ಮದುವೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯರ ಬೆತ್ತಲೆ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಮ್ಯಾನೇಜರ್ ಒಬ್ಬನಿಗೆ ಧರ್ಮದೇಟು ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಜಿ.ಎಲ್.ಎನ್. ಕನ್ವೆನ್ಷನ್ ಹಾಲ್ ನ ಮ್ಯಾನೇಜರ್ ಮಂಜುನಾಥ್ ಎಂಬಾತ ಇಲ್ಲಿನ ಕಲ್ಯಾಣಮಂಟಪದಲ್ಲಿ ನಿನ್ನೆ ಮದುವೆ ನಡೆಯುತ್ತಿದ್ದಾಗ ಮಹಡಿ ಮೇಲಿಂದ ಹೋಗಿ ಸ್ನಾನ ಕೋಣೆಗೆ ಅಳವಡಿಸಿರುವ ಕಿಟಕಿ ಮೂಲಕ ಮಹಿಳೆಯರು ಸ್ನಾನ ಮಾಡುತ್ತಿದ್ದ ದೃಶ್ಯ ಸೆರೆ ಹಿಡಿಯುತ್ತಿದ್ದ ಎನ್ನಲಾಗಿದ್ದು ಈ ಸಮಯದಲ್ಲಿ ಮಹಿಳೆಯೊಬ್ಬರು ಇದನ್ನು ಕಂಡು ಕೂಗಿಕೊಂಡಿದ್ದು ತಕ್ಷಣ ಈ ಕಾಮುಕ ಅಲ್ಲಿಂದ ಪರಾರಿಯಾಗಿದ್ದ.
ಆದರೆ ಮದುವೆ ಮನೆಯಲ್ಲಿದ್ದವರು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ಇದು ಮ್ಯಾನೇಜರ್ ನದ್ದೇ ಕಿತಾಪತಿ ಎಂಬುದು ಕಂಡುಬಂದಿದ್ದು ತಕ್ಷಣ ಮದುವೆ ಮನೆಯಲ್ಲಿದ್ದ ಸಾರ್ವಜನಿಕರು ಮಂಜುನಾಥ್ ನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಷ್ಟರಲ್ಲಾಗಲೇ ಪೆಟ್ಟು ತಿಂದು ಬೆಕ್ಕಿನ ಮರಿಯಂತಾಗಿದ್ದ ಕಾಮುಕ ಮಂಜುನಾಥ್ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.