ಕರ್ನಾಟಕ

ದ್ವೇಷದ ಕಾರಣಕ್ಕೆ ಕುಖ್ಯಾತ ರೌಡಿ ಟಿ.ಸಿ.ರಾಜ ಬರ್ಬರ ಹತ್ಯೆ

Pinterest LinkedIn Tumblr

222

ಬೆಂಗಳೂರು: ಚಿಕಿತ್ಸೆ ಪಡೆಯಲು ಶುಕ್ರವಾರ ಮಲ್ಲತ್ತಹಳ್ಳಿ ಬಸ್ ನಿಲ್ದಾಣ ಸಮೀಪದ ಕ್ಲಿನಿಕ್‌ಗೆ ತೆರಳಿದ್ದ ಕುಖ್ಯಾತ ರೌಡಿ ಟಿ.ಸಿ.ರಾಜ (42) ಎಂಬಾತನನ್ನು ದುಷ್ಕರ್ಮಿಗಳು ಮುಚ್ಚು–ಲಾಂಗುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಅಲ್ಲದೇ, ರಾಜನ ರಕ್ಷಣೆಗೆ ಮುಂದಾದ ಆಟೊ ಚಾಲಕ ಸುರೇಶ್‌ನ ಎಡಗೈ ಕತ್ತರಿಸಿ ಹಂತಕರು ಪರಾರಿಯಾಗಿದ್ದಾರೆ. ದ್ವೇಷದ ಕಾರಣಕ್ಕೆ ರೌಡಿ ಡಾಬರ್‌ ಮೂರ್ತಿ ಅಥವಾ ರಾಮನ ತಂಡದ ಸದಸ್ಯರು ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪಾಪರೆಡ್ಡಿಪಾಳ್ಯ ಸಮೀಪದ ಈರಣ್ಣಪಾಳ್ಯ ನಿವಾಸಿಯಾದ ರಾಜ, ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೀಗಾಗಿ ಸ್ನೇಹಿತ ಸುರೇಶ್‌ನ ಆಟೊದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಮಲ್ಲತ್ತಹಳ್ಳಿಯ ನಂದಿ ಕ್ಲಿನಿಕ್‌ಗೆ ಬಂದಿದ್ದ. ಚಿಕಿತ್ಸೆ ಪಡೆದು ಮಾತ್ರೆಗಳನ್ನು ತರಲು ಪಕ್ಕದ ಔಷಧದ ಅಂಗಡಿಗೆ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳ ತಂಡ ಆತನ ಮೇಲೆ ಎರಗಿತು.

ಈ ವೇಳೆ ಸ್ನೇಹಿತನ ರಕ್ಷಣೆಗೆ ಮುಂದಾದ ಸುರೇಶ್‌ ಮೇಲೆ ಮೊದಲು ಹಲ್ಲೆ ನಡೆಸಿದ ದುಷ್ಕರ್ಮಿಗಳು, ನಂತರ ರಾಜನನ್ನು ಕೆಳಗೆ ಬೀಳಿಸಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯರು ಸುರೇಶ್‌ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ, ಕೊಲೆಯತ್ನ, ಡಕಾಯಿತಿ ಸೇರಿದಂತೆ ರಾಜನ ವಿರುದ್ಧ ಜ್ಞಾನಭಾರತಿ, ಚಂದ್ರಾಲೇಔಟ್, ಕಾಮಾಕ್ಷಿಪಾಳ್ಯ, ಆರ್‌ಎಂಸಿ ಯಾರ್ಡ್‌ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 12 ಪ್ರಕರಣ ದಾಖಲಾಗಿವೆ. ರೌಡಿ ಕೊರಂಗು ಕೃಷ್ಣನ ಜತೆ ಸೇರಿಕೊಂಡು ಹಲವು ಅಪರಾಧ ಕೃತ್ಯಗಳನ್ನು ಎಸಗಿದ್ದ ಈತನ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು. ಸದ್ಯ ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದ ರಾಜ, ಯಾವುದೇ ಕೆಲಸಕ್ಕೆ ಹೋಗದೆ ಪತ್ನಿ–ಮಕ್ಕಳ ಜತೆ ನೆಲೆಸಿದ್ದ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಬೆನ್ನಿನಲ್ಲೇ ಸಿಕ್ಕಿಕೊಂಡ ಮಚ್ಚು
ದುಷ್ಕರ್ಮಿಗಳು ಮೊದಲು ರಾಜನ ಮುಖ ಮತ್ತು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕಾಲ್ಕಿತ್ತಿದ್ದರು. ಈ ವೇಳೆ ರಕ್ತದ ಮಡುವಿನಲ್ಲಿ ಆತ ಒದ್ದಾಡುತ್ತಿರುವುದನ್ನು ಕಂಡು ಪುನಃ ವಾಪಸ್ ಬಂದ ಒಬ್ಬಾತ ಬೆನ್ನಿಗೆ ಮಚ್ಚಿನಿಂದ ಹೊಡೆದು ಓಡಿ ಹೋಗಿದ್ದಾನೆ. ಬೆನ್ನಿನಲ್ಲೇ ಸಿಕ್ಕಿಕೊಂಡಿದ್ದ ಮಚ್ಚನ್ನು ತೆಗೆದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

Write A Comment