ಕರ್ನಾಟಕ

ವಿದ್ಯುತ್ ಪ್ರಸರಣದಲ್ಲಿ ರಾಜ್ಯ ಕ್ರಾಂತಿಕಾರಿ ಹೆಜ್ಜೆ : ಡಿಕೆಶಿ

Pinterest LinkedIn Tumblr

D.K.Shivakumar

ಬೆಂಗಳೂರು, ಜೂ.6- ದೇಶದಲ್ಲಿ ಪ್ರಪ್ರಥಮ ಬಾರಿಗೆ ಕವಾರ್ಡ್ ಕಂಡಕ್ಟರ್ ಎಂಬ ನೂತನ ತಂತ್ರಜ್ಞಾನವನ್ನು ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಕೈಗಾರಿಕೆಗಳು ಗೃಹ ಮತ್ತು ವಾಣಿಜ್ಯ ಗ್ರಾಹಕರುಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಯನ್ನು

ನಿವಾರಿಸುವ ಸಲುವಾಗಿ ಈ ನೂತನ ತಂತ್ರಜ್ಞಾನವನ್ನು ಪ್ರಸರಣ ಮಾರ್ಗದಲ್ಲಿ ಬಳಸಲಾಗುತ್ತಿದೆ. ಹೊಸ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಅಳವಡಿಸುವ ವೇಳೆ ಈ ಕಾರಿಡಾರ್‌ಗಳಲ್ಲಿ ವಿದ್ಯುತ್  ಸ್ಥಗಿತಗೊಳಿಸಬೇಕಾಗಿತ್ತು. ಈ ನೂತನ ತಂತ್ರಜ್ಞಾನದಿಂದ ವಿದ್ಯುತ್ ಪ್ರಸರಣ ಅಧಿಕಗೊಳಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು. ಯಲಹಂಕ ಪ್ರದೇಶದಲ್ಲಿ 7 ಕಿ.ಮೀ.ಕವಾರ್ಡ್ ಕಂಡಕ್ಟರ್‌ನ್ನು ಅಳವಡಿಸಲಾಗುತ್ತಿದೆ. ಹಳೆಯ ತಂತ್ರಜ್ಞಾನಕ್ಕೆ ಹೋಲಿಸಿದರೆ ಇದರ ವೆಚ್ಚ ತುಂಬಾ ಕಡಿಮೆ. ಈ ತಂತ್ರಜ್ಞಾನದಲ್ಲಿ ಅಳವಡಿಸಲಾಗಿರುವ ಕೇಬಲ್‌ಗಳನ್ನು ಸ್ವೀಡನ್ ದೇಶದಿಂದ ಖರೀದಿಸಲಾಗುತ್ತಿದೆ. ಸ್ವೀಡನ್‌ನಲ್ಲಿ ಈ ವಾಹಕ ಬಳಸಿ 600 ಕಿ.ಮೀ.ಉದ್ದದ ವಿದ್ಯುತ್ ಪ್ರಸರಣ ಮಾರ್ಗವನ್ನುನಿರ್ಮಿಸಲಾಗಿದೆ. ನಾರ್ವೆ ದೇಶದಲ್ಲೂ ಕೂಡ ಈ ತಂತ್ರಜ್ಞಾನ ಯಶಸ್ವಿಯಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ನಗರದ ಹೊರವಲಯದ ಚಿಕ್ಕಬೆಟ್ಟಹಳ್ಳಿಯಲ್ಲಿ 220/66 ಕೆ.ವಿ. ಮಲ್ಟೀಸರ್ಕ್ಯೂಟ್, ಮಲ್ಟಿ ವೋಲ್ಟೇಜ್ ಪ್ರಸರಣ ಮಾರ್ಗವನ್ನು ನಿರ್ಮಾಣಕಾರ್ಯ ಮಾಡಲಾಗುತ್ತಿದೆ. ಇನ್ನು 3 ತಿಂಗಳಲ್ಲಿ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಸಾಮಾನ್ಯವಾಗಿ 66 ಕೆ.ವಿ ಪ್ರಸರಣ ಮಾರ್ಗದ ಕಾರಿಡಾರ್ ಅಗಲವು 18 ಮೀಟರ್‌ನಷ್ಟಿರುತ್ತದೆ. ಟವರ್‌ನ ಮಧ್ಯ ಭಾಗದಿಂದ ಎರಡೂ ಬದಿಗಳಲ್ಲಿ 9 ಮೀ.ನಷ್ಟಿರುತ್ತದೆ. ಸ್ಥಳಾವಕಾಶದ ಅಭಾವವಿರುವುದರಿಂದ ಈ ನೂತನ ತಂತ್ರಜ್ಞಾನದ ಬಳಕೆ ಅನುಕೂಲವಾಗಿರುತ್ತದೆ. ಕವಾರ್ಡ್ ಕಂಡಕ್ಟರ್ 11 ಮೀ. ಎತ್ತರದ ಪಿಎಸ್‌ಸಿ ಕಂಬಗಳ ಮೇಲೆ 5 ಮೀ. ಕಾರಿಡಾರ್‌ನಲ್ಲಿ ಅಳವಡಿಸಲಾಗುತ್ತಿದೆ. 66 ಕೆ.ವಿ ಪ್ರಸರಣ ಮಾರ್ಗ ಇರುವ ಕಡೆ ತಾತ್ಕಾಲಿಕ ಮಾರ್ಗವನ್ನು ಒಂದು ಬಾರಿಗೆ ಸುಮಾರು 1.5 ಕಿ.ಮೀ.ದೂರಕ್ಕೆ ನಿರ್ಮಿಸಲಾಗುವುದು ಎಂದರು.
ಹಾಲಿ ಇರುವ 66 ಕೆ.ವಿ ಮಾರ್ಗವನ್ನು ಇರುವ ಕಾರಿಡಾರ್ ಮಾರ್ಗಕ್ಕೆ ಹೊಸ ಮಾರ್ಗವನ್ನು ನಿರ್ಮಿಸಲಾಗುವುದು. ಇದು ಮುಗಿದ ಮೇಲೆ 220/66 ಕೆ.ವಿ ಮಾರ್ಗವನ್ನು ಪ್ರಾರಂಭಿಸಿ ಮುಂದಿನ ಭಾಗದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

