ಕರ್ನಾಟಕ

ಡಾ.ಅಂಬರೀಶ್ ಗೆ 63ನೇ ಹುಟ್ಟು ಹಬ್ಬದ ಸಂಭ್ರಮ

Pinterest LinkedIn Tumblr

Ambi-BirthDay

ಬೆಂಗಳೂರು, ಮೇ 29-ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ ಇಂದು 63ನೇ ಹುಟ್ಟು ಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದ ದೊಡ್ಡಣ್ಣನಂತಿರುವ ಅಂಬರೀಶ್ ಅವರ ಹುಟ್ಟು ಹಬ್ಬಕ್ಕೆ ನಿನ್ನೆ ರಾತ್ರಿಯಿಂದಲೇ ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು, ಮಿತ್ರರು ಶುಭ ಕೋರಿದ್ದಾರೆ.

ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಂಡ್ಯದ ದೊಡ್ಡ ಅರಸಿನಕೆರೆಯಲ್ಲಿ ಮತ ಚಲಾಯಿಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ಅಭಿಮಾನಿಗಳು ಅಂಬರೀಶ್ ಆಕಾರದ ಕೇಕ್‌ನೊಂದಿಗೆ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.  ಕರ್ನಾಟಕ ಕರ್ಣ ಖ್ಯಾತಿಯ ಅಂಬರೀಶ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದವರು. ಅವರ ನಾಗರಹಾವು ಚಿತ್ರದಿಂದ ಚಿತ್ರರಂಗಕ್ಕೆ ಪ್ರವೇಶ ಪಡೆದ ಅಂಬರೀಶ್ ನಂತರದಲ್ಲಿ ನಮ್ಮೂರ ಹಮ್ಮೀರ, ಮಂಡ್ಯದ ಗಂಡು, ಅಂತ ಸೇರಿದಂತೆ ವಿಭಿನ್ನ ಬಗೆಯ ಚಿತ್ರಗಳಲ್ಲಿ ವಿಶಿಷ್ಟ ಪಾತ್ರಗಳಿಂದ ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ ತಲೆದೋರುವ ಯಾವುದೇ ಸಮಸ್ಯೆಯನ್ನು ಆಸ್ಥೆ ವಹಿಸಿ ನಿಭಾಯಿಸಿ ಚಿತ್ರರಂಗದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುತ್ತಿದ್ದಾರೆ.

* ಅಂಬಿ ಹುಟ್ಟುಹಬ್ಬಕ್ಕೆ ವಿವಿಧ ಕಾರ್ಯಕ್ರಮ
ಅಖಿಲ ಕರ್ನಾಟಕ ಅಂಬಿ ಅಭಿಮಾನಿಗಳ ಸಂಘ, ಪರಿಸರ ರೂರಲ್ ಡೆವೆಲಪ್‌ಮೆಂಟ್ ಸೊಸೈಟಿ, ಕಾಯಕಯೋಗಿ ಪ್ರತಿಷ್ಠಾನ ಇವರ ವತಿಯಿಂದ ವಸತಿ ಸಚಿವ ಅಂಬರೀಶ್‌ರವರ 63ನೆ ಹುಟ್ಟುಹಬ್ಬದ ಪ್ರಯುಕ್ತ ಹೌಸಿಂಗ್‌ಬೋರ್ಡ್‌ನ ಅಂಬರೀಶ್ ಉದ್ಯಾನ, ಕುವೆಂಪುನಗರ ಉದ್ಯಾನ ಅಭಿವೃದ್ಧಿ ಮತ್ತು ಸಸಿ ನೆಡುವ ಕಾರ್ಯಕ್ರಮ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್. ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಶುದ್ಧ ಗಾಳಿ ಅಗತ್ಯ. ಗಿಡ-ಮರಗಳನ್ನು ನೆಟ್ಟು ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹುಟ್ಟುಹಬ್ಬದ ಅಂಗವಾಗಿ ಕಟೌಟ್‌ಗಳಿಗೆ ಕ್ಷೀರಾಭಿಷೇಕ ಮಾಡುವುದನ್ನು ಬಿಟ್ಟು ಗಿಡ ನೆಡುವ ಆರೋಗ್ಯಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಸ್ವಾಸ್ತ್ಯ ಕಾಪಾಡುವುದು ಅಗತ್ಯ ಎಂದ ಅವರು, ಯಾರದ್ದೇ ಹುಟ್ಟುಹಬ್ಬವಾದರೂ ಕನಿಷ್ಠ ಒಂದೊಂದು ಸಸಿ ನೆಟ್ಟು ಪೋಷಿಸಿದಲ್ಲಿ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಮರ-ಗಿಡಗಳನ್ನು ಕಡಿದು ಕಾಂಕ್ರಿಟ್ ಕಾಡುಗಳನ್ನಾಗಿ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.  ಜಿಲ್ಲಾ ಕಾಂಗ್ರೆಸ್ ಸಮಿತಿ ಕೋಶಾಧ್ಯಕ್ಷ ಅಮರಾವತಿ ಚಂದ್ರಶೇಖರ್, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ನಗರಸಭಾ ಸದಸ್ಯರಾದ ಹೊಸಹಳ್ಳಿ ಬೋರೇಗೌಡ, ಸೋಮಶೇಖರ್ ಕೆರಗೋಡು, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್, ಮುಖಂಡರಾದ ಸಿ.ಡಿ. ಗಂಗಾಧರ್, ಜಿ.ಸಿ. ಆನಂದ್, ನಿರ್ಮಲಾ ಚಿಕ್ಕೇಗೌಡ, ಕೆ.ಎಸ್.ರಾಜು, ಸುನೀತಾ, ರಾಜೇಶ್, ಲೋಕೇಶ್, ರವೀಂದ್ರ, ಮಧುಶ್ರೀ, ಶಿವರತ್ನ, ಎಂ.ಜೆ.ಚಿಕ್ಕಣ್ಣ, ಸುಜಾತಮಣಿ, ನಲ್ಲಣ್ಣ, ಗುರುವಮ್ಮ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Write A Comment