ಕರ್ನಾಟಕ

ಕಾಸು ಖರ್ಚು ಮಾಡದ..ಕಂಜೂಸ್ ಎಂಪಿಗಳು

Pinterest LinkedIn Tumblr

MLCkarnataka

ಬೆಂಗಳೂರು, ಜೂ, 6- ಚುನಾವಣೆಗೂ ಮುನ್ನ ಭರಪೂರ  ಭರವಸೆಗಳನ್ನು ಜನತೆಗೆ ನೀಡುವ ಜನಪ್ರತಿನಿಧಿಗಳು ಗೆದ್ದ ಮೇಲೆ ಅನುದಾನ ಬಳಸಲು ಮೀನಾಮೇಷ ಎಣಿಸುವುದು ಹೊಸದೇನಲ್ಲ. ಕನಿಷ್ಟ ಪಕ್ಷ ಸರ್ಕಾರದ ಸವಲತ್ತುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಕ್ಷೇತ್ರ ಅಭಿವೃದ್ದಿ ಮಾಡಬೇಕೆಂಬ ಜವಬ್ದಾರಿಯನ್ನು ನಾವೇ ಆಯ್ಕೆ ಮಾಡಿದ ಸಂಸದರು ಮರೆತುಬಿಟ್ಟಿದ್ದಾರೆ.

ರಾಜ್ಯದಿಂದ ಆಯ್ಕೆಯಾದ 28 ಸಂಸದರಲ್ಲಿ ಕನಿಷ್ಟ 20 ಸಂಸದರು ತಮ್ಮ ತಮ್ಮ ಕ್ಷೇತ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ನೀಡುವ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಹಿಂದೆ ಬಿದ್ದಿದ್ದಾರೆ. ಮೂವರು ಸಂಸದರು ಮಾತ್ರ ತಮ್ಮ ಅನುದಾನ ಬಳಸಿಕೊಂಡರೆ ಉಳಿದರವರು, ಹೋದ ಪುಟ್ಟ , ಬಂದ ಪುಟ್ಟ  ಎಂಬುದಕ್ಕೆ ಮಾತ್ರ ಸೀಮಿತವಾಗಿದ್ದಾರೆ.

ಪ್ರತಿಯೊಬ್ಬ ಸಂಸದರಿಗೆ ಕೇಂದ್ರ ಸರ್ಕಾರ ಕ್ಷೇತ್ರಗಳ ಅಭಿವೃದ್ಧಿಗಾಗಿ 5 ಕೊಟಿ ಅನುದಾನ ನೀಡುತ್ತದೆ. ಇದರಲ್ಲಿ ಕುಡಿಯುವ ನೀರು, ಚರಂಡಿ, ಶಾಲಾ ಕಟ್ಟಡ ನಿರ್ಮಾಣ, ಬೀದಿ ದೀಪ, ದೇವಸ್ಥಾನಗಳ ಜೀರ್ಣೋದ್ದಾರ, ಬಸ್ ನಿಲ್ದಾಣ, ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಸಂಸದರ  ಜವಬ್ದಾರಿ. ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರಿಗೆ ಕೇಂದ್ರ ಸರ್ಕಾರ ನೀಡುವ  ಈ ಅನುದಾನದ ಸದ್ಬಳಕೆ ಮಾಡಿಕೊಳ್ಳುವ ರಾಜ್ಯಗಳಲ್ಲಿ, ಕರ್ನಾಟಕ ಹಿಂದೆ ಬಿದ್ದಿದೆ. 2014- 2015 ರಲ್ಲಿ ರಾಜ್ಯದ 28 ಸಂಸದರಲ್ಲಿ 20 ಸಂಸದರು ತಮಗೆ ನೀಡುವ ಅನುದಾನ ಬಳಸಲು ಹಿಂದೆ ಬಿದ್ದಿದ್ದಾರೆ. ಅನುದಾನ ಬಳಕೆ ಮಾಡಿಕೊಂಡ ಸಂಸದರ ಪೈಕಿ  ಚಾಮರಾಜನಗರದ ಸಂಸದ ಆರ್. ಕೆ. ಧೃವನಾರಾಯಣ್  ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡದ ನಳೀನ್ ಕುಮಾರ್ ಕಟೀಲ್ ಎರಡನೇ ಸ್ಥಾನ ಮೈಸೂರಿನ ಪ್ರತಾಪ್ ಸಿಂಹ ಮೂರನೇ ಸ್ಥಾನ ಹಾಗೂ ಕಲಬುರಗಿ ಸಂಸದ ಎಂ ಮಲ್ಲಿಕಾರ್ಜುನ ಖರ್ಗೆ ಅವರು ನಾಲ್ಕನೇ ಸ್ಥಾನ ಪಡೆದ ಸಂಸದರಾಗಿದ್ದಾರೆ. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ದಾಖಲೆ ನಿರ್ಮಿಸಿರುವ
ಕೆ.ಎಚ್.ಮುನಿಯಪ್ಪ ಅವರು ಒಂದೇ ಒಂದು ನಯಾಪೈಸೆ ಅನುದಾನ ಬಳಕೆ ಮಾಡಿಕೊಂಡಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅದ್ಯಾಕೋ ಇವರಿಗೆ ಇನ್ನು ಗಾಡಾ ನಿದ್ರೆಯಿಂದ ಎದ್ದಂತೆ ಕಾಣುತ್ತಿಲ್ಲ.

