ಕರ್ನಾಟಕ

ಮರ ಸಮೀಕ್ಷೆಗೆ ತಜ್ಞರ ಸಮಿತಿ

Pinterest LinkedIn Tumblr

pvec05june15NewsTree01ರಾಜಾಜಿನಗರ 2ನೇ ಹಂತದ 19ನೇ ಮುಖ್ಯರಸ್ತೆಯಲ್ಲಿ ಮನೆಯ ಆವರಣ ಗೋಡೆ ಮೇಲೆ ಮರದ ಕೊಂಬೆ ಬಿದ್ದು ಹಾನಿಯಾಗಿದೆ. ಘಟನೆ ನಡೆದು ವಾರವಾಗುತ್ತಾ ಬಂದರೂ ಪಾಲಿಕೆ ಸಿಬ್ಬಂದಿ ಈವರೆಗೂ ಕೊಂಬೆಗಳನ್ನು ತೆರವುಗೊಳಿಸಿಲ್ಲ

ಬೆಂಗಳೂರು: ‘ನಗರದ ಮರಗಳ ಸಮೀಕ್ಷೆಗೆ ತಜ್ಞರ ಸಮಿತಿಯನ್ನು ರಚಿಸಲಾಗುತ್ತಿದ್ದು, ಆ ಸಮಿತಿ ನೀಡುವ ವರದಿ ಆಧಾರದ ಮೇಲೆ ಮರಗಳ ನಿರ್ವಹಣೆಗೆ ಯೋಜನೆ ರೂಪಿಸಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್‌ ನಾಯಕ್‌ ತಿಳಿಸಿದರು.

ಪಶ್ಚಿಮ ವಲಯದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಹಲವರು ಮಳೆ – ಗಾಳಿಗೆ ಮರಗಳು ಬೀಳುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಈ ಭರವಸೆ ನೀಡಿದರು.

ಪಶ್ಚಿಮ ಕಾರ್ಡ್‌ ರಸ್ತೆ ನಿವಾಸಿ ಸುಶೀಲಾ ವಾಸುದೇವರಾವ್, ‘ನಗರದಲ್ಲಿರುವ ಒಣ ಮರಗಳ ಸಮೀಕ್ಷೆ ಮಾಡಿ ತೆರವುಗೊಳಿಸಬೇಕು’ ಎಂದರು.
‘ಸಂಚಾರಕ್ಕೆ ಅಡ್ಡಿಯಾಗುವ ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳ ರೆಂಬೆಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಈ ಕಾರ್ಯಾಚರಣೆ ನಡೆಯಲಿದೆ. ಆದರೆ, ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಕುರಿತು ಸಾರ್ವಜನಿಕರ ಆಕ್ಷೇಪಣೆ ಆಲಿಸಿದ ಬಳಿಕ ತೀರ್ಮಾನ ಮಾಡಲಾಗುತ್ತದೆ’ ಎಂದು ಆಯುಕ್ತರು ವಿವರಿಸಿದರು.

‘ತಜ್ಞರ ಸಮೀಕ್ಷೆಯಿಂದ ಮರಗಳ ಸ್ಥಿತಿ–ಗತಿ ಗೊತ್ತಾಗಲಿದೆ. ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತದೆ. ಮೆದು ಮರಗಳ ಪ್ರಭೇದಗಳಿಗೆ ಬದಲು ಹೊಂಗೆ, ನೇರಳೆ, ನೆಲ್ಲಿಯಂತಹ ಗಟ್ಟಿ ಮರಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.
ಫುಟ್‌ಪಾತ್ ಒತ್ತುವರಿ, ಬೀದಿನಾಯಿಗಳ ಕಾಟ, ಬೀದಿಗೆ ಬರುವ ಹೋಟೆಲ್‌ ಗಲೀಜು, ವಿಲೇವಾರಿಯಾಗದ ಕಸ ಮೊದಲಾದ ಸಮಸ್ಯೆಗಳ ಬಗೆಗೆ ಸಾರ್ವಜನಿಕರು ತಮ್ಮ ಕುಂದು ಕೊರತೆ ಹೇಳಿಕೊಂಡರು.

ಸ್ಯಾಂಕಿ ಕೆರೆ ಉಳಿಸಿ ಟ್ರಸ್ಟ್‌ನ ಚಿದಾನಂದ ಕುಲಕರ್ಣಿ, ‘ಮಂತ್ರಿ ಸಂಸ್ಥೆಗೆ ಸ್ಯಾಂಕಿ ಕೆರೆ ದಡದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು.

‘ಪ್ರಕರಣ ಕೋರ್ಟ್‌ನಲ್ಲಿದ್ದು, ಅಲ್ಲಿಂದ ಸಿಗುವ ತೀರ್ಪು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಲಕ್ಷ್ಮಿನರಸಯ್ಯ ಉತ್ತರಿಸಿದರು.

