ಕರ್ನಾಟಕ

ಮದುವೆಗೆ ಬೇಕಾಗಿರುವ ಖರ್ಚನ್ನು ಹೊಂದಿಸಲು ದರೋಡೆ; ಮದುವೆ ಆಮಂತ್ರಣ ಪತ್ರಿಕೆ ಕಳುಹಿಸಿತ್ತು ಜೈಲಿಗೆ

Pinterest LinkedIn Tumblr

madu

ಕುಮಟಾ: ಸದ್ಯದಲ್ಲಿಯೇ ಹಸೆಮಣೆ ಏರಿ ಹೊಸ ಜೀವನವನ್ನು ಪ್ರಾರಂಭಿಸುವ ಕನಸು ಕಂಡಿದ್ದ ಯುವಕನೋರ್ವ ಅದೇ ಮದುವೆಯ ಕಾರಣಕ್ಕೆ ಅಪರಾಧವೆಸಗಿ ಜೈಲು ಪಾಲಾಗಿದ್ದಾನೆ. ಮದುವೆಗೆ ಬೇಕಾಗಿರುವ ಖರ್ಚನ್ನು ಹೊಂದಿಸಲು ಆತ ದರೋಡೆ ನಡೆಸಿದ್ದಾನೆ. ಆಮಂತ್ರಣ ಪತ್ರಿಕೆ ಮೂಲಕ ಆರೋಪಿಗಳನ್ನು ಗುರುತಿಸಲು ಸಫಲರಾದ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಹೌದು ಇದು ನಡೆದಿರುವುದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ.

ದಿವಗಿ ಗ್ರಾಮದ ಯುವಕ ಪ್ರಶಾಂತ್ ಅಂಬಿಗ( 27) ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಪಕ್ಕದ ಗ್ರಾಮವಾದ ಹೆಗಡೆಯಲ್ಲಿ ವೃದ್ಧೆಯೊಂದರ ಮನೆಯಲ್ಲಿ ದರೋಡೆ ನಡೆಸಿದ್ದಾನೆ.

ಆರೋಪಿ  ಪ್ರಶಾಂತ ಹೆಗಡೆ ಗ್ರಾಮದಲ್ಲಿ ತಮ್ಮ ಪರಿಚಿತರೊಬ್ಬರಿಗೆ ಮದುವೆ ಆಮಂತ್ರಣ ನೀಡಲು ಹೋಗಿದ್ದ. ಆ ಸಮಯದಲ್ಲಿ ಆತನ ಸ್ನೇಹಿತ ವಿವೇಕ್ ಕೂಡ ಜತೆಯಲ್ಲಿದ್ದ. ಪರಿಚಿತರ ಮನೆಗೆ ಬಾಗಿಲು ಹಾಕಿರುವುದನ್ನು ಕಂಡು ಪಕ್ಕದ ಮನೆ ಬಳಿ ಹೋಗಿದ್ದಾನೆ . ಅಲ್ಲಿ  ವೃದ್ಧೆ ದೇವಿ ಮಡಿವಾಳ ( 75) ಎಂಬುವವರು ಒಬ್ಬರೇ ಇರುವುದನ್ನು ನೋಡಿ ತಾವು ಬಂದ ಕಾರಣವನ್ನು ಹೇಳಿ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಬರುವಂತೆ ಮತ್ತು ತಮ್ಮ ಪರಿಚಿತರು ಬಂದ ಮೇಲೆ ಅವರಿಗೆ ವಿಷಯ ತಿಳಿಸುವಂತೆ ಹೇಳಿದ್ದಾರೆ. ನಂತರ ಆಕೆಯ ಜತೆ ಮಾತನಾಡುತ್ತ ಅಲ್ಲೇ ಕುಳಿತಿದ್ದಾರೆ.

ವೃದ್ಧೆ ಮನೆಯಲ್ಲಿ ಒಬ್ಬರೇ ಇರುವುದನ್ನು ಖಚಿತ ಪಡಿಸಿಕೊಂಡ ಗೆಳೆಯರಿಬ್ಬರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಕೆಯದನ್ನು ವಿರೋಧಿಸಿದಾಗ ಹಲ್ಲೆ ನಡೆಸಿದ್ದಾರೆ. ತಕ್ಷಣ ವೃದ್ಧೆ ಕಿರುಚಿಕೊಂಡಿದ್ದಾಳೆ. ಗಾಬರಿಯಾದ ಯುವಕರು ಸ್ಥಳದಿಂದ ಪಲಾಯನ ಮಾಡಿದ್ದಾರೆ. ಅಜ್ಜಿಯ ಕೂಗು ಕೇಳಿ ಓಡಿ ಬಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಜ್ಜಿಗೆ ನೀಡಿದ್ದ ಮದುವೆ ಆಮಂತ್ರಣ ಪತ್ರಿಕೆ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮದುವೆ ಖರ್ಚಿಗೆ ಹಣದ ಕೊರತೆ ಇದ್ದುದರಿಂದ ಈ ಕೃತ್ಯವನ್ನೆಸಗಲು ಪ್ರಯತ್ನಿಸಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಹೊಸ ಜೀವನದ ಹೊಂಗನಸು ಕಾಣುತ್ತಿದ್ದ ಮದುಮಗನೀಗ ಮದುವೆ ಮಂಟಪದ ಬದಲು ಜೈಲಿನಲ್ಲಿ ಕುಳಿತುಕೊಂಡಿದ್ದಾನೆ.

Write A Comment