66ಕೆ.ವಿ ಪ್ರಸರಣದ ಈ ಕಾಮಗಾರಿಗೆ 2.28 ಕೋಟಿ ರೂ. ವೆಚ್ಚವಾಗಲಿದ್ದು, ಸುರಂಗಮಾರ್ಗದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ 1 ಕಿ.ಮೀ.ಗೆ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ. ಈ ತಂತ್ರಜ್ಞಾನದಿಂದ ಕಿ.ಮೀ.ಗೆ ಕೇವಲ 70 ಲಕ್ಷ ರೂ. ವೆಚ್ಚವಾಗುತ್ತದೆ. ವಿದ್ಯುತ್ ಪ್ರಸರಣ ಅಳವಡಿಕೆ ಮಾರ್ಗದಲ್ಲಿ ಆಗುವ ಅಡಚಣೆ ತಪ್ಪಿಸಲು ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ ಎಂದರು. ಈ ಕೇಬಲ್‌ಗಳು ಪ್ಲಾಸ್ಟಿಕ್‌ನಿಂದ ಕವರ್ ಆಗಿರುವುದರಿಂದ ಯಾವುದೇ ಅಪಾಯವಿಲ್ಲ. ವಿದ್ಯುತ್‌ಚ್ಚಕ್ತಿ ಸರಬರಾಜು ಕಾರ್ಯದಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಪ್ರಸ್ತುತ ಕಾಮಗಾರಿ ರಾತ್ರಿ ವೇಳೆ ನಡೆಯಲಿದೆ. 66 ಕೆವಿ ವಿದ್ಯುತ್‌ನ್ನು 110 ಕೆ.ವಿ ವಿದ್ಯುತ್ತನ್ನಾಗಿ ಪರಿವರ್ತಿಸಲು ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.  ಜಿಗಣಿ, ಊಡಿ ಪ್ರದೇಶದಲ್ಲಿ ಕಾರಿಡಾರ್‌ಗಳನ್ನು ಗುರುತಿಸಲಾಗಿದ್ದು, ಅಲ್ಲೂ ಕೂಡ ಈ ತಂತ್ರಜ್ಞಾನ ಅಳವಡಿಸಲಾಗುವುದು ಎಂದರು.

ವಿದ್ಯುತ್ ಕೊರತೆ ಇಲ್ಲ : ಬರದ ಛಾಯೆ  ಎದುರಾಗಲಿದೆ ಎಂಬ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು, ಮುಂಜಾಗೃತಾ ಕ್ರಮವಾಗಿ 500 ರಿಂದ 600 ಮೆಗಾವ್ಯಾಟ್ ವಿದ್ಯುತ್ ಕರೀದಿಗೆ ಟೆಂಡರ್ ಕರೆಯಲಾಗಿದೆ. ವಿದ್ಯುತ್ ಸಮಸ್ಯೆ ಉದ್ಭವವಾದರೆ ವಿದ್ಯುತ್ ಖರೀದಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ತಾಂತ್ರಿಕ ವಿಭಾಗದ ನಿರ್ದೇಶಕ ಸುಮಂತ್ ಮತ್ತಿತರರು ಇದ್ದರು.

Write A Comment