‘ಕಳೆದ 55 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ನಾವು ಬಲಾಢ್ಯರಲ್ಲ, ಆದರೆ, ಬೇರೆಯವರು ಮಾರುಕಟ್ಟೆಯಲ್ಲಿ ಎರಡಕ್ಕಿಂತ ಹೆಚ್ಚು ಅಂಗಡಿ ಪಡೆದು ಬಾಡಿಗೆಗೂ ನೀಡಿದ್ದಾರೆ. ನಮಗೂ ಅಂಗಡಿ ಕೊಡಿಸಬೇಕು’ ಎಂದು ಮಲ್ಲೇಶ್ವರ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಕೋರಿದರು.

‘ದಯಾನಂದನಗರ ಕೊಳಚೆ ಪ್ರದೇಶದ ಬಡವರಿಗೆ ಬಿಬಿಎಂಪಿ ಯಾವುದೇ ಸವಲತ್ತು ಕಲ್ಪಿಸಿಲ್ಲ. ಶ್ರೀರಾಂಪುರ, ಭಾಷ್ಯಂ ವೃತ್ತದಲ್ಲಿರುವ ಹೆರಿಗೆ ಆಸ್ಪತ್ರೆಗೆ ಗರ್ಭಿಣಿಯರನ್ನು ಕರೆದೊಯ್ದರೆ ವಾಣಿವಿಲಾಸ ಆಸ್ಪತ್ರೆಗೆ ಸೇರಿಸಲು ಅಲ್ಲಿನ ವೈದ್ಯರು ಪುಕ್ಕಟೆ ಸಲಹೆ ಕೊಡುತ್ತಾರೆ’ ಎಂದು ನಾರಾಯಣ ಸಿಟ್ಟಿನಿಂದ ಹೇಳಿದರು.

ಮಲ್ಲೇಶ್ವರದ ಎಂ.ಡಿ. ಜಯಸಿಂಹ, ‘ಈಗ ಮಾರುಕಟ್ಟೆ ಇರುವ ಪ್ರದೇಶದಲ್ಲಿ 1965ಕ್ಕಿಂತ ಹಿಂದೆ ಬ್ಯಾಸ್ಕೆಟ್‌ಬಾಲ್‌ ಅಂಕಣ ಇತ್ತು. ಮಕ್ಕಳು ಆಡಲು ಈಗ ಅಂಕಣ ಇಲ್ಲ. ನಮ್ಮ ಬಡಾವಣೆಗೆ ಒಂದು ಬ್ಯಾಸ್ಕೆಟ್‌ಬಾಲ್‌ ಅಂಕಣ ಬೇಕು’ ಎಂದು ಆಗ್ರಹಿಸಿದರು.
ನಮನ ಪ್ರತಿಷ್ಠಾನದ ಕೃಷ್ಣಮೂರ್ತಿ, ‘ನಮ್ಮದು ಬಿಬಿಎಂಪಿಯಿಂದ ಅನುಮತಿ ಪಡೆದ ಒಣತ್ಯಾಜ್ಯ ಕೇಂದ್ರವಾಗಿದ್ದರೂ ಪೌರಕಾರ್ಮಿಕರು ಬೇರೆಡೆ ಮಾರಾಟ ಮಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉರುಳುತ್ತಿರುವ ಮರ, ಆತಂಕ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಂಡು ಗಣ್ಯರಿಂದ ಕೆಲವು ಸಸಿಗಳನ್ನು ನೆಡಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ನಗರದ ಆಹ್ಲಾದಕರ ಪರಿಸರ ನಿರ್ಮಾಣಕ್ಕೆ ಕಾರಣವಾಗಿದ್ದ ಮರಗಳು ಮಾತ್ರ ಇತ್ತೀಚೆಗೆ ಸಣ್ಣ ಮಳೆ– ಗಾಳಿಗೂ ಬೀಳುತ್ತಿವೆ. ಪರಿಸರ ಪ್ರಿಯರನ್ನು ಈ ವಿದ್ಯಮಾನ ಆತಂಕಕ್ಕೆ ನೂಕಿದೆ. ಅಭಿವೃದ್ಧಿ ನಾಗಾಲೋಟ ಮತ್ತು ಪ್ರಕೃತಿ ವಿಕೋಪ ಎರಡರಿಂದಲೂ ಮರಗಳು ಭರದಿಂದ ಕಣ್ಮರೆಯಾಗುತ್ತಿವೆ ಎಂದು ಅವರು ಮರುಗುತ್ತಾರೆ. ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ನಗರದಲ್ಲಿ ಸದ್ಯ 14.78 ಲಕ್ಷ ಮರಗಳಿವೆಯಂತೆ. ಒಂದೊಂದು ಮಳೆಗೂ ನೂರಾರು ಮರಗಳು ಉರುಳುತ್ತಾ ಹೋದರೆ ಏನು ಗತಿ ಎನ್ನುವುದು ನಾಗರಿಕರ ಆತಂಕವಾಗಿದೆ.

Write A Comment