ಸಚಿವರು ಹಿಂದೆ:
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಅನಂತ್‌ಕುಮಾರ್ (ಬೆಂಗಳೂರು ದಕ್ಷಿಣ), ಡಿ.ವಿ.ಸದಾನಂದಗೌಡ (ಬೆಂಗಳೂರು ಉತ್ತರ), ಜಿ.ಎಂ ಸಿದ್ದೇಶ್ವರ್ (ದಾವಣಗೆರೆ) ಕೂಡಾ ಅನುದಾನ ಬಳಕೆ ಮಾಡುವುದರಲ್ಲಿ ಸಾಕಷ್ಟು ಹಿಂದೆ ಇದ್ದಾರೆ. ವಿಶೇಷವೆಂದರೆ ಈ ಮೂವರ ಕ್ಷೇತ್ರಗಳಿಗೆ ತಲಾ ಐದು ಕೋಟಿ ಅನುದಾನ ನಿಗಧಿಯಾಗಿದ್ದರೂ ಒಂದೇ ಒಂದು ಬಿಡಿಗಾಸು ಕೂಡಾ ಬಳಕೆ ಮಾಡಿಲ್ಲ. ಕೇಂದ್ರದ ಅನುದಾನವನ್ನು ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳಿಗೂ ಬಳಕೆ ಮಾಡಿಕೊಳ್ಳಬಹುದು.
ಆದರೆ ಈ ಮೂವರು ಸಚಿವರು ತಮಗೆ  ಮೀಸಲಾಗಿರುವ ಅನುದಾನದಲ್ಲಿ ಒಂದು ರೂಪಾಯಿ ಹಣ ಖರ್ಚು ಮಾಡದೆ ಉದಾಸೀನ ತೋರಿದ್ದಾರೆ. ಕೇಂದ್ರದ ನಿಯಮದಂತೆ ಆಯಾ ವರ್ಷ ನಿಗದಿಪಡಿಸಿದ ಅನುದಾನ ನಿಗದಿತ ಸಮಯದೊಳಗೆ ಖರ್ಚು
ಮಾಡದಿದ್ದರೆ ಹಣ ಕೇಂದ್ರಕ್ಕೆ ವಾಪಸ್ ಹೋಗಲಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಮಗೆ ನಿಗದಿಪಡಿಸಿದ್ದ 5 ಕೋಟಿ ಅನುದಾನದಲ್ಲಿ 3.30 ಕೋಟಿ ಖರ್ಚು ಮಾಡಿದರೆ, ಶಿವಮೊಗ್ಗ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
5 ಕೋಟಿಯಲ್ಲಿ 4 ಕೋಟಿ ಸದ್ಬಳಕೆ ಮಾಡಿದ್ದಾರೆ. ಉಳಿದಂತೆ ತುಮಕೂರಿನ ಮುದ್ದಹನಿಮೇಗೌಡ, ಉಡುಪಿ- ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಬಳ್ಳಾರಿಯ ಶ್ರೀರಾಮುಲು , ರಾಯಚೂರಿನ ರಾಜವೆಂಕಟಪಟ್ಟ  ನಾಯಕ್, ಕೊಪ್ಪಳದ ಕರಡಿ ಸಂಗಣ್ಣ, ಬೀದರ್‌ನ ಮಲ್ಲಿಕಾರ್ಜುನ ಖೂಬ, ಚಿತ್ರದುರ್ಗಾದ ಚಂದ್ರಪ್ಪಸೇರಿದಂತೆ ಬಹುತೇಕ ಸಂಸದರು ಅನುದಾನ ಎಂದರೆ ಅಲರ್ಜಿ ಎಂಬಂತೆ ವರ್ತಿಸಿದ್ದಾರೆ. ರಾಜ್ಯಕ್ಕೆ ನಿಗದಿಮಾಡಿದ್ದ 140 ಕೋಟಿ  ಅನುದಾನದಲ್ಲಿ ಕೇವಲ ಶೇ.16ರಷ್ಟು ಮಾತ್ರ ಖರ್ಚಾಗಿದೆ.
-ವೈ.ಎಸ್. ರವೀಂದ್ರ

Write A Comment