚು. ಡಯೇರಿಯಾ, ಕಾಲರ ಮುಂತಾದ ರೋಗಗಳು ಕಲ್ಮಶ ನೀರು ಕುಡಿಯುವುದರಿಂದ ಬರುತ್ತದೆ, ಬೀದಿ ಬದಿಯ ಗಾಡಿಗಳಲ್ಲಿ ಸ್ವಲ್ಪ ನೀರು ಇಟ್ಟು ಅದರಲ್ಲಿಯೇ ಪ್ಲೇಟ್ ತೊಳೆದು ಮಸಾಲಪುರಿ, ಪಾನಿಪುರಿ ಕೊಡುತ್ತಿರುತ್ತಾರೆ. ಇಂತಹ ತಿಂಡಿಗಳನ್ನು ತಿಂದರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.

* ತರಕಾರಿ ತಿಂದರೆ ರೋಗಗಳಿಗೆ ತಕರಾರು :
ಹಸಿರು ಸೊಪ್ಪು ಮತ್ತು ಅನೇಕ ಬಗೆಯ ತರಕಾರಿಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವಿಸಬೇಕು. ಈ ತರಕಾರಿಗಳನ್ನು ಕತ್ತರಿಸಿ ಬಿಸಿನೀರಿನಲ್ಲಿ ತೊಳೆದು ನಂತರ ಅಡುಗೆಗೆ ಬಳಸಿದರೆ ಒಳ್ಳೆಯದು. ಮತ್ತು ಮಳೆ ಬರವುದಿಲ್ಲವೆಂದು ಹೊರಗೆ ಹೋಗಿರುತ್ತೇವೆ, ಆಗ ಇದ್ದಕ್ಕಿದ್ದ ಹಾಗೇ ಮಳೆ ಬಂದರೆ ಪೂರ್ತಿ ಒದ್ದೆಯಾಗುತ್ತೇವೆ, ಈ ರೀತಿ ಒದ್ದೆಯಾದರೆ ತಲೆ ಒರೆಸಿ ಸುಮ್ಮನೆ ಕೂರುವ ಬದಲು ಮನೆಗೆ ಬಂದ ಕೂಡಲೇ ನೀರನ್ನು ಬಿಸಿ ಮಾಡಿ ಸ್ನಾನ ಮಾಡಬೇಕು. ಬಟ್ಟೆ ಒದ್ದೆಯಾಗಿದ್ದರೆ ಕೂಡಲೇ ಬದಲಾಯಿಸಬೇಕು.

ಮುನ್ನೆಚ್ಚರಿಕೆ :
* ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ.
* ಸಮತೋಲಿತ ಆಹಾರ ಸೇವಿಸಿ. ಬೇಕರಿ, ಎಣ್ಣೆ . ಪದಾರ್ಥ, ಜಂಕ್‍ಫೂಡ್‍ನಿಂದ ದೂರವಿರಿ.
* ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.
ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.
* ಮಲಗುವಾಗ ಸೊಳ್ಳೆ ಪರದೆ ಅಥವಾ ಬತ್ತಿ ಬಳಸಿ.
* ದ್ರವರೂಪದ ಆಹಾರ ಹೆಚ್ಚು ಸೇವಿಸಿ.
* ಟೈಫಾಯಿಡ್, ಕಾಲಾರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸಿ.
* ಮಳೆ, ಗಾಳಿಗೆ ಮೈಯೊಡ್ಡದಿರಿ. ದೇಹವನ್ನು ಬೆಚ್ಚನೆಯ ಉಡುಪಿನಿಂದ ರಕ್ಷಿಸಿಕೊಳ್ಳಿ. ಆಹಾರ ಸೇವಿಸುವ ಮೊದಲು ಕೈಯನ್ನು ಸ್ವಚ್ಚವಾಗಿ  ತೊಳೆದುಕೊಳ್ಳಿ. ರೋಗ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ವ್ಯಾಯಾಮ ಹಾಗೂ ವಿಶ್ರಾಂತಿ ಪಡೆಯಿರಿ.

Write A